ಹರಿಹರ: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಾಗುತ್ತಿದ್ದು, ಶೀಘ್ರದಲ್ಲಿ ಚುನಾವಣಾ ಆಯೋಗಕ್ಕೆ ಹೊಸ ಪ್ರಾದೇಶಿಕ ಪಕ್ಷದ ನೋಂದಣಿಗೆ ಅರ್ಜಿ ಸಲ್ಲಿಸಲಾಗುವುದು ಎಂದು ಸಂಘಟನೆಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ತಿಳಿಸಿದರು.
ನಗರದ ಹೊರವಲಯದ ಪ್ರೊ| ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ| ಬಿ.ಆರ್. ಅಂಬೇಡ್ಕರ್, ಪ್ರೊ| ಬಿ. ಕೃಷ್ಣಪ್ಪ ಚಿಂತನೆಯಡಿ ನಮ್ಮ ಸಂಘಟನೆಯಿಂದಲೇ ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ರಚಿಸುವ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.
ರೈತ ಹೋರಾಟಗಾರ ಪ್ರೊ| ನಂಜುಂಡಸ್ವಾಮಿ, ಪತ್ರಕರ್ತ ಪಿ.ಲಂಕೇಶ್ ಮತ್ತು ದಸಂಸ ಸ್ಥಾಪಕ ಪ್ರೊ| ಬಿ. ಕೃಷ್ಣಪ್ಪ ಅವರು ಹಿಂದೆ ರಾಜ್ಯದಲ್ಲಿ ಪ್ರಗತಿರಂಗ ಎಂಬ ಪಕ್ಷ ರಚಿಸಿದ್ದರು. ಆದರೆ ಬಹುಜನ ಸಮಾಜ ಪಾರ್ಟಿಗೆ ಬೆಂಬಲಿಸುವ ದೃಷ್ಟಿಯಿಂದ ಪ್ರಗತಿ ರಂಗ ಪಕ್ಷ ಸಂಘಟನೆಗೆ ಒತ್ತು ನೀಡಿರಲಿಲ್ಲ. ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಹ ಮನುವಾದಿ ಧೋರಣೆ ಹೊಂದಿವೆ. ಇಂತಹ ಪಕ್ಷಗಳಿಂದ ಶೋಷಿತರ, ದಲಿತರ, ರೈತರ, ಮಹಿಳೆಯರ, ಕಾರ್ಮಿಕರ, ಬಡವರ ಅಭಿವೃದ್ಧಿಯಾಗಲ್ಲ ಎಂಬುದು ಸಾಬೀತಾಗಿರುವುದರಿಂದ ಪ್ರೊ| ಬಿ. ಕೃಷ್ಣಪ್ಪ ಅವರ ಜನ್ಮದಿನೋತ್ಸವ, ರಾಜ್ಯ ಮಟ್ಟದ ಪರಿವರ್ತನಾ ಶಿಬಿರ ಮತ್ತು ರಾಜ್ಯ ಸಮಿತಿ ಸಭೆಯಲ್ಲಿ ಹೊಸ ಪಕ್ಷ ಆರಂಭಿಸಲು ನಿರ್ಣಯಿಸಲಾಗಿದೆ ಎಂದು ಹೇಳಿದರು.
ಹೊಸ ಪಕ್ಷಕ್ಕೆ ಕರ್ನಾಟಕ ಪ್ರಗತಿ ರಂಗ ಅಥವಾ ಪ್ರಜಾರಾಜ್ಯ ಎಂಬ ಹೆಸರಿಡಲು ಮತ್ತು ಗುಲಾಬಿ ಹೂವು ಅಥವಾ ಸೂರ್ಯ ಲಾಂಛನವಾಗಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೊಸ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ನಮ್ಮ ಪಕ್ಷ ಎಲ್ಲಾ ಸಮುದಾಯದವರನ್ನೂ ಒಳಗೊಂಡಿರಲಿದೆ. ಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆಯೂ ಕೂಲಂಕುಷವಾಗಿ ಚರ್ಚಿಸಲಾಗಿದೆ.
ವಿರೋಧ ಪಕ್ಷವೇ ಇಲ್ಲದಂತೆ ಮೆರೆದ ಕಾಂಗ್ರೆಸ್ ಪಕ್ಷಕ್ಕೀಗ ಹೀನಾಯ ಸ್ಥಿತಿ ಬಂದಿದೆ. ಮನುವಾದಿ ಪಕ್ಷಗಳು ಸಂವಿಧಾನಬದ್ಧವಾಗಿ ಚುನಾವಣೆಯಲ್ಲಿ ಸ್ಪ ರ್ಧಿಸಿದರೆ ನಮ್ಮ ಪಕ್ಷ ಪ್ರಾಬಲ್ಯಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದರು. ಸಂಘಟನೆಯ ಪದಾಧಿಕಾರಿಗಳಾದ ವಿ. ನಾರಾಯಣಸ್ವಾಮಿ, ಹೆಗ್ಗೆರೆ ರಂಗಪ್ಪ, ಅಂದಾನಿ ಸೋಮನಹಳ್ಳಿ, ಭಾಗ್ಯಮ್ಮ ನಾರಾಯಣಸ್ವಾಮಿ, ಶಿವಮೂರ್ತಿ, ಕಬ್ಬಳ್ಳಿ ಮೈಲಪ್ಪ, ಸಂತೋಷ ನೋಟದವರ, ಹರಿಹರ ಮಂಜುನಾಥ, ಮಂಜು
ರಾಜನಹಳ್ಳಿ ಇತರರು ಇದ್ದರು.
ಅಡುಗೆ ಅನಿಲ, ಅಡುಗೆ ಎಣ್ಣೆ, ಬೇಳೆ ಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ಬದುಕು ಶೋಚನೀಯವಾಗಿದೆ. ಸಂಘಟನೆಯ ಹೊಸ ರಾಜಕೀಯ ಪಕ್ಷಕ್ಕೆ ಜನತೆ ಬೆಂಬಲಿಸಿದರೆ ಎಲ್ಲರಿಗೂ ಸಮಪಾಲು, ಸಮಬಾಳು ಸಿಗಲಿದೆ.
ಎಂ. ಸೋಮಶೇಖರ,
ದಸಂಸ ರಾಜ್ಯ ಸಂಚಾಲಕ