ಬೆಂಗಳೂರು: ರಾಜ್ಯಾದ್ಯಂತ ಮರಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಂ.ಸ್ಯಾಂಡ್ ಉತ್ಪಾದನೆಗೆ ಪ್ರೋತ್ಸಾಹ ನಿಯಮ ಸಡಿಲಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಗಣಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆ ಮಾಡಲು ಆಯ್ದ ಭಾಗಗಳಲ್ಲಿ ಮರಳು ಗಣಿಗಾರಿಕೆ ನಡೆಯಲಿದ್ದು ಉತ್ತರ ಕರ್ನಾಟಕ ಭಾಗದ ಹದಿನೈದು ಜಿಲ್ಲೆಗಳಲ್ಲಿ ಹಟ್ಟಿ ಗೋಲ್ಡ್ ಮೈನ್ಸ್ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಕೆ.ಎಸ್.ಡಿ.ಎಂ.ಎಲ್ ಮರಳು ಪೂರೈಕೆ ಆರಂಭಿಸಲಿದೆ ಎಂದು ಹೇಳಿದರು.
ರಾಜ್ಯದ ಬೇಡಿಕೆಯಷ್ಟು ಮರಳನ್ನು ಪೂರೈಕೆ ಮಾಡಬೇಕು ಎಂಬ ಕಾರಣಕ್ಕಾಗಿ ಹಲವು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಜಾರಿಯಲ್ಲಿರುವ ಹಲವು ನಿಯಮಗಳನ್ನು ಸಡಿಲಿಸಿ ಕರಡನ್ನು ಸಿದ್ಧಪಡಿಸಲಾಗಿದ್ದು ಸಚಿವ ಸಂಪುಟದಲ್ಲಿ ಮಂಡಿಸಿ ಅಂಗೀಕಾರ ಪಡೆಯುವುದಾಗಿ ತಿಳಿಸಿದರು.
ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಇನ್ನು ಮುಂದೆ ಆಯಾ ತಾಲೂಕಿನ ಪೌಲಿóಗಳಿಂದಲೇ ಮೊಟ್ಟೆ ಖರೀದಿಸಲು ಸರ್ಕಾರ ನಿರ್ಧರಿಸಿದೆ.
ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಕೆ ಮಾಡುವ ವಿಷಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇನ್ನು ಮುಂದೆ ಮೊಟ್ಟೆ ಖರೀದಿ ಕೆಲಸ ಆಯಾ ತಾಲೂಕುಗಳಲ್ಲೇ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.