Advertisement

ಸಿರಿಧಾನ್ಯಕ್ಕೆ ಬೆಂಬಲ ಬೆಲೆ ಘೋಷಿಸಿ

10:56 AM Dec 31, 2018 | Team Udayavani |

ಚಿತ್ರದುರ್ಗ: ರೈತರು ಬೆಳೆಯುವ ಸಿರಿಧಾನ್ಯ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವ ಮೂಲಕ ಸರ್ಕಾರ ರೈತರಿಗೆ ನೆರವು ನೀಡಬೇಕು ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಹೇಳಿದರು.

Advertisement

ನಗರದ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕೃಷಿ ಇಲಾಖೆ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ನಷ್ಟ ಹೆಚ್ಚಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಬೆಳೆದ ಧಾನ್ಯವನ್ನು ದಾನವಾಗಿ ಕೊಡುತ್ತಿದ್ದ ಕಾಲ ಕಣ್ಮರೆಯಾಗಿದೆ. ಹಿಡಿಯಷ್ಟು ಫಸಲನ್ನೂ ಕಾಣದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರಲ್ಲಿನ ಭಾವನಾತ್ಮಕ ಸಂಬಂಧ ಕಣ್ಮರೆಯಾಗಿದೆ. ಇದಕ್ಕೆ ಕೃಷಿಯಲ್ಲಿನ ನಷ್ಟ, ಸಾಲದ ಹೊರೆಯೇ ಕಾರಣ. ಹೊಲಗಳಲ್ಲಿ ರಾಶಿ ಪೂಜೆ ಮಾಡಿ ಇಲ್ಲದವರಿಗೆ ಉಚಿತವಾಗಿ ದಾನ ಕೊಡುತ್ತಿದ್ದ ರೈತರೇ ಇಂದು ಹಿಡಿ ಅನ್ನಕ್ಕಾಗಿ ಬೇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿ ನೀರು, ವಿದ್ಯುತ್‌, ಕೊಟ್ಟರೆ ಸಾಲ ಮನ್ನಾ ಮಾಡುವ ಅವಶ್ಯಕತೆಯೇ ಇಲ್ಲ. ರೈತರ ಪರವಾಗಿ ಸರ್ಕಾರಗಳು, ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
 
ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಸಿರಿಧಾನ್ಯಗಳ ಬೇಡಿಕೆ ದೇಶ ವಿದೇಶಗಳಲ್ಲಿ ಹೆಚ್ಚಾಗಿದೆ. ಸಿರಿಧಾನ್ಯ ಬೆಳೆಯಲು ಮುಂದಾದರೆ ಹೆಚ್ಚಿನ ಇಳುವರಿ ಸಿಗುತ್ತಿಲ್ಲ. ಮಳೆ ಕಡಿಮೆ ಬೀಳುವ ಜಿಲ್ಲೆಗಳಲ್ಲಿ ಕಡಿಮೆ ನೀರಿನಲ್ಲಿ ಸಿರಿಧಾನ್ಯ ಬೆಳೆಯಬಹುದು. ಅದೇ ರೀತಿ ಮಧ್ಯವರ್ತಿಗಳು ಹೆಚ್ಚಿನ ಬೆಲೆ ನೀಡಿ ಖರೀದಿಸಬೇಕು. ಸಿರಿಧಾನ್ಯ ಸೇವನೆ ಮಾಡುವವರ ಸಂಖ್ಯೆಯೂ ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟರು.

ಚುನಾವಣೆ ಸಂದರ್ಭದಲ್ಲಿ ಮಾತ್ರ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತವೆ. ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದುಡಿಯುವ ರೈತರು ಆತ್ಮಹತ್ಯೆ ಮಾಡಿಕೊಂಡರೆ ಕುಟುಂಬ ಬೀದಿಗೆ ಬೀಳಲಿದೆ ಎಂಬುದನ್ನು ಮರೆಯಬಾರದು. ಫಸಲ್‌ ಬಿಮಾ ಯೋಜನೆಯಿಂದ ಕೆಲವರಿಗೆ ಅನುಕೂಲ, ಮತ್ತೆ ಕೆಲವರಿಗೆ ಅನಾನುಕೂಲ ಆಗುತ್ತಿದೆ. ಇದರಿಂದ ಬಹುತೇಕ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

Advertisement

ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಮಾತನಾಡಿ, ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಬಿಟ್ಟುಹೋಗಬೇಕಿದೆ. ಹಾಗಾಗಿ ಮಣ್ಣಿನ ಸಿರಿಧಾನ್ಯ ಬೆಳೆಯುವುದರಿಂದ ಭೂಮಿಯ ಫಲವತ್ತತೆ ವೃದ್ಧಿಸುತ್ತದೆ. ಜೊತೆಗೆ ಮನುಷ್ಯನ ಆರೋಗ್ಯವಾಗಿರುವುದೇ ಅಲ್ಲದೆ ಸಿರಿಧಾನ್ಯಗಳ ಮೇವು ತಿನ್ನುವ ಜಾನುವಾರುಗಳು ಸಮೃದ್ಧವಾಗಿರುತ್ತದೆ. ಮುಂದಿನ ದಿನಗಳಲ್ಲಿ ಎಲ್ಲರೂ ಸಿರಿಧಾನ್ಯ ಉಪಯೋಗಿಸಬೇಕು. ಆ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಪಿ.ಎನ್‌. ರವೀಂದ್ರ ಮಾತನಾಡಿ, ಸಿರಿಧಾನ್ಯಗಳಲ್ಲಿ ಪೋಷಕಾಂಶ, ನಾರಿನಾಂಶದ ಪ್ರಮಾಣ ಹೆಚ್ಚಾಗಿದ್ದು ಇದರ ಮಹತ್ವ ತಿಳಿದಿಲ್ಲ. ಅನಾರೋಗ್ಯದ ವಾತಾವರಣ ಹೋಗಲಾಡಿಸಲು ಸಿರಿಧಾನ್ಯ ಸೇವಿಸಬೇಕು ಎಂದರು. 

ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಎಸ್‌. ಕಳ್ಳೆನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರದುರ್ಗ ತಾಪಂ ಅಧ್ಯಕ್ಷ ಡಿ.ಎಂ. ಲಿಂಗರಾಜು, ಸದಸ್ಯೆ ಚಂದ್ರಕಲಾ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ. ಕೃಪ, ಉಪಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ, ಕೃಷಿಕ ಸಮಾಜದ ನಿರ್ದೇಶಕ ಹನುಮಂತ ರೆಡ್ಡಿ, ರೈತ ಮುಖಂಡರಾದ ನುಲೇನೂರು ಶಂಕರಪ್ಪ, ರೆಡ್ಡಿಹಳ್ಳಿ ವೀರಣ್ಣ, ಕೆ.ಪಿ. ಭೂತಯ್ಯ, ಪ್ರಗತಿಪರ ಕೃಷಿಕರಾದ ಬಿ.ಜಿ. ಕೆರೆ ವೀರಭದ್ರಪ್ಪ, ನಿರ್ಮಲಾ, ನಿಟ್ಟೂರು ಸರೋಜಮ್ಮ, ಶಿವಮೊಗ್ಗದ ಸಹ ಸಂಶೋಧನಾ ನಿರ್ದೇಶಕ ಜಂಗಂಡಿ, ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ| ಶಶಿಕಲಾಬಾಯಿ ಮತ್ತಿತರರು ಇದ್ದರು.

ಜಿಲ್ಲೆ ನಿರಂತರ ಬರಗಾಲಕ್ಕೆ ತುತ್ತಾಗುತ್ತಿದೆ. ಆದ್ದರಿಂದ ಕಡಿಮೆ ಖರ್ಚಿನಲ್ಲಿ ಆರೋಗ್ಯಪೂರ್ಣ ಸಿರಿಧಾನ್ಯ ಬೆಳೆಯಲು ಮುಂದಾಗಬೇಕು. ಮನುಷ್ಯನಿಗೆ ಉತ್ತಮ ಆರೋಗ್ಯ ಬೇಕು ಎಂದಾದರೆ ಸಿರಿಧಾನ್ಯವನ್ನು ಹೆಚ್ಚೆಚ್ಚು ಬಳಸಬೇಕು. ದೇಶ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ಬದಲಾಗಿ ನಮ್ಮಲ್ಲೇ ಹೆಚ್ಚು ಬೆಳೆಯುವ ಸಿರಿಧಾನ್ಯಗಳಿಗೆ ಹೆಚ್ಚಿನ ಬೆಲೆ ನೀಡಬೇಕು.  
 ಸೌಭಾಗ್ಯ ಬಸವರಾಜನ್‌, ಜಿಪಂ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next