ಕಲಬುರಗಿ: ನೀರಾವರಿ ಯೋಜನೆಗಳ ಕಾಮಗಾರಿ ವಿಳಂಬತೆ ತೋರಿರುವ ಗುತ್ತಿಗೆದಾರರಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಕಲಬುರಗಿ ವಿಭಾಗದ ನೀರಾವರಿ ಯೋಜನೆಗಳ ಪ್ರಗತಿಪರ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿ ಮಾಡಿ ಈಗ ಬಾಕಿ ಉಳಿದಿರುವ ಮೊತ್ತದ ಕಾಮಗಾರಿಗೆ ಶೇ. 1 ರಿಂದ 7 ರವರೆಗೆ ದಂಡ ಹಾಕುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ದಂಡ ಹಾಕಿದರೆ ಸಕಾಲಕ್ಕೆ ಕಾಮಗಾರಿ ಮುಗಿಸಲು ಗುತ್ತಿಗೆದಾರರು ಮುಂದಾಗುತ್ತಾರೆ. ಕಾಮಗಾರಿ ವಿಳಂಬತೆಗೆ ದಂಡ ಹಾಕುವುದನ್ನು ರಾಜ್ಯದಾದ್ಯಂತ ಜಾರಿಗೆ ತರಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದರು.
ಇದನ್ನೂ ಓದಿ:ಬಿಸಿಯೂಟದ ಅಕ್ಕಿ ಮಾರಾಟ ಆರೋಪ: ಬೊಮ್ಮನಹಳ್ಳಿ ಶಾಲೆಗೆ ಬಿಇಒ ಭೇಟಿ
ಬಹುಮುಖ್ಯವಾಗಿ ನೀರಾವರಿ ಯೋಜನೆಗಾಗಿ ಭೂಮಿ ಸ್ವಾಧೀನ ಪಡೆದುಕೊಂಡಿದ್ದರೂ ಆರ್ಟಿಸಿಯಲ್ಲಿ ಇನ್ನೂ ರೈತರ ಹೆಸರುಗಳಿವೆ. ಈಗ ಎಲ್ಲ ಭೂಮಿ ಸರ್ಕಾರದ ಹೆಸರಿನಲ್ಲಾಗಲು ಪ್ರಮುಖವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕಾರಜೋಳ ತಿಳಿಸಿದರು.
ಆಲಮಟ್ಟಿ ಅಣೆಕಟ್ಟು ಎತ್ತರ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಗ್ರಾಮಗಳ ಸ್ಥಳಾಂತರ, ಭೂಸ್ವಾಧೀನ ಸೇರಿ ಇತರ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.