Advertisement

ಶೀಘ್ರ ಬರಪೀಡಿತ ತಾಲೂಕುಗಳ ಘೋಷಣೆ 

06:00 AM Dec 20, 2018 | Team Udayavani |

ವಿಧಾನಸಭೆ: ಡಿಸೆಂಬರ್‌ 31ರ ನಂತರ ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾದ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್‌ .ವಿ. ದೇಶಪಾಂಡೆ ತಿಳಿಸಿದ್ದಾರೆ. ಬರ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಮುಂಗಾರು ಹಂಗಾಮಿನಲ್ಲಿ 100 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಹಿಂಗಾರು ಹಂಗಾಮಿನಲ್ಲಿಯೂ ಮಳೆಯ ಕೊರತೆಯಿಂದ ಬರಪೀಡಿತ ತಾಲೂಕುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದ್ದು, ಡಿ.31ರ ನಂತರ ಹಿಂಗಾರು ಹಂಗಾಮಿನ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುವುದು ಎಂದು ಹೇಳಿದರು. 

Advertisement

ರಾಜ್ಯದಲ್ಲಿ 2001ರಿಂದ 2018ರವರೆಗೆ ನಾಲ್ಕು ವರ್ಷ ಹೊರತುಪಡಿಸಿ 14 ವರ್ಷ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಬರಪೀಡಿತ ತಾಲೂಕುಗಳ ಘೋಷಣೆಗೆ ಕೇಂದ್ರ ಸರ್ಕಾರವೇ ನಿಯಮ ರೂಪಿಸಿದ್ದು, ಅದರ ಆಧಾರದಲ್ಲಿಯೇ ಬರ ತಾಲೂಕುಗಳನ್ನು ಘೋಷಣೆ ಮಾಡಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ವಾಡಿಕೆಯಂತೆ 839 ಮಿಲಿ ಮೀಟರ್‌
ಮಳೆಯಾಗಬೇಕು. ಆದರೆ, ಈ ವರ್ಷ 204 ಮಿಲಿ ಮೀಟರ್‌ ಮಾತ್ರ ಮಳೆಯಾಗಿದೆ. ಕರಾವಳಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಂಗಾರು ಹಂಗಾಮಿನಲ್ಲಿ 74.69 ಲಕ್ಷ ಹೆಕ್ಟೇರ್‌ ಬಿತ್ತನೆ ಪ್ರದೇಶವಿದ್ದು, 2018-19ರಲ್ಲಿ 66.36 ಲಕ್ಷ
ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಿಂದ ಆಗಿರುವ ನಷ್ಟದ ಪ್ರಮಾಣವನ್ನು 16662.48 ಕೋಟಿ ರೂ.ಎಂದು ಅಂದಾಜಿಸಲಾಗಿದ್ದು, ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಬರ ಪರಿಹಾರ ಒಂದು ಪಕ್ಷದ ಕೆಲಸವಲ್ಲ. ಬಡವರು, ರೈತರು, ಕಷ್ಟದಲ್ಲಿರುವವರ ರಕ್ಷಣೆಗೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಸಂಪುಟ ಉಪ ಸಮಿತಿಯೂ ನಿರಂತರ ಕೆಲಸ ಮಾಡುತ್ತಿದೆ. ಜಿಲ್ಲಾಧಿಕಾರಿಗಳ ಖಾತೆಗಳಲ್ಲಿಯೂ 226 ಕೋಟಿ ರೂ. ಹಣ ಇಡಲಾಗಿದೆ. ಈಗಾಗಲೇ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಹಣಕಾಸು ಇಲಾಖೆಯಿಂದ 138 ಕೋಟಿ ರೂ.ಹಣ ಬಿಡುಗಡೆ ಮಾಡಲಾಗಿದೆ. ಹಣ ಇದ್ದರೂ ಖರ್ಚು ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕೊಡಗಿನಲ್ಲಿ ಹಣ ವಿತರಣೆ: ಕೊಡಗಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ 7 ಲಕ್ಷ ರೂ.ಪರಿಹಾರ ನೀಡಲಾಗಿದೆ. ಕೇಂದ್ರ ಸರ್ಕಾರ 546 ಕೋಟಿ ರೂ.ಬಿಡುಗಡೆ ಮಾಡಿದ್ದು, ಕಾಫಿ, ಭತ್ತ, ತೋಟಗಾರಿಕಾ ಬೆಳೆ ಹಾನಿಗೊಳಗಾದ ರೈತರಿಗೆ ಒಂದು 
ವಾರದಲ್ಲಿ ಪರಿಹಾರ ವಿತರಿಸಲಾಗುವುದು. ಕೇಂದ್ರದಿಂದ ಎಸ್‌ಡಿಆರ್‌ಎಫ್ ನಿಧಿಯಿಂದ ರಾಜ್ಯಕ್ಕೆ ಬರುವ ಅನುದಾನದಲ್ಲಿ ಅನ್ಯಾಯವಾಗಿದೆ. ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಪರಿಹಾರ ನೀಡಿ ರಾಜ್ಯಕ್ಕೆ ಅರ್ಧದಷ್ಟು ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದರು. ದೇಶದಲ್ಲಿ 24 ಜಿಲ್ಲೆಗಳು ನಿರಂತರ ಬರಪೀಡಿತ
ಜಿಲ್ಲೆಗಳೆಂದು ಕೇಂದ್ರದ ಸಂಸ್ಥೆ ಗುರುತಿಸಿದ್ದು, ಅದರಲ್ಲಿ ರಾಜ್ಯದ 16 ಜಿಲ್ಲೆಗಳು ಸೇರಿವೆ. 15ನೇ ಹಣಕಾಸು ಆಯೋಗಕ್ಕೆ ರಾಜ್ಯದ ಬರಗಾಲ ಪರಿಸ್ಥಿತಿಯ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಸದಸ್ಯರ ಬಗ್ಗೆ ಸ್ಪೀಕರ್‌ ಗರಂ
ಬರ ಪರಿಸ್ಥಿತಿ ಮೇಲಿನ ಕಂದಾಯ ಸಚಿವರ ಉತ್ತರಕ್ಕೆ ಸ್ಪಷ್ಟೀಕರಣ ಕೇಳಲು ಬಿಜೆಪಿಯ ಎಲ್ಲರೂ ಅವಕಾಶಕ್ಕಾಗಿ ಕೈ ಮೇಲೆತ್ತುತ್ತಿದ್ದರು. ಸಭಾಪತಿ ರಮೇಶ್‌ ಕುಮಾರ್‌ ಹಿರಿತನದ ಆಧಾರದಲ್ಲಿ ಒಬ್ಬೊಬ್ಬರಿಗೆ ಅವಕಾಶ ಕಲ್ಪಿಸಿಕೊಡುವುದಾಗಿ ಹೇಳಿದ್ದರು. ಆದರೂ, ಹಿಂದಿನ ಸಾಲಿನ ಸದಸ್ಯರು ಮೇಲಿಂದ ಮೇಲೆ ಕೈ ಎತ್ತಿದರು. ಅಲ್ಲದೆ, ಸ್ಪಷ್ಟೀಕರಣ ಕೇಳುವ ಬದಲು ತಮ್ಮ ಕ್ಷೇತ್ರಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದರು. ಗ್ರಾಮೀಣಾಭಿವೃಫಿ ಸಚಿವ ಕೃಷ್ಣ ಬೈರೆಗೌಡ ಈ ಬಗ್ಗೆ ಸ್ಪಷ್ಟನೆ ನೀಡಿದರೂ, ತಮ್ಮ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಕೇಳಿದ್ದರಿಂದ ಸಿಟ್ಟಾದ ರಮೇಶ್‌ ಕುಮಾರ್‌, ನೀವು ಬಯಸಿದ ಹಾಗೆ ಸದನ ನಡೆಸಲು ಆಗುವುದಿಲ್ಲ. ಯಾವ ಸಂದರ್ಭದಲ್ಲಿ ಏನು ಚರ್ಚೆ ಮಾಡಬೇಕೆಂದು ಕಲಿತುಕೊಳ್ಳಿ. ನಿಮಗೆ ಕನ್ನಡ ಅರ್ಥ ಆಗುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

Advertisement

ಸಂಪುಟ ಉಪ ಸಮಿತಿ ನಿರ್ಣಯಗಳು
ಜನರು ಗುಳೆ ಹೋಗುವುದನ್ನು ತಡೆಯುವುದು. ಬಯಸಿದವರಿಗೆ ಉದ್ಯೋಗ ಒದಗಿಸುವುದು.
ಬ ರಪೀಡಿತ ತಾಲೂಕುಗಳಿಗೆ ಕುಡಿಯುವ ನೀರಿಗಾಗಿ ಹೆಚ್ಚುವರಿ 50 ಲಕ್ಷ ರೂ.ಹಣ ಮಂಜೂರು ಮಾಡುವುದು.
ಮೇವಿನ ಸಮಸ್ಯೆ ಬಗೆಹರಿಸಲು 10 ಕೋಟಿ ರೂ.ಮಂಜೂರು ಮಾಡುವುದು.
2 019ರ ಮೇ 31ರವರೆಗೂ ಅಂತಾರಾಜ್ಯ ಮೇವು ಸಾಗಣೆಗೆ ನಿರ್ಬಂಧ. 
ಅಂತರ್‌ಜಿಲ್ಲೆ ವ್ಯಾಪ್ತಿಯಲ್ಲಿ ಮೇವು ಸಾಗಾಣಿಕೆಗೆ ಅನುಮತಿ. 
ಡಿ.31ರೊಳಗೆ ಹಿಂಗಾರು ಬರಪೀಡಿತ ಜಿಲ್ಲೆಗಳ ಘೋಷಣೆ.
ಶಾಶ್ವತ ಪರಿಹಾರ ಕಂಡುಕೊಳ್ಳಲು ತಜ್ಞರ ಸಮಿತಿ ರಚನೆಗೆ ನಿರ್ಧಾರ.

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ಹಿಂದಿನ ಅವಧಿಯಲ್ಲಿ ನೀರು ಸರಬರಾಜು ಮಾಡಿದವರಿಗೆ ಬಾಕಿ ಹಣ ನೀಡಿಲ್ಲ. ಮೇವು ಕೇಂದ್ರ, ಗೋಶಾಲೆ ತೆರೆದಿಲ್ಲ. ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಿದ್ದು, ರಾಜ್ಯ ಸರ್ಕಾರ ಯಾರಿಗೆ ನೀಡಿದೆ ಎಂದು ಗೊತ್ತಿಲ್ಲ.
● ಯಡಿಯೂರಪ್ಪ, ಪ್ರತಿಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next