Advertisement

ಸವಾಲು ಎದುರಿಸಿ ಸರ್ಕಾರ ಉಳಿಸಿಕೊಳ್ಳಲು ತೀರ್ಮಾನ

09:06 AM Jul 13, 2019 | Sriram |

ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಸರ್ಕಾರಕ್ಕೆ ಎದುರಾಗಿರುವ ಸಂಕಟದ ಬಗ್ಗೆ ಚರ್ಚೆ ನಡೆದು, ಸವಾಲು ಎದುರಿಸಿ ಸರ್ಕಾರ ಉಳಿಸಿಕೊಳ್ಳುವ ತೀರ್ಮಾನ ಮಾಡಲಾಯಿತು.

Advertisement

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಚಿವರಿಗೆ ಧೈರ್ಯ ತುಂಬಿ, ಇದು ಕೊನೆಯ ಸಂಪುಟ ಸಭೆಯಲ್ಲ. ಇನ್ನೂ ಹಲವು ಸಂಪುಟ ಸಭೆ ನಡೆಯಲಿವೆ. ಸರ್ಕಾರ ಹೇಗೆ
ಉಳಿಯುತ್ತದೆ ಎಂಬ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ನನಗೆ ಬಿಡಿ ಎಂದು
ಹೇಳಿದರು ಎಂದು ಹೇಳಲಾಗಿದೆ.

ಬಿಜೆಪಿಯ ಕೇಂದ್ರದ ನಾಯಕರೇ ಈ ಬಾರಿ ಶತಾಯ ಗತಾಯ ಸರ್ಕಾರ ಪತನಕ್ಕೆ ಎಲ್ಲ ರೀತಿಯ ಕಾರ್ಯತಂತ್ರದೊಂದಿಗೆ ಇಳಿದಿದ್ದಾರೆ.

ಈ ಬಾರಿ ಇದನ್ನು ವಿಫ‌ಲಗೊಳಿಸಿದರೆ ಮತ್ತೆ ಅವರು ಪ್ರಯತ್ನಕ್ಕೆ ಮುಂದಾಗುವುದಿಲ್ಲ. ಹೀಗಾಗಿ, ಎಲ್ಲ ರೀತಿಯಲ್ಲೂ ನಾವು ಪ್ರಯತ್ನ ಪಡೋಣ. ಮತ್ತೆ ಶಾಸಕರ್ಯಾರೂ ರಾಜೀನಾಮೆ ಕೊಡದಂತೆ ನೋಡಿಕೊಳ್ಳೋಣ ಎಂದು ಮುಖ್ಯಮಂತ್ರಿಯವರು ಹೇಳಿದರು.

ಕುಮಾರಕೃಪ ಅತಿಥಿ ಗೃಹದಲ್ಲಿ ಕಾಂಗ್ರೆಸ್‌ ನಾಯಕರ ಜತೆ ನಡೆದ ಮಾತುಕತೆ, ಎರಡು ದಿನಗಳಿಂದ ಶಾಸಕರ ಮನವೊಲಿಕೆಗೆ ನಡೆಸುತ್ತಿರುವ ಪ್ರಯತ್ನ ದ ಬಗ್ಗೆ ಸಂಪುಟ
ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ ಅವರು, ಆತಂಕಪಡುವ ಅಗತ್ಯವಿಲ್ಲ. ಅಧಿವೇಶನದಲ್ಲಿ ಸಮರ್ಥವಾಗಿ ಪ್ರತಿಪಕ್ಷವನ್ನು ಎದುರಿಸೋಣ ಎಂದು ಧೈರ್ಯ ತುಂಬಿದರು ಎಂದು ಮೂಲಗಳು ತಿಳಿಸಿವೆ.

Advertisement

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಸಂಪುಟ ಸಭೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆಯಾಯಿತು.

ಬಿಜೆಪಿಯವರದು ಇದು ಮೊದಲನೇ ಪ್ರಯತ್ನವೇನಲ್ಲ. ಆರನೆಯದೋ, ಏಳನೆಯದೋ ಪ್ರಯತ್ನ.ಕೇಂದ್ರ ಸರ್ಕಾರವನ್ನು ಉಪಯೋಗಿಸಿಕೊಂಡು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಿದೆ. ಈ ಬಾರಿ ಹಿಂದಿಗಿಂತ ಸ್ಥಿತಿ ಗಂಭೀರವಾಗಿದೆ ಎಂಬುದು ಗೊತ್ತು. ಆದರೂ ನಾವೆಲ್ಲರೂ ಸವಾಲು ಎದುರಿಸಿ ಸರ್ಕಾರ ಉಳಿಸಿಕೊಳ್ಳುವ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.

ಬಿಜೆಪಿ ಅವಿಶ್ವಾಸ ಮಂಡಿಸಲಿ: ಶುಕ್ರವಾರದ ಅಧಿವೇಶನದಲ್ಲಿ ಮುಖ್ಯಮಂತ್ರಿಯವರು ಬಹುಮತ ಸಾಬೀತು ಮಾಡ್ತಾರಾ ಎಂಬ ಪ್ರಶ್ನೆಗೆ, ಅನಿವಾರ್ಯವಾದರೆ ಮಾಡುತ್ತೇವೆ. ಆದರೆ, ನಮಗಿಂತ ಆತುರ ಬಿಜೆಪಿಯವರಿಗೆ ಇರುವುದರಿಂದ ಅವರು ಬೇಕಾದರೆ ಅವಿಶ್ವಾಸ ನಿರ್ಣಯ ಮಂಡಿಸಲಿ, ನಾವು ಬಹುಮತ ಸಾಬೀತು ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯಪಾಲರು ಬಹುಮತ ಸಾಬೀತಿಗೆ ಸೂಚಿಸಿದರೆ ಎಂಬ ಪ್ರಶ್ನೆಗೆ, ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಅಧಿಕಾರ ಹೊಂದಿದ್ದಾರೆ. ಅವರು ನೀಡುವ ಆದೇಶ ಪಾಲಿಸಲಾಗುವುದು ಎಂದು ಹೇಳಿದರು. ಅಧಿವೇಶನದಲ್ಲಿ ಹಣಕಾಸು ವಿಧೇಯಕಕ್ಕೆ ಆನುಮತಿ ಪಡೆಯಲಿದ್ದೇವೆ.

ಬಿಜೆಪಿಯೂ ಚರ್ಚೆಗೆ ಬರಲಿ, ವಿಧೇಯಕ ಮತಕ್ಕೆ ಹಾಕಲು ಬಿಜೆಪಿ ಒತ್ತಾಯಿಸಿದರೂ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next