Advertisement

ಕಾಶ್ಮೀರಿಗರಿಗೆ ಕೇಂದ್ರದ ಸಿಹಿ:ಬೆಳೆಗಾರರಿಂದ ಸೇಬು ಖರೀದಿಗೆ ನಿರ್ಧಾರ

09:06 AM Sep 12, 2019 | Team Udayavani |

ಹೊಸದಿಲ್ಲಿ: ನಿರ್ಬಂಧದ ಬಿಸಿಯಿಂದ ನಲುಗಿರುವ ಕಣಿವೆ ರಾಜ್ಯದ ಸೇಬು ಬೆಳೆಗಾರರಿಗೆ ಕೇಂದ್ರ ಸರಕಾರ ಸಿಹಿಸುದ್ದಿ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಸೇಬು ಬೆಳೆಗಾರರಿಂದ ನೇರವಾಗಿ ಸೇಬುಗಳನ್ನು, ಮತ್ತು ಹಣ ಫ‌ಲಾನುಭವಿಗಳ ಖಾತೆಗೆ ನೇರ ವರ್ಗಾಯಿಸುವ(ಡಿಬಿಟಿ) ಯೋಜನೆಯಡಿ ಖರೀದಿಸಲು ಸರಕಾರ ನಿರ್ಧರಿಸಿದೆ.

Advertisement

ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ರಾಜ್ಯಾದ್ಯಂತ ನಿರ್ಬಂಧ ಹೇರಲಾಗಿರುವ ಹಿನ್ನೆಲೆಯಲ್ಲಿ ತಾವು ಬಹಳಷ್ಟು ನಷ್ಟ ಅನುಭವಿಸುತ್ತಿದ್ದೇವೆ ಎಂದು ಸೇಬು ಬೆಳೆಗಾರರು ನೋವು ತೋಡಿಕೊಂಡ ಹಿನ್ನೆಲೆಯಲ್ಲಿ, ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರಕಾರ ಈ ಮಹತ್ವದ ಹೆಜ್ಜೆಯಿಟ್ಟಿದೆ.

ಸೇಬು ಬೆಳೆಗಾರರ ಆದಾಯ ಹೆಚ್ಚಿಸುವುದು, ಅವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಸಬ್ಸಿಡಿಗಳನ್ನು ನೀಡುವುದು ಸರಕಾರದ ಉದ್ದೇಶವಾಗಿದೆ. ಈ ಕುರಿತು ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದು, “ಸೋಪೋರ್‌, ಪರಿಂಪೋರಾ, ಶೋಪಿಯಾನ್‌ ಮತ್ತು ಬಟೆಂಗೋ ಮತ್ತಿತರ ಹಣ್ಣುಗಳ ಮಂಡಿಯಿಂದ ನೇರವಾಗಿ ಬೆಳೆಗಾರರ ಕೈಯಿಂದಲೇ ಸೇಬುಗಳನ್ನು ಖರೀದಿಸಲಾಗುವುದು. 12 ಲಕ್ಷ ಮೆಟ್ರಿಕ್‌ ಟನ್‌ ಸೇಬುಗಳನ್ನು ಖರೀದಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದೆ.

ಡಿ.15ರೊಳಗೆ ಪ್ರಕ್ರಿಯೆ ಪೂರ್ಣ: ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟವೇ ಖರೀದಿ ಪ್ರಕ್ರಿಯೆಯ ನೇತೃತ್ವ ವಹಿಸಲಿದ್ದು, ನಿಗದಿತ ರಾಜ್ಯ ಸರಕಾರಿ ಏಜೆನ್ಸಿಗಳ ಮೂಲಕ ಡಿಸೆಂಬರ್‌ 15ರೊಳಗೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಕಳೆದ ವಾರವಷ್ಟೇ ಕಣಿವೆ ರಾಜ್ಯದ ಹಣ್ಣು ಬೆಳೆಗಾರರು, ಗ್ರಾಮದ ಮುಖ್ಯಸ್ಥರು ಮತ್ತು ಕೃಷಿ ಮಾರುಕಟ್ಟೆ ವ್ಯಾಪಾರಿಗಳು ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ್ದರು. ರಾಜ್ಯದಲ್ಲಿ ಸಾಗಾಟ ನಿರ್ಬಂಧವಿರುವ ಕಾರಣ ನಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ.

ಹೀಗಾಗಿ ಭಾರೀ ನಷ್ಟ ಅನುಭವಿಸುವಂತಾಗಿದೆ ಎಂದು ಅವರು ತಿಳಿಸಿದ್ದರು. ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸುವುದಾಗಿ ಶಾ ಭರವಸೆ ನೀಡಿದ್ದರು.

Advertisement

ಮತ್ತೆ ಕರ್ಫ್ಯೂ ಮಾದರಿ ನಿರ್ಬಂಧ: ಮೊಹರಂ ಮೆರವಣಿಗೆ ತಡೆಯುವ ಸಲುವಾಗಿ ಮಂಗಳವಾರ ಕಾಶ್ಮೀರದ ಹಲವು ಭಾಗಗಳಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ ವಿಧಿಸಲಾಗಿದೆ. ಲಾಲ್‌ ಚೌಕ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಪೂರ್ಣವಾಗಿ ನಾಕಾಬಂಧಿ ಮಾಡಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗಿದೆ. ಮೆರವಣಿಗೆಗೆಂದು ಜನರು ಸೇರಿದರೆ ಹಿಂಸಾಚಾರ ಸಂಭವಿಸುವ ಸಾಧ್ಯತೆಯಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

ಪಾಕ್‌ ದಾಳಿ: ಮಂಗಳವಾರವೂ ಪೂಂಛ… ಜಿಲ್ಲೆಯಲ್ಲಿ ಪಾಕ್‌ ಪಡೆ ಶೆಲ್‌ ದಾಳಿ ನಡೆಸಿದ್ದು, ಪರಿಣಾಮ ಗಡಿಗ್ರಾಮಗಳ 6 ಮನೆಗಳಿಗೆ ಹಾನಿಯಾಗಿದ್ದು, 5 ಪ್ರಾಣಿಗಳು ಸಾವಿಗೀಡಾಗಿವೆ.

ಸಹಾಯವಾಣಿಗೆ 34,000 ಕರೆ
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ ಸಿಆರ್‌ಪಿಎಫ್ ಆರಂಭಿಸಿದ್ದ “ಮದದ್‌ಗಾರ್‌’ ಸಹಾಯವಾಣಿ ಸಂಖ್ಯೆಗೆ ಬರೋಬ್ಬರಿ 34 ಸಾವಿರ ಕರೆಗಳು ಬಂದಿವೆ. ಈ ಪೈಕಿ ಅತಿ ಹೆಚ್ಚಿನವು ಕಣಿವೆ ರಾಜ್ಯದಲ್ಲಿನ ತಮ್ಮ ಕುಟುಂಬ ಸದಸ್ಯರ ಕ್ಷೇಮ ವಿಚಾರಿಸಿ ಬಂದಿರುವಂಥದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ.5ರಿಂದ ಈವರೆಗೆ 34,272 ಕರೆಗಳನ್ನು ಸ್ವೀಕರಿಸಲಾಗಿದ್ದು, 1,227 ಕರೆಗಳು ತುರ್ತು ಅಗತ್ಯದ್ದಾಗಿದ್ದವು ಎಂದೂ ಅವರು ಹೇಳಿದ್ದಾರೆ. ಈ ರೀತಿ ಕರೆ ಮಾಡಿದಂಥ ಸುಮಾರು 123 ಮಂದಿ ರೋಗಿಗಳಿಗೆ ಅವರ ಮನೆ ಬಾಗಿಲಿಗೇ ಔಷಧಗಳನ್ನು ಸಹಾಯವಾಣಿ ಸಿಬಂದಿ ತಲುಪಿಸಿದ್ದಾರೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ಥಾನ ನಡುವೆ ಕಾಶ್ಮೀರ ವಿಚಾರವಾಗಿ ಉಂಟಾಗಿರುವ ಬಿಕ್ಕಟ್ಟಿನ ತೀವ್ರತೆಯು 2 ವಾರಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗ ಬಹಳಷ್ಟು ತಗ್ಗಿದೆ. ಎರಡೂ ದೇಶಗಳು ಅಪೇಕ್ಷಿಸಿದರೆ ಸಹಾಯ ಮಾಡಲು ನಾನು ಸಿದ್ಧನಿದ್ದೇನೆ.
– ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next