Advertisement

Kalaburagi; ರಾಜ್ಯದ ಸಾವಿರ ಐತಿಹಾಸಿಕ ಸ್ಮಾರಕಗಳ ದತ್ತು ಕೊಡಲು ನಿರ್ಧಾರ: ಎಚ್.ಕೆ ಪಾಟೀಲ್

01:57 PM Nov 07, 2023 | Team Udayavani |

ಕಲಬುರಗಿ: ರಾಜ್ಯದ ಸಾವಿರ ಐತಿಹಾಸಿಕ ಸ್ಮಾರಕಗಳನ್ನು ಉದ್ಯಮಿ ಹಾಗೂ ಸಾರ್ವಜನಿಕ ಸಹಕಾರದಲ್ಲಿ ಅಭಿವೃದ್ಧಿಪಡಿಸಲು ಹಾಗೂ ಸಂರಕ್ಷಿಸಲು ಉದ್ದೇಶಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ತಿಳಿಸಿದರು.

Advertisement

ಜಿಲ್ಲೆಯ ಚಿತ್ತಾಪುರ ತಾಲೂಕಿನ ಐತಿಹಾಸಿಕ ತಾಣ ನಾಗಾವಿ ಸ್ಮಾರಕ ಅಭಿವೃದ್ಧಿ ಮತ್ತು ಸಂರಕ್ಷಣೆ ನಿಟ್ಟಿನ ಕಾರ್ಯಕ್ಕೆ ಬೆಂಗಳೂರಿನ ಯುನೈಟೆಡ್ ಆಪ್ ವೇ ಕಂಪನಿಯೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಅವರು, ರಾಜ್ಯದ ಐತಿಹಾಸಿಕ ಹಾಗೂ ಪುರಾತನ ಸ್ಮಾರಕಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಕ್ಕೆ ಉತ್ತೇಜಿಸಲು ಮುಂದಾಗಲಾಗಿದೆ. ಉದ್ಯಮಿಗಳು ಹಾಗೂ ಸಾರ್ವಜನಿಕವಾಗಿ ವಾಗಿ ಆರ್ಥಿಕವಾಗಿ ಸಬಲರಾದವರು ಐತಿಹಾಸಿಕ ಸ್ಥಳ ಅಭಿವೃದ್ಧಿ ಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ದತ್ತು ಪಡೆದು ಅಭಿವೃದ್ಧಿ ಪಡಿಸುವ ಕಾರ್ಯ ಕೈಗೆತ್ತಿಕೊಂಡವರು ಸ್ಮಾರಕಗಳ ಮೇಲೆ ಯಾವುದೇ ಪ್ರಭುತ್ವ ಹೊಂದಿರುವುದಿಲ್ಲ. ಅವರ ನಾಮಫಲಕ ಒಂದು ಮಾತ್ರ ಇರುತ್ತದೆ ಎಂದು ಸಚಿವ ಪಾಟೀಲ್ ವಿವರಣೆ ನೀಡಿದರು.

ಜನಮಾನಸದಿಂದ ದೂರ ಉಳಿದಿರುವ ಅದರಲ್ಲೂ ನಿರ್ಲಕ್ಷ್ಯತನಕ್ಕೆ ಒಳಪಟ್ಟಿರುವ ಸ್ಮಾರಕಗಳು ಬಹಳಷ್ಟಿವೆ.‌ ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿವೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ 5000 ಸ್ಮಾರಕಗಳು ಇವೆ ಎಂದು ಗುರುತಿಸಲಾಗಿದೆ. ಇದರಲ್ಲೇ ಆದ್ಯತೆಗನುಗುಣವಾಗಿ 834 ಸ್ಮಾರಕಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಬಹಳ ಅಗತ್ಯವಾಗಿದೆ ಎಂದು ಹೇಳಿದರು.

ಕೇಂದ್ರಕ್ಕೆ ಪತ್ರ: ರಾಜ್ಯದ ಐತಿಹಾಸಿಕ ಸ್ಮಾರಕಗಳನ್ನು ಅಭಿವೃದ್ಧಿಪಡಿಸುವ ಕಂಪನಿಗಳು, ಉದ್ದಿಮೆದಾರರಿಗೆ ತೆರಿಗೆ ವಿನಾಯಿತಿ ನೀಡುವ ಹಾಗೂ ಸಿಎಸ್ಆರ್ ಫಂಡ ಬಳಕೆಗಳಿಗೆ ಇರುವ ನಿಯಮಾವಳಿ ಸರಳೀಕರಣಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಚಿವ ಎಚ್. ಕೆ ಪಾಟೀಲ್ ತಿಳಿಸಿದರು.

ಐತಿಹಾಸಿಕ ನಾಗಾವಿ ವಿಶ್ವವಿದ್ಯಾಲಯ ಪುನರುಜ್ಜೀವನ: ಜಿಲ್ಲೆ ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ನಾಗಾವಿ ವಿಶ್ವವಿದ್ಯಾಲಯವನ್ನು ಪುನರುಜ್ಜೀವನಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

Advertisement

“ನಮ್ಮ ಸ್ಮಾರಕ” ಯೋಜನೆಯಡಿ ಸ್ಮಾರಕದ ದತ್ತು ಸ್ವೀಕಾರದ ಒಪ್ಪಂದ ಒಳ್ಳೆಯ ಹಾಗೂ ಮಾದರಿಯ ಕಾರ್ಯಕ್ರಮವಾಗಿದೆ. ನಳಂದ, ತಕ್ಷಶಿಲಾ ಮುನ್ನ ಇಲ್ಲಿ ನಾಗಾವಿ ವಿಶ್ವವಿದ್ಯಾಲಯವಿತ್ತು ಎಂಬುದು ಇತಿಹಾಸ, ಇಲ್ಲಿ ದೊರೆತಿರುವ ಶಾಸನದಿಂದ ತಿಳಿದುಬರುತ್ತದೆ. ಈ ಐತಿಹಾಸಿಕ ಶಿಕ್ಷಣ ಕೇಂದ್ರವನ್ನು ಮುಂದಿನ ದಿನದಲ್ಲಿ ಪಿ.ಜಿ. ಸೆಂಟರ್ ಅಥವಾ ಸಂಶೋಧನಾ ಕೇಂದ್ರ ತೆರೆಯುವ‌ ಚಿಂತನೆ ಇದ್ದು, ಇದಕ್ಕಾಗಿ ವಿಶ್ವವಿದ್ಯಾಲಯ ‌ಕ್ಯಾಂಪಸ್ ಆವರಣ ಗುರುತಿಸುವ ಕೆಲಸ‌ ಸಂಶೋಧಕರು ಮಾಡಬೇಕಿದೆ ಎಂದರು.

ಐತಿಹಾಸಿಕ ನಾಗಾವಿ ಸ್ಮಾರಕ ಸಂರಕ್ಷಿಸುವ‌ ದೃಷ್ಟಿಯಿಂದ ಬೆಂಗಳೂರಿನ ಯುನೈಟೆಡ್ ವೇ ಸಂಸ್ಥೆ ಜೊತೆಗೆ ಇಂದಿಲ್ಲಿ ಅರಂಭಿಕ ಹಂತವಾಗಿ ನಾಗಾವಿ ಕ್ಷೇತ್ರದ 60 ಕಂಬದ‌ ಸ್ಮಾರಕ, ನಂದಿ ಬಾವಿ, ಮಲ್ಲಪ್ಪನ ಗುಡಿ ಹಾಗೂ ಮಲ್ಲಿಕಾರ್ಜುನ ದೇವಸ್ಥಾನಗಳನ್ನು ಇಂದಿಲ್ಲಿ ಸಂಸ್ಥೆಗೆ ದತ್ತು ನೀಡಿದೆ. ದತ್ತು ಪಡೆದ‌ ಸಂಸ್ಥೆ ಮುಂದಿನ 1 ತಿಂಗಳಿನಲ್ಲಿ ಇದರ ಸಂರಕ್ಷಣೆ, ಅಭಿವೃದ್ಧಿ, ಮೂಲಸೌಕರ್ಯ ಬಲವರ್ಧನೆ ನಿಟ್ಟಿನಲ್ಲಿ ಡಿಟೇಲ್ ಪ್ರಾಜೆಕ್ಟ್ ರಿಪೋರ್ಟ್ ಸಲ್ಲಿಸಲಿದ್ದು, ತದನಂತರ ಸರ್ಕಾರ ಇದರ ಸಂರಕ್ಷಣೆಗೆ ಮುಂದಾಗಲಿದೆ ಎಂದರು.

ಐತಿಹಾಸಿಕ ಸ್ಮಾರಕ ಸಂರಕ್ಷಣೆ ಕೇವಲ ಸರ್ಕಾರದಿಂದ ಸಾಧ್ಯವಾಗುವುದಿಲ್ಲ. ಉಳ್ಳವರು, ಕಾರ್ಪೋರೇಟ್ ಕಂಪನಿಗಳು ದತ್ತು ಪಡೆದುಕೊಂಡು ಸಂರಕ್ಷಿಸಲು‌ ಮುಂದೆ ಬರಬೇಕಿದೆ. ಸ್ಥಳೀಯರ ಸಹಭಾಗಿತ್ವ ತುಂಬಾ ಅಗತ್ಯ ಇದೆ. ಈ ನಿಟ್ಟಿನಲ್ಲಿ ಅಮೆರಿಕಾದಲ್ಲಿ ನೆಲಸಿರುವ ಕನ್ನಡಿಗರನ್ನು ಇತ್ತಿಚೆಗೆ ಝೂಮ್ ಮೀಟ್ ಮೂಲಕ ಸಂಪರ್ಕಿದಾಗ ಸುಮಾರು 20 ಜನರು ತಮ್ಮೂರಿನ ಸ್ಮಾರಕ‌ ಸಂರಕ್ಷಣೆಗೆ ಉತ್ಸುಕರಾಗಿದ್ದು, ಸಂತಸ ವಿಚಾರ ಎಂದು ಎಚ್. ಕೆ ಪಾಟೀಲ್ ಹೇಳಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಮ್ಮ ಸ್ಮಾರಕ ಯೋಜನೆಯಡಿ ನಾಗಾವಿಯ 60 ಕಂಬ ಸ್ಮಾರಕವನ್ನು ಬೆಂಗಳೂರಿನ ಯೂನೈಟೆಡ್ ವೇ ಸಂಸ್ಥೆಯ ರಾಜೇಶ ಕೃಷ್ಣನ್‌ ಮತ್ತು ಮಳಖೇಡದ ರಾಷ್ಟ್ರಕೂಟರ ಕೋಟೆಯನ್ನು ಹೈದ್ರಾಬಾದಿನ ಕೃಷ್ಣ ಕೃತಿ ಟ್ರಸ್ಟಿನ ಮುಖ್ಯ ಟ್ರಸ್ಟಿ ಪ್ರಶಾಂತ ಲಾಹೋಟಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next