ಕಲಬುರಗಿ: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೂ ಮಾ.31ರವರೆಗೆ ರಜೆ ಘೋಷಿಸಲಾಗಿದೆ.
ಕಲಬುರಗಿಯಲ್ಲಿ ಕೊರೊನಾ ಸೋಂಕಿಗೆ ಮೊದಲ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾರಣ ಎಲ್ಲ ತರಗತಿಗಳನ್ನು ರದ್ದು ಪಡಿಸಲಾಗಿದೆ ಎಂದು ಶುಕ್ರವಾರ ಕುಲಸಚಿವರು ಪ್ರಕಟಣೆ ಹೊರಡಿಸಿದ್ದಾರೆ.
ಕ್ಯಾಂಪಸ್ ನಿಂದ ಹೊರಡುವಾಗ ವಿದ್ಯಾರ್ಥಿಗಳು ತಮ್ಮ ತಮ್ಮ ವಿಭಾಗದ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು ಹಾಗೂ ಸುರಕ್ಷತೆ ದೃಷ್ಟಿಯಿಂದ ಮರಳಿ ಬರುವಾಗ ತಮ್ಮ ಆರೋಗ್ಯದ ಬಗ್ಗೆ ದೃಢೀಕರಣ ಪ್ರಮಾಣಪತ್ರ ತರಬೇಕೆಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ಕಲಬುರಗಿಯ ಆಳಂದ ತಾಲೂಕಿನ ಕಡಗಂಚಿ ಬಳಿಯಿರುವ ಕೇಂದ್ರೀಯ ವಿವಿಯಲ್ಲಿ ದೇಶದ 21 ರಾಜ್ಯಗಳ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಹಾಗೂ ಕ್ಯಾಂಪಸ್ ನ ಹಾಸ್ಟೆಲ್ ಗಳಲ್ಲಿ ಶೇ.80ರಷ್ಟು ವಿದ್ಯಾರ್ಥಿಗಳು ವಾಸವಿದ್ದಾರೆ.
ಘಟಿಕೋತ್ಸವ ರದ್ದು: ಮಾ.14ರಂದು ಕೇಂದ್ರೀಯ ವಿವಿಯ ಘಟಿಕೋತ್ಸವ ನಿಗದಿಯಾಗಿತ್ತು. ಆದರೆ, ಕೊರೊನಾ ಆತಂಕದಿಂದ ಘಟಿಕೋತ್ಸವವನ್ನೂ ಅನಿರ್ದಿಷ್ಟ ಕಾಲಕ್ಕೆ ಮುಂದೂಡಲಾಗಿದೆ.