ಶಿವಮೊಗ್ಗ: ಭದ್ರಾ ಜಲಾಶಯದ (Bhadra Reservoir) ನಾಲೆಗಳಿಗೆ ಇಂದಿನಿಂದ ನೀರು ಬಿಡುಗಡೆ ಮಾಡಲು ಭದ್ರಾ ಕಾಡಾ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಲವಗೊಪ್ಪದ ಭದ್ರಾ ಕಾಡ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭದ್ರಾ ಡ್ಯಾಂ ನ ಬಲ ಮತ್ತು ಎಡ ದಂಡೆಗೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
ಸೋಮವಾರ ರಾತ್ರಿಯಿಂದಲೇ ಡ್ಯಾಂ ಎರಡು ನಾಲೆಗಳಲ್ಲಿ ನೀರು ಹರಿಸಲು ನಿರ್ಧರಿಸಲಾಗಿದೆ. ನೀರಿನ ಲಭ್ಯತೆ ಮತ್ತು ಮಳೆಯ ಪ್ರಮಾಣ ಆಧರಿಸಿ ನೀರು ಬಿಡಲು ತೀರ್ಮಾನ ಮಾಡಲಾಗಿದೆ. ಎರಡು ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲಾಗುತ್ತದೆ.ನೀರು ಬಿಡುಗಡೆಯ ವೇಳಾಪಟ್ಟಿಯನ್ನು ಸಿದ್ಧಪಡಿಸುವಂತೆ ತಜ್ಞರಿಗೆ ಸೂಚನೆ ನೀಡಲಾಗಿದೆ.
ಈ ಬಾರಿ ಡ್ಯಾಂ ಭರ್ತಿಯಾಗುವ ಹಂತ ತಲುಪಿರುವ ಹಿನ್ನೆಲೆಯಲ್ಲಿ ನೀರು ಬಿಡುಗಡೆ ಮಾಡಲಾಗುತ್ತದೆ. ಬೇಸಿಗೆಯಲ್ಲಿ ಅಗತ್ಯ ಬೇಕಾಗುವ ನೀರಿನ ಪ್ರಮಾಣ ಗಮನದಲ್ಲಿಟ್ಟುಕೊಂಡು ನೀರು ಹರಿಸಲಾಗುತ್ತದೆ.
ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಆಹ್ವಾನಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸಚಿವರ ಆಗಮನದ ಸಂದರ್ಭದಲ್ಲಿ ವಿವಿಧ ವಿಷಯಗಳ ಕುರಿತು ಗಮನ ಸೆಳೆಯಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಸರ್ಕಾರದ ಸೂಚನೆ ಅನುಸಾರ ನಾಳೆಯಿಂದ ಅಕ್ರಮವಾಗಿ ನೀರು ಎತ್ತುವುದನ್ನು ತಡೆಗಟ್ಟಲು ಸೂಚನೆ ನೀಡಲಾಗಿದೆ.
ಸಭೆಯಲ್ಲಿ ಹೊನ್ನಾಳಿ, ದಾವಣಗೆರೆ, ಶಾಸಕರು ಸೇರಿದಂತೆ ರೈತ ಮುಖಂಡರು ಭಾಗಿಯಾಗಿದ್ದರು.