Advertisement

ವರ್ಷದಲ್ಲಿ ಕೋಟಿ ಸಸಿ ನೆಡಲು ತೀರ್ಮಾನ

01:59 PM Jul 23, 2019 | Team Udayavani |

ಮಾಗಡಿ: ಒಂದು ವರ್ಷದಲ್ಲಿ ಒಂದು ಕೋಟಿ ಸಸಿ ನೆಡಲು ರೋಟರಿ ಮಾಗಡಿ ಸೆಂಟ್ರಲ್ ಸಂಸ್ಥೆ ತೀರ್ಮಾನ ಮಾಡಿದೆ ಎಂದು ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಡಿ.ಎನ್‌. ಸಿದ್ದಲಿಂಗಯ್ಯ ತಿಳಿಸಿದರು.

Advertisement

ತಾಲೂಕಿನ ಬೆಳಗುಂಬ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಮಾಗಡಿ ಸೆಂಟ್ರಲ್ನಿಂದ ಉಚಿತವಾಗಿ ಕಂಪ್ಯೂಟರ್‌ ವಿತರಣೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಲಕ ತಾಲೂಕಿನಲ್ಲಿ ಒಂದು ಕೋಟಿ ಸಸಿ ನೆಡಬೇಕೆಂದು ತೀರ್ಮಾನಿಸಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ನಮ್ಮ ಸಂಸ್ಥೆ ಎಲ್ಲಾ ಸದಸ್ಯರ ಮಾರ್ಗದರ್ಶನದಲ್ಲಿ ಮಾಗಡಿಯಲ್ಲಿ ವಿಶೇಷವಾಗಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಾಮಾಜಿಕ ಸೇವೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ: ಸಂಸ್ಥೆಯ ಶೇ.99ರಷ್ಟು ಅನುದಾನವನ್ನು ದೇಶದ ಅಭಿವೃದ್ಧಿಗೆ ವಿನಿಯೋಗಿಸಿಕೊಂಡು ಬರುತ್ತಿದೆ. ಗ್ರಾಮೀಣ ಮಕ್ಕಳೇ ಹೆಚ್ಚು ಸರ್ಕಾರಿ ಶಾಲೆಗೆ ಸೇರಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಕಂಪ್ಯೂಟರ್‌ ಯುಗದಲ್ಲಿಯೂ ಸಹ ಸರ್ಕಾರದ ಸೌಲಭ್ಯ ಹಾಗೂ ಪೋಷಕರ ಸಹಕಾರದ ಕೊರತೆಯಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಂಠಿತಗೊಳ್ಳುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ರೋಟರಿ ಸೆಂಟ್ರಲ್ ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಅಗತ್ಯ ಕಂಪ್ಯೂಟರ್‌ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ. ಪಡೆದುಕೊಳ್ಳಲು ಮುಂದಾಗಬೇಕು. ಈ ಮೂಲಕ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳು ಸಹ ಶಿಸ್ತು, ಶ್ರದ್ಧೆಯಿಂದ ಶಿಕ್ಷಣ ಪಡೆದು ದೇಶಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಯೋಧ, ವಿಜ್ಞಾನಿಗಳಾಗಲು ಪ್ರಯತ್ನಿಸಿ: ರೋಟರಿ ಮಾಗಡಿ ಸೆಂಟ್ರಲ್ ಕಾರ್ಯದರ್ಶಿ ಶಂಕರ್‌ ಮಾತನಾಡಿ, ಗ್ರಾಮೀಣ ಶಾಲಾ ಮಕ್ಕಳು ಉನ್ನತ ಶಿಕ್ಷಣ ಪಡೆದು ವೈದ್ಯ ಮತ್ತು ಎಂಜಿನಿಯರ್‌ಗಳಾದರೆ ಸಾಲದು, ದೇಶ ಸೇವೆ ಮಾಡುವ ಯೋಧ ಮತ್ತು ವಿಜ್ಞಾನಿಗಳಾಗಲು ಪ್ರಯತ್ನಿಸಬೇಕು. ಇದರಿಂದ ವಿನಯತೆ, ಶಿಸ್ತು, ಶ್ರದ್ಧೆ, ಸಂಸ್ಕಾರದ ಜೊತೆಗೆ ದೇಶ ಪ್ರೇಮ, ದೇಶ ಭಕ್ತಿ ತಮ್ಮಲ್ಲಿ ಬರುತ್ತದೆ. ದೇಶಕ್ಕೆ ಅನನ್ಯ ಕೊಡುಗೆ ನೀಡಬೇಕು ಎಂದು ಹೇಳಿದರು.

Advertisement

ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ: ರೋಟರಿ ಸೆಂಟ್ರಲ್ನ ಎಚ್.ಶಿವಕುಮಾರ್‌ ಮಾತನಾಡಿ, ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ತಮ್ಮ ಜ್ಞಾನ ವೃದ್ಧಿಸುತ್ತದೆ. ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ. ದೇಶದ ಮಹಾನ್‌ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವಂತೆ ನಿಮ್ಮ ಚಿಂತನೆಗಳಿದ್ದಾಗ ಮಾತ್ರ ಸಾಧಕರ ಸಾಲಿನಲ್ಲಿ ನಿಲ್ಲಲು ಸಾಧ್ಯವಿದೆ. ಈ ಮಕ್ಕಳು ಶ್ರಮದಿಂದ ಓದಿ ಸಾಧಕರಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಬೆಳಗುಂಬ ಶಾಲೆಗೆ ಕಂಪ್ಯೂಟರನ್ನು ಚಿಕ್ಕೇಗೌಡ ವಿತರಣೆ ಮಾಡಿದರು. ಶಿಕ್ಷಕಿ ಮಮತಾ ಮಾತನಾಡಿದರು. ರೋಟರಿ ಮಾಗಡಿ ಸೆಂಟ್ರಲ್ನ ಮಾಜಿ ಅಧ್ಯಕ್ಷ ಎಂ.ನಾಗೇಶ್‌, ಪ್ರಭಾಕರ್‌, ಪ್ರಕಾಶ್‌, ಗಿರೀಶ್‌, ಕುಮಾರ್‌, ಲೋಕೇಶ್‌, ನಾರಾಯಣಪ್ಪ, ಕ್ಲಷ್ಟರ್‌ ಗೋವಿಂದರಾಜು, ಶಿಕ್ಷಕಿಯರಾದ ಚಿಕ್ಕಗಂಗಮ್ಮ, ನಾಗರಾಜಮ್ಮ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next