ಮುಧೋಳ: ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ತೊಗರಿ ಹಾಗೂ ಕಡಲೆ ಬೇಳೆಯನ್ನು ಬೆಂಬಲ ಬೆಲೆಗೆ ಖರೀದಿ ಮಾಡಲಾಗುತ್ತಿದ್ದು, ರೈತರು ಇದರ ಲಾಭ ಪಡೆಯಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
ನಗರದ ಎಪಿಎಂಸಿಯಲ್ಲಿ ಟಿಎಪಿಸಿಎಂಎಸ್ ಸಂಘದ ಆವರಣದಲ್ಲಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ತೊಗರಿ ಖರೀದಿಗೆ ಬಾಗಲಕೋಟೆ, ಹುನಗುಂದ, ಬಾದಾಮಿ, ಬೀಳಗಿ, ಮುಧೋಳ ಹಾಗೂ ಜಮಖಂಡಿ ತಾಲೂಕು ವ್ಯಾಪ್ತಿಯ ಆಯಾ ಹೋಬಳಿಯಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ. ಪ್ರತಿ ಕ್ವಿಂಟಲ್‌ಗೆ 6100 ದರ ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ 31,174 ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯ ಪ್ರಮಾಣದಂತೆ 50,570.85 ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಲಾಗಿದೆ. ಪ್ರತಿ ಎಕರೆಗೆ 5 ಕ್ವಿಂಟಲ್‌ಗೆ ಗರಿಷ್ಠ 10 ಕ್ವಿಂಟಲ್ ಪ್ರತಿ ರೈತರಿಂದ ತೊಗರಿ ಖರೀದಿಸಲಾಗುವುದು.
ಫೆ.21ರ ವರೆಗೆ ಈಗಾಗಲೇ 9238 ರೈತರಿಂದ ನೋಂದಣಿಯಾಗಿರುತ್ತದೆ. ಫೆ.25ಕ್ಕೆ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗುತ್ತದೆ. ಮಾ.15ರವರೆಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಕಡಲೆ ಖರೀದಿಗೂ ಬೆಂಬಲ ಬೆಲೆ: ಜಿಲ್ಲೆಯಲಿ 24 ಖರೀದಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಪ್ರತಿ ಕ್ವಿಂಟಲ್ ಕಡಲೆ ಬೇಳೆಗೆ 4875 ರೂ. ನಿಗದಿಪಡಿಸಲಾಗಿದೆ. ಪ್ರತಿ 3 ಎಕರೆಗೆ ಗರಿಷ್ಠ 10 ಕ್ವಿಂಟಲ್ ಪ್ರತಿ ರೈತರಿಂದ ಕಡಲೆಕಾಳು ಖರೀದಿಸಲಾಗುವುದು. ಮಾ.13 ರವರೆಗೆ ನೋಂದಣಿಗೆ ಅವಕಾಶವಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು. ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದರು.
ಜಿಪಂ ಸದಸ್ಯ ಭೀಮನಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ವೆಂಕಣ್ಣ ಗಿಡೆಪ್ಪನ್ನವರ, ಕಾನೂನು ವಿವಿ ಸಿಂಡಿಕೆಟ್ ಸದಸ್ಯ ಬಿ.ಎಚ್. ಪಂಚಗಾಂವಿ, ಗುರುರಾಜ ಕಟ್ಟಿ, ಅಪ್ಪಸಿ ಪವಾರ, ಲಕ್ಷ್ಮಣ ಮಾದರ, ಎಸ್.ಎಂ. ಪತ್ತಾರ, ಸಹ ಕಾರ್ಯದರ್ಶಿ ಎಸ್.ಎ. ಸಾಳುಂಕೆ, ರವಿ ನಂದಗಾಂವಿ, ಹಣಮಂತ ತುಳಸಿಗೇರಿ, ದುಂಡಪ್ಪ ಇಟಕನ್ನವರ, ಗುರುಪಾದ ಕುಳಲಿ, ನಾಗಪ್ಪ ಅಂಬಿ, ಬಸವರಾಜ ಮಾನೆ, ಪುಂಡಲಿಕ ಭೋವಿ, ವಕೀಲ ಪಾಟೀಲ, ದೀಪಕ ಸೂರ್ಯವಂಶಿ, ತಹಶೀಲ್ದಾರ್ ಎಸ್.ಬಿ. ಬಾಡಗಿ, ತಾಪಂ ಸಹಾಯಕ ನಿರ್ದೇಶಕ ರಾಜು ವಾರದ, ಡಿವೈಎಸ್ಪಿ ಆರ್.ಕೆ. ಪಾಟೀಲ, ಸಿಪಿಐ ಎಚ್.ಆರ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.