Advertisement

ಕಾರ್‌ಸ್ಟ್ರೀಟ್‌ ಕಾಲೇಜಿನಲ್ಲಿ ಸಂಧ್ಯಾ ಕಾಲೇಜು ಆರಂಭಕ್ಕೆ ನಿರ್ಧಾರ

08:41 PM Aug 25, 2021 | Team Udayavani |

ಮಹಾನಗರ: ಬೆಳಗ್ಗಿನಿಂದ ಸಂಜೆಯವರೆಗೆ ಉದ್ಯೋಗ ನಿರತರಾ ದವರಿಗೆ ಸಂಜೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವ ಹಾಗೂ ಉನ್ನತ ಶಿಕ್ಷಣದಿಂದ ವಂಚಿತರಾದ ಯುವಜನತೆಗೆ ಶಿಕ್ಷಣ ಪಡೆಯಲು ನೆರವಾಗುವ ಉದ್ದೇಶದಿಂದ ಕಾರ್‌ಸ್ಟ್ರೀಟ್‌ನಲ್ಲಿರುವ ಡಾ| ಪಿ. ದಯಾನಂದ ಪೈ -ಪಿ.ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಿಂದ ಸಂಧ್ಯಾ(ಸಂಜೆ)ಕಾಲೇಜು ಆರಂಭಿಸಲು ಸರಕಾರ ತೀರ್ಮಾನಿಸಿದೆ.

Advertisement

ಶಾಸಕರು ಹಾಗೂ ರಥಬೀದಿಯ ಸರಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್‌ ಅವರ ವಿಶೇಷ ಮುತುವರ್ಜಿಯಿಂದ ಕಾಲೇಜಿನಲ್ಲಿ ಇದೀಗ ಸಂಧ್ಯಾಕಾಲೇಜು ಪರಿಕಲ್ಪನೆ ಜಾರಿಗೆ ಬರುತ್ತಿದೆ. ದುಡಿಯುವ ಕೈಗಳಿಗೆ ಈ ಕಾಲೇಜಿನ ಆವರಣದಲ್ಲಿಯೇ ಉನ್ನತ ಶಿಕ್ಷಣವನ್ನು ಪಡೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ “ಸಂಧ್ಯಾಶಕ್ತಿ’ ಯೋಜನೆಯಡಿ ಸಂಧ್ಯಾಕಾಲೇಜು ರೂಪುಗೊಳ್ಳಲಿದೆ.

ಬಜೆಟ್‌ನಲ್ಲಿ ಘೋಷಣೆ :

ರಾಜ್ಯದ ಆಯ್ದ ಮಹಾನಗರ ಪಾಲಿಕೆಗಳಲ್ಲಿ ಪ್ರಾಯೋಗಿಕವಾಗಿ ಸಂಧ್ಯಾಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ 2021-22ನೇ ಸಾಲಿನ ಆಯವ್ಯಯದಲ್ಲಿ ರಾಜ್ಯಸರಕಾರ ಘೋಷಿಸಿತ್ತು. ಅದರಂತೆ ರಾಜ್ಯದ ಮಂಗಳೂರು ಪಾಲಿಕೆ ಸಹಿತ 11 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಪ್ರಸ್ತುತ ಅಸ್ತಿತ್ವದಲ್ಲಿರುವ ಮೂಲ ಸೌಕರ್ಯಗಳನ್ನು ಉಪಯೋಗಿಸಿಕೊಂಡು ಸಂಧ್ಯಾಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ.

ಬಿಕಾಂ, ಬಿಸಿಎಗೆ ಅವಕಾಶ: 

Advertisement

ವಿದ್ಯಾರ್ಥಿಗಳು ಅತೀ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ, ಉತ್ತಮ ಉದ್ಯೋಗ ವಕಾಶಗಳಿಗೆ ಪೂರಕವಾಗುವ ಕೋರ್ಸ್‌ ಗಳಾದ ಬಿಕಾಂ, ಬಿಸಿಎಗಳನ್ನು ಸಂಧ್ಯಾಶಕ್ತಿ ಯೋಜನೆಯಡಿ ರಾಜ್ಯ 11 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 11 ಸರಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ವಾರ್ಷಿಕ 57 ಲಕ್ಷ ರೂ ವೆಚ್ಚ:

ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಅಧ್ಯಾಪಕರನ್ನು ಪ್ರಾಂಶುಪಾಲರಾಗಿ ನೇಮಿಸಲು ಉದ್ದೇಶಿಸಲಾಗಿದೆ. ಉಳಿದಂತೆ 7 ಬೋಧಕರು ಸಹಿತ ಒಟ್ಟು 13 ಸಿಬಂದಿ ಒದಗಿಸಲು ಅನುಮತಿ ನೀಡುವ ಸಾಧ್ಯತೆ ಯಿದೆ. ಪ್ರತೀ ಕಾಲೇಜಿಗೆ ಒಂದು ವರ್ಷಕ್ಕೆ 57 ಲಕ್ಷ ರೂ. ಅಂದಾಜು ವೆಚ್ಚವಾಗುವ ನಿರೀಕ್ಷೆಯಿದೆ.

ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆಯು ಸಂಧ್ಯಾಶಕ್ತಿ ಯೋಜನೆಯಡಿ ದ.ಕ. ಜಿಲ್ಲೆಯ ವೃತ್ತಿನಿರತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಧ್ಯಾಕಾಲೇಜಿನಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿದೆ. ಅದರಂತೆ ಮಂಗಳೂರಿನ ಡಾ| ಪಿ. ದಯಾನಂದ ಪೈ -ಪಿ . ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸಂಧ್ಯಾಕಾಲೇಜನ್ನು ಆರಂಭಿಸಲು ಸರಕಾರ ಆದೇಶಿಸಿದೆ. ವೃತ್ತಿನಿರತರಾಗಿರುವ ಸಾವಿರಾರು ಮಂದಿಗೆ ಉನ್ನತ ಶಿಕ್ಷಣ ಪಡೆಯಲು ಇದರಿಂದ ಅನುಕೂಲವಾಗಲಿದೆ.-ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next