ಹುಬ್ಬಳ್ಳಿ: ತಾಲೂಕು ಆಡಳಿತದಿಂದ ಜ. 14ರಂದು ಅದ್ಧೂರಿಯಾಗಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಮಾಡುವ ಕುರಿತು ನಿರ್ಣಯಿಸಲಾಯಿತು.
ಶನಿವಾರ ಮಿನಿವಿಧಾನ ಸೌಧ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು. ಅಂದು ಬೆಳಗ್ಗೆ 10 ಗಂಟೆಗೆ ಮಿನಿವಿಧಾನ ಸೌಧ ತಾಲೂಕು ಸಭಾಂಗಣದಲ್ಲಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಣೆಗೆ ಚಾಲನೆ ನೀಡಲಾಗುವುದು. ಸಿದ್ದರಾಮೇಶ್ವರ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಶಶಿಧರ ಮಾಡ್ಯಾಳ, 12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ಜರುಗಿದ ಸಾಮಾಜಿಕ ಕ್ರಾಂತಿಯಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆಅಪಾರ. ಅಲ್ಲಮಪ್ರಭು ಹಾಗೂ ಚನ್ನಬಸವಣ್ಣನನ್ನು ಗುರುವಾಗಿ ಸ್ವೀಕರಿಸಿ ಇಷ್ಟಲಿಂಗ ಧರಿಸಿದ ಸಿದ್ದರಾಮರನ್ನು ಅನುಭವ ಮಂಟಪದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಎಂದು ಕರೆಯಲಾಗುತ್ತಿತ್ತು. ಸಿದ್ದರಾಮೇಶ್ವರ ರಚಿಸಿದ 2 ಸಾವಿರದಷ್ಟು ವಚನಗಳು ಲಭ್ಯವಿವೆ. ಸಿದ್ದರಾಮೇಶ್ವರರ ತತ್ವ ಹಾಗೂ ಸಿದ್ದಾಂತಗಳನ್ನು ಸಾರುವ ನಿಟ್ಟಿನಲ್ಲಿ ಜಯಂತಿ ಆಚರಿಸಲಾಗುತ್ತಿದೆ. ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಜಯಂತಿ ಆಚರಣೆಯಲ್ಲಿ ತಪ್ಪದೇ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಸಮಾಜದ ಮುಖಂಡ ಸಿದ್ದಪ್ಪ ಒಡೆಯರ ಮಾತನಾಡಿ, ಫೆ. 11ರಂದು ಇಂದಿರಾ ಗಾಜಿನಮನೆಯಲ್ಲಿ ಭೋವಿ ವಡ್ಡರ ಸಮಾಜದಿಂದ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಆಚರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
ತಾಪಂ ಇಒ ಎಂ.ಎಂ. ಸವದತ್ತಿ, ಸಹಾಯಕ ನಿರ್ದೇಶಕ ಗಂಗಾಧರ ಕಂದಕೋರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ, ತಾಲೂಕು ವೈದ್ಯಾಧಿಕಾರಿ ಆರ್.ಎಸ್. ಹಿತ್ತಲಮಿನಿ, ಸಮಾಜದ ಮುಖಂಡರಾದ ಶಿವು ಹಿರೇಕೇರೂರು, ಮಾಲತೇಶ ಕೃಷ್ಣಪ್ಪ, ಶಿವಾನಂದ ಕನ್ನೂರ, ಲಕ್ಷ್ಮಣ ಬಿಳಗಿ ಇನ್ನಿತರರು ಇದ್ದರು.