Advertisement

ನೇಕಾರರಲ್ಲಿ ಹರ್ಷ ತಂದ ಸಾಲಮನ್ನಾ ಘೋಷಣೆ

08:26 AM Jul 27, 2019 | Suhan S |

ಬಾಗಲಕೋಟೆ: ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯದ ನೇಕಾರರ ಸಾಲಮನ್ನಾ ಘೋಷಣೆ ಮಾಡಿದ್ದು, ನೇಕಾರರ ತವರು ಜಿಲ್ಲೆ ಎಂದೇ ಕರೆಸಿಕೊಳ್ಳುವ ಬಾಗಲಕೋಟೆಯಲ್ಲಿ ಸಂಭ್ರಮ ಮನೆ ಮಾಡಿದೆ.

Advertisement

ರಾಜ್ಯದ 30 ಜಿಲ್ಲೆಗಳ ಪೈಕಿ ಅತಿಹೆಚ್ಚು ನೇಕಾರರಿರುವ ಜಿಲ್ಲೆ ಬಾಗಲಕೋಟೆ. ಜಿಲ್ಲೆಯಲ್ಲಿ ಅಂದಾಜು 40 ಸಾವಿರ ನೇಕಾರರ ಕುಟುಂಬಗಳಿದ್ದು, ಅದರಲ್ಲಿ ಕೈಮಗ್ಗ, ಪಾವರ್‌ಲೂಮ್‌ ನೇಕಾರರಿದ್ದಾರೆ. ಇಲ್ಲಿನ ಇಳಕಲ್ಲ ಸೀರೆ, ಗುಳೇದಗುಡ್ಡದ ಖಣ, ಕಮತಗಿಯ ರೇಷಿಮೆ ಪಟಗಾ, ರಬಕವಿ-ಬನಟ್ಟಿಯ ಖಾದಿ ಬಟ್ಟೆಗಳು ರಾಜ್ಯ ಅಷ್ಟೇ ಅಲ್ಲ ದೇಶ-ವಿದೇಶಗಳಲ್ಲೂ ಖ್ಯಾತಿ ಪಡೆದಿವೆ.

ಹಲವು ವರ್ಷಗಳ ಬೇಡಿಕೆ: ಕಳೆದ ಎರಡು ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನೇಕಾರರ ಸಾಲಮನ್ನಾ ಮಾಡಿದ್ದರು. ಆಗ 50 ಸಾವಿರ ವರೆಗೆ ಮಿತಿ ಹೇರಿದ್ದರು. ಹೀಗಾಗಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದ ನೇಕಾರರಿಗೆ ಪೂರ್ಣ ಪ್ರಮಾಣ ಸಾಲಮನ್ನಾ ಆಗಿರಲಿಲ್ಲ. ಹೀಗಾಗಿ ಒಂದೇ ಅವಧಿಗೆ ನೇಕಾರರ ಸಂಪೂರ್ಣ ಸಾಲಮನ್ನಾ ಮಾಡಿ, ಋಣಮುಕ್ತರನ್ನಾಗಿ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಕೇಳಿ ಬಂದಿತ್ತು.

ಸಿದ್ದರಾಮಯ್ಯ ಅವರು ನೇಕಾರರ ಸಾಲಮನ್ನಾ ಮಾಡಿದ ವೇಳೆ ರಾಜ್ಯದ 16,813 ಸಾವಿರ ಫಲಾನುಭವಿಗಳ 48.42 ಕೋಟಿ (53.54 ಕೋಟಿ ಅನುಮೋದನೆ ಆಗಿತ್ತು. ಆದರೆ, 48.42 ಕೋಟಿ ಬಿಡುಗಡೆ ಆಗಿತ್ತು) ಮೊತ್ತ ಮನ್ನಾ ಆಗಿತ್ತು. ಆಗ ಜಿಲ್ಲೆಯ 14 ಸಾವಿರ ನೇಕಾರರ, ಸುಮಾರು 38ರಿಂದ 40 ಕೋಟಿ ಸಾಲಮನ್ನಾ ಸೌಲಭ್ಯ ಜಿಲ್ಲೆಯ ನೇಕಾರರಿಗೆ ಲಭಿಸಿತ್ತು.

ಬಾಗಲಕೋಟೆಗೆ ಸಿಂಹ ಪಾಲು: ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪ್ರಸ್ತುತ ನೇಕಾರರ 100 ಕೋಟಿ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದು, ಇದರಿಂದ ಜಿಲ್ಲೆಯ ಸುಮಾರು 20 ಸಾವಿರಕ್ಕೂ ಹೆಚ್ಚು ನೇಕಾರ ಕುಟುಂಬಗಳು ಸಾಲಮನ್ನಾ ಸೌಲಭ್ಯ ಪಡೆಯುವ ಅಂದಾಜಿದೆ. ಒಟ್ಟಾರೆ ಸಾಲಮನ್ನಾದಲ್ಲಿ ಈ ಬಾರಿಯೂ ಶೇ.70ರಷ್ಟು ಪಾಲು ಜಿಲ್ಲೆಯ ನೇಕಾರರಿಗೆ ಲಭಿಸಲಿದೆ ಎಂದು ನೇಕಾರರ ಮುಖಂಡರು ಹೇಳಿದ್ದಾರೆ.

Advertisement

ಎಲ್ಲ ಸಾಲಕ್ಕೂ ಅನ್ವಯಿಸಲಿ: ಕೈ ಮಗ್ಗ, ಪಾವರ್‌ಲೂಮ್‌ ನೇಕಾರರ ಜತೆಗೆ ಜಿಲ್ಲೆಯಲ್ಲಿ ಅಸಂಘಟಿತ ನೇಕಾರರಿದ್ದಾರೆ. ಅವರೆಲ್ಲ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಆಗದೇ ಪತ್ತಿನ ಸಹಕಾರಿ ಸಂಘ, ಪಟ್ಟಣ ಬ್ಯಾಂಕ್‌ಗಳು ಸೇರಿ ಇತರೇ ಸಹಕಾರ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಸಾಲಮನ್ನಾದಲ್ಲಿ ನೇಕಾರರ ಎಲ್ಲ ವಿಧದ ಸಾಲಮನ್ನಾ ಆಗಬೇಕು. ಯಾವುದೇ ಷರತ್ತು ವಿಧಿಸದೇ, ನೇಕಾರಿಕೆ ಮಾಡುವ ಪ್ರತಿಯೊಬ್ಬ ಸಾಲಮನ್ನಾ ಯೋಜನೆಯಡಿ ಸೇರಲಿ ಎಂದು ನೇಕಾರರು ಒತ್ತಾಯಿಸಿದ್ದಾರೆ.

ಜಿಲ್ಲೆಯ ನೇಕಾರರ ಮುಖಂಡರೆಲ್ಲ ಸೇರಿ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ನೇಕಾರರ 100 ಕೋಟಿ ಸಾಲಮನ್ನಾ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ತಲಾ 50 ಸಾವಿರದಂತೆ ಒಟ್ಟು 48.42 ಕೋಟಿ ಸಾಲಮನ್ನಾ ಮಾಡಿದ್ದರು. ಈಗ ಯಡಿಯೂರಪ್ಪ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ತಕ್ಷಣ ನೇಕಾರರ ಬಗ್ಗೆ ಕಾಳಜಿ ವಹಿಸಿದ್ದು, ಸಂತಸ ತಂದಿದೆ. ಈ ಯೋಜನೆಯಡಿ ನೇಕಾರರ ಎಲ್ಲ ಹಂತದ ಸಾಲಮನ್ನಾ ಮಾಡಬೇಕು. ಜತೆಗೆ ಬಿಜೆಪಿಯಲ್ಲಿರುವ ನೇಕಾರ ಪ್ರಮುಖರಿಗೆ ರಾಜಕೀಯ ಪ್ರಾಧ್ಯಾನ್ಯತೆ ನೀಡಬೇಕು.• ರವೀಂದ್ರ ಕಲಬುರಗಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next