Advertisement

ವಿಪತ್ತು ನಿರ್ವಹಣೆ ತರಬೇತಿ ಕೇಂದ್ರ ಸ್ಥಾಪನೆಗೆ ತೀರ್ಮಾನ

10:09 PM Sep 25, 2019 | Sriram |

ಕಾಸರಗೋಡು: ಸ್ವಯಂ ಸೇವಾ ಕಾರ್ಯದಲ್ಲಿ ಮುನ್ನುಗ್ಗುವ ಸೇವಾ ಭಾರತಿ ವತಿಯಿಂದ ಡಿಸಾಸ್ಟರ್‌ ಮ್ಯಾನೇಜ್‌ಮೆಂಟ್‌ ತರಬೇತಿ ಕೇಂದ್ರವನ್ನು ಆರಂಭಿಸಲು ತೀರ್ಮಾನಿಸಿದೆ.

Advertisement

ಅಲ್ಲದೆ ಕಾರ್ಯಕರ್ತರು ಇನ್ನು ಮುಂದೆ ರಾಜ್ಯದಲ್ಲಿ ಪಂಚಾಯತ್‌ ಮಟ್ಟದಲ್ಲೂ ತನ್ನ ಚಟುವಟಿಕೆಗಳನ್ನು ಆರಂಭಿಸಲು ತೀರ್ಮಾನಿಸಿದೆ. ಪ್ರಳಯದಿಂದಾಗಿ ನೊಂದ ಕುಟುಂಬಗಳಿಗೆ ಸಾಂತ್ವನವನ್ನುಂಟು ಮಾಡುವ ನಿಟ್ಟಿನಲ್ಲಿ ಸಮಾಜ ಸೇವೆಯ ಸಮಸ್ತ ವಲಯಗಳಲ್ಲಿಯೂ ಸೇವಾ ಭಾರತಿಯಿಂದ ಸಮಗ್ರ ಸೇವೆಯನ್ನು ವಿಸ್ತರಿಸಲಾಗಿದೆ.
ಕೊಚ್ಚಿಯಲ್ಲಿ ಜರಗಿದ ಸೇವಾ ಭಾರತಿ ಕಾರ್ಯಕರ್ತರ ರಾಜ್ಯ ಪ್ರತಿನಿಧಿ ಸಮ್ಮೇಳನದಲ್ಲಿ ಹೆಚ್ಚಿನ ಯೋಜನೆಗಳನ್ನು ತಯಾರಿಸಿ ಇನ್ನಷ್ಟು ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಯಿತು.

ಆಲಪ್ಪುಯ ಜಿಲ್ಲೆಯಲ್ಲಿ ಡಿಸಾಸ್ಟರ್‌ ಮ್ಯಾನೇಜ್‌ಮೆಂಟ್‌ ತರಬೇತಿ ಕೇಂದ್ರ ಆರಂಭಿಸಲಾಗುವುದು. ಎಲ್ಲ ಸೇವಾ ವಲಯಗಳ ಕಾರ್ಯಕರ್ತರಿಗೂ ತರಬೇತಿ ನೀಡಲಾಗುವುದು. ನೀರು, ಪರಿಸರ, ಜೈವಿಕ ಕೃಷಿ, ಶುಚೀಕರಣ ಸಹಿತ ಆಯಾ ಪಂಚಾಯತ್‌ ಮಟ್ಟದಲ್ಲಿ ಸಮಾಜಕ್ಕೆ ಅಗತ್ಯವಾದ ಚಟುವಟಿಕೆಗಳನ್ನು ವಹಿಸಿಕೊಂಡು ನಡೆಸುವುದಕ್ಕಾಗಿ ಯೋಜನೆಗಳನ್ನು ತಯಾರಿಸಿ ಕರ್ತವ್ಯ ನಿರ್ವಹಿಸಲಾಗುವುದು.
ರಾಜ್ಯದ ವಿವಿಧ ಭಾಗಗಳಿಂದಾಗಿ ರಾಷ್ಟ್ರೀಯ ಸೇವಾ ಭಾರತಿಯ ಪ್ರತಿನಿಧಿಗಳು, ಮಕ್ಕಳು, ಮಹಿಳೆಯರು ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ದುರಂತಕ್ಕೀಡಾದವರಿಗೆ ಸಹಾಯ ವನ್ನೊದಗಿಸುವ ನಿಟ್ಟಿನಲ್ಲಿ ಮಾತ್ರವಲ್ಲದೆ ಜನರ ಅಗತ್ಯದ ಚಟುವಟಿಕೆಗಳನ್ನು ನೆರವೇರಿಸುವುದು ಸೇವಾ ಭಾರತೀಯ ಮೂಲ ತತ್ವವಾಗಿದೆ ಎಂಬುದು ಸಮ್ಮೇಳನದ ಸಂದೇಶವಾಗಿದೆ. ತುರ್ತು ಸಮಯದಲ್ಲಿ ಸೇವೆ ನಡೆಸುವುದರ ಹೊರತು ಸೇವಾ ಭಾರತಿ ರಾಜ್ಯದಲ್ಲಿ 170 ಲಕ್ಷ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ವೈವಿಧ್ಯ ವಲಯವನ್ನು ರಾಜ್ಯದ ಪಂಚಾಯತ್‌ ಮಟ್ಟದಲ್ಲಿ ಪತ್ತೆಹಚ್ಚಿ ಜಾರಿಗೊಳಿಸುವುದಕ್ಕಾಗಿ ಯೋಜನೆ ತಯಾರಿಸಲು ಸಮ್ಮೇಳನದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಾಯದಿಂದಾಗಿ ಅಲ್ಲದೆ ಉದಾರ ದಾನಿಗಳ ಸಹಾಯದೊಂದಿಗೆ ಸಾಮಾಜಿಕ ಕ್ಷೇಮ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಕಾನೂನು ಪ್ರಕಾರ ಎಲ್ಲ ಕ್ರಮಗಳನ್ನು ಪಾಲಿಸಿ ಕೊಂಡು ಹೆಚ್ಚು ವ್ಯಾಪಕವಾಗಿ ಸಂಘಟನಾ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಯೋಜನೆ ರೂಪಿಸಲಾಯಿತು.

Advertisement

ಸಂಘಟನೆ ಮುಂದಿರಿಸಿದ ಸಂದೇಶವನ್ನು ಸಮಾಜವು ಮನದಟ್ಟು ಮಾಡಿ ಜಾರಿಗೊಳಿಸುವ ವೇಳೆಯಲ್ಲಿ ಸೇವಾ ಭಾರತಿಯ ಕಾರ್ಯಕರ್ತರು ಹೆಚ್ಚಿನ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ರಾಜ್ಯ ಸೇವಾ ಪ್ರಮುಖ್‌ ಎ.ವಿನೋದ್‌ ಹೇಳಿದ್ದಾರೆ.

ಸರಕಾರದ ಸಹಾಯಗಳಿಗೆ ಕಾದು ನಿಲ್ಲದೆ ಜನಸೇವೆಗೆ ಮಾರ್ಗ ಕಂಡು ಹಿಡಿಯಬೇಕೆಂದು ಮತ್ತು ಸರಕಾರಗಳ ಯೋಜನೆಗಳು ಎಲ್ಲ ಜನರಿಗೂ ಲಭಿಸುವಂತೆ ಮಾಡಲು ಸೇವಾ ಭಾರತಿ ಜನರಿಗೆ ಸಹಾಯ ನೀಡಬೇಕೆಂದು ಸೇವಾ ವಲಯದ ಕುರಿತು ಮಾತನಾಡಿದ ಡಾ| ಟಿ.ಪಿ.ಸೆನ್‌ಕುಮಾರ್‌ ತಿಳಿಸಿದ್ದಾರೆ.

ಪಂಚಾಯತ್‌ ಮಟ್ಟದ ಸೇವಾಕಾರ್ಯ
ಸೇವಾ ಭಾರತಿಯ ಆಶ್ರಯದಲ್ಲಿ ಕೇರಳದಲ್ಲಿ ಪ್ರತಿ ಪಂಚಾಯತ್‌ ಮಟ್ಟದಲ್ಲಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸೇವಾ ಭಾರತಿಯ ನೂತನ ಸಮಿತಿಗಳನ್ನು ರೂಪಿಸಿ ಜವಾಬ್ದಾರಿಗಳನ್ನು ನೀಡಲಾಗುವುದು. ಈ ಸಮಿತಿಯ ನೇತೃತ್ವದಲ್ಲಿ ಗ್ರಾಮ ಪಂಚಾಯತ್‌ಗಳಲ್ಲಿ ಸೇವಾ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಕಾಸರಗೋಡು ಜಿಲ್ಲೆ ಯಲ್ಲೂ ಈ ಹಿನ್ನೆಲೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದ್ದು, ಜಿಲ್ಲೆಯ ಎಲ್ಲ ಪಂಚಾಯತ್‌ಗಳಲ್ಲೂ ಜನಸೇವೆ ನಡೆಸುವ ನಿಟ್ಟಿನಲ್ಲಿ ಯೋಜನೆಗಳನ್ನು ತಯಾರಿಸಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next