Advertisement

ಜೂ.1ರಿಂದ ಖಾಸಗಿ ಬಸ್‌ ಆರಂಭಕ್ಕೆ ನಿರ್ಧಾರ

07:51 AM May 25, 2020 | mahesh |

ಮಂಗಳೂರು/ಉಡುಪಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜೂನ್‌ 1ರಿಂದ ಖಾಸಗಿ ಮತ್ತು ಸಿಟಿ ಬಸ್‌ಗಳು ಸಂಚರಿಸಲಿದೆ. ದ.ಕ ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಶೇ.50ರಷ್ಟು ಬಸ್‌ಗಳನ್ನು ರಸ್ತೆಗಿಳಿಸಲು ಮಾಲಕರ ಸಂಘ ನಿರ್ಧರಿಸಿದೆ. ಉಡುಪಿಯಲ್ಲಿ ಮೇ 25ರಿಂದ ಒಂದು ವಾರ ಉಚಿತ ಸಿಟಿ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಜೂ.1ರ ಬಳಿಕ ಹಂತ ಹಂತವಾಗಿ ಬಸ್‌ ರಸ್ತೆಗಿಳಿಯಲು ಸಿಟಿ ಬಸ್‌ ಮಾಲಕರ ಸಂಘ ನಿರ್ಧರಿಸಿದೆ.

Advertisement

ಸಾಮಾನ್ಯ ದಿನಗಳಲ್ಲಿ ಮಂಗಳೂರು ನಗರದಲ್ಲಿ 325 ಸಿಟಿ ಬಸ್‌ಗಳು ವಿವಿಧ ಪ್ರದೇಶಗಳಿಗೆ ತೆರಳುತ್ತಿದ್ದು, ಇದರಲ್ಲಿ ಸುಮಾರು 150 ಬಸ್‌ಗಳನ್ನು ಜೂನ್‌ 1 ರಿಂದ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಬುಧವಾರ ಬಸ್‌ ಮಾಲಕರ ಸಭೆ ನಡೆಯ ಲಿದ್ದು, ಇಲ್ಲಿ ಅಂತಿಮ ನಿರ್ಧಾರ ಹೊರ ಬೀಳಲಿದೆ. ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರು ಪ್ರತಿಕ್ರಿಯಿಸಿ “ಜೂನ್‌ 1 ರಿಂದ ಶೇ.50ರಷ್ಟು ಸಿಟಿ ಬಸ್‌ಗಳು ರಸ್ತೆಗಿಳಿಯಲಿವೆ. ಹೀಗಿದ್ದಾಗ ಒಂದು ರೂಟ್‌ನಲ್ಲಿ ಸರಾಸರಿ 4 ಬಸ್‌ಗಳು ಸಂಚರಿಸಿದಂತಾಗುತ್ತದೆ. ಯಾವ ರೀತಿ ಬಸ್‌ ಕಾರ್ಯಾಚರಣೆ ನಡೆಸಬೇಕು ಎಂಬುವುದರ ಬಗ್ಗೆ ಜಿಲ್ಲಾಡಳಿತದ ಮಾರ್ಗಸೂಚಿ ನಿರೀಕ್ಷೆಯಲ್ಲಿದ್ದೇವೆ’ ಎಂದು ತಿಳಿಸಿದ್ದಾರೆ.

ಉಡುಪಿಯಲ್ಲಿ ಮೇ 25ರಿಂದ ನಗರದ ವಿವಿಧ ಭಾಗಗಳಿಗೆ ಬಸ್‌ ಸಂಚಾರ ಪ್ರಾರಂಭವಾಗಲಿದೆ. ಒಂದು ವಾರ ಉಚಿತ ಸೇವೆ ಇರಲಿದೆ. 15 ನಿಮಿಷಗಳಿಗೆ ಒಂದರಂತೆ ಬಸ್‌ಗಳು ಸಂಚರಿಸಲಿದೆ. ಜೂ.1 ರ ಬಳಿಕ ಹಂತ ಹಂತ ಸಿಟಿ ಹಾಗೂ ಸರ್ವಿಸ್‌ ಬಸ್‌ಗಳು ರಸ್ತೆಗೆ ಇಳಿಯಲಿದೆ ಎಂದು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ, ಕೆನರಾ ಬಸ್‌ ಮಾಲಕರ ಸಂಘದ ಪ್ರ.ಕಾರ್ಯದರ್ಶಿ ಕೆ.ಸುರೇಶ್‌ ನಾಯಕ್‌ ತಿಳಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಅವರು ಈಗಾಗಲೇ ಬಸ್‌ ಮಾಲಕರ ಸಭೆ ಕರೆದು ಸರಕಾರದ ನಿರ್ದೇಶನ ಪ್ರಕಾರ ಬಸ್‌ಗಳನ್ನು ಓಡಿಸಲು ಸೂಚಿಸಿದ್ದಾರೆ.

ಸದ್ಯದಲ್ಲೇ ನರ್ಮ್ ಬಸ್‌ ಸಂಚಾರ
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ಅರುಣ್‌ ಕುಮಾರ್‌ “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಈಗಾಗಲೇ ಮುಡಿಪು ಭಾಗಕ್ಕೆ ನರ್ಮ್ ಬಸ್‌ ಕಾರ್ಯಚರಣೆ ನಡೆಸಲಾಗಿದೆ. ಉಳಿದ ರೂಟ್‌ಗಳಲ್ಲಿ ಯಾವ ರೀತಿ, ಎಷ್ಟು ಬಸ್‌ ಕಾರ್ಯಾಚರಣೆ ನಡೆಸಬೇಕು ಎಂಬುವುದರ ಬಗ್ಗೆ ಒಂದೆರಡು ದಿನಗ
ಳಲ್ಲಿ ತೀರ್ಮಾನಿಸಲಾಗುವುದು’ ಎಂದು ಹೇಳಿದ್ದಾರೆ.

ಸದ್ಯದಲ್ಲೇ ಮಾರ್ಗಸೂಚಿ
ಖಾಸಗಿ ಬಸ್‌ ಓಡಾಟದ ಹಿನ್ನೆಲೆಯಲ್ಲಿ ಆರ್‌ಟಿಒ ಹಾಗೂ ಬಸ್‌ ಮಾಲಕರ ಜೊತೆ ಸಭೆ ನಡೆಸಲಾಗುವುದು. ಬಸ್‌ ಚಾಲಕರು, ನಿರ್ವಾಹಕರು ಹಾಗೂ ಪ್ರಯಾಣಿಕರು ಪಾಲಿಸಬೇಕಾದ ನಿಯಮಾವಳಿಗಳ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು.
– ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next