ಬೆಂಗಳೂರು: ಐಎಂಎ ಪ್ರಕರಣವನ್ನು ಕೆಪಿಐಡಿ (ಕರ್ನಾಟಕ ಹಣಕಾಸು ಹೂಡಿಕೆದಾರರ ರಕ್ಷಣಾ ಕಾಯ್ದೆ 2004) ಕಾಯ್ದೆ ವ್ಯಾಪ್ತಿಯಲ್ಲಿ ತರುವ ನಿಟ್ಟಿನಲ್ಲಿ ಸೂಕ್ತ ಕಾನೂನು ತಿದ್ದುಪಡಿ ಮಾಡಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಕಾನೂನು ಇಲಾಖೆ ಅಭಿಪ್ರಾಯ ಕೋರಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಂಎ ಪ್ರಕರಣದಲ್ಲಿ ಕಂದಾಯ ಇಲಾಖೆಯಿಂದ ಯಾವುದೇ ಲೋಪವಾಗಿಲ್ಲ. ಐಎಂಎ ಪ್ರಕರಣದಲ್ಲಿ ಹೂಡಿಕೆದಾರರನ್ನು ಷೇರುದಾರರನ್ನಾಗಿ ಮಾಡಿರುವುದರಿಂದ ಕೆಪಿಐಡಿ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಕಂದಾಯ ಇಲಾಖೆ ತಕ್ಷಣ ಐಎಂಎ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿಲ್ಲ. ಈ ಬಗ್ಗೆ ಸೂಕ್ತ ಕಾನೂನು ತಿದ್ದುಪಡಿ ಮಾಡಲು ಕಾನೂನು ಇಲಾಖೆ ಅಭಿಪ್ರಾಯ ಕೇಳಲಾಗಿದೆ ಎಂದು ಹೇಳಿದರು.
ಐಎಂಎ ಹೂಡಿಕೆದಾರರಿಗೆ ವಂಚನೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳಿದ್ದರೆ ಸಲ್ಲಿಸುವಂತೆ 2018ರ ನವೆಂಬರ್‌ನಲ್ಲಿ ಕಂದಾಯ ಇಲಾಖೆಯಿಂದ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಆದರೆ, ಸಾರ್ವಜನಿಕರಿಂದ ಯಾವುದೇ ದೂರು ಬರಲಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದವರು 2019ರ ಫೆಬ್ರವರಿಯಲ್ಲಿ ಸಭೆ ನಡೆಸಿ ಈ ಸಂಸ್ಥೆಗೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಪೊಲೀಸರು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಆದರೆ, ಆರ್‌ಬಿಐ ಐಎಂಎ ಸಂಸ್ಥೆಯ ಕಾರ್ಯಶೈಲಿಯ ಬಗ್ಗೆ (ಕಂಪನಿ ಮೋಡ್ ಆಫ್ ವರ್ಕ್) ತನಿಖೆ ನಡೆಸಿಲ್ಲ ಎಂದು ವರದಿಯನ್ನು ವಾಪಸ್ ಕಳುಹಿಸಿತ್ತು.
ಈ ಸಂಸ್ಥೆಯ ಬಗ್ಗೆ ಸಿಐಡಿ ಸಲಹೆ ಪ್ರಕಾರ ಕೆಪಿಐಡಿ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲವೆಂದು ಕಂದಾಯ ಇಲಾಖೆಯ ಅಸಿಸ್ಟಂಟ್ ಕಮಿಷನರ್ ವರದಿ ಕಳುಹಿಸಿದ್ದರು. ಜಿಲ್ಲಾಧಿಕಾರಿಗಳೂ ಅದೇ ರೀತಿಯ ಮತ್ತೂಂದು ವರದಿ ಕಳುಹಿಸಿದರು. ಆದರೆ, ಆ ವರದಿಯನ್ನು ಕಂದಾಯ ಇಲಾಖೆ ಒಪ್ಪಿಕೊಳ್ಳದೇ ಕಾನೂನು ಇಲಾಖೆ ಅಭಿಪ್ರಾಯಕ್ಕೆ ಕಳುಹಿಸಿಕೊಡಲಾಯಿತು. ಕಾನೂನು ಇಲಾಖೆ ಸಾಮಾನ್ಯ ಕಾಯ್ದೆಯ ಬಗ್ಗೆ ಅಭಿಪ್ರಾಯ ತಿಳಿಸಬಹುದೇ ಹೊರತು ಪ್ರತಿಯೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ತಿಳಿಸಲು ಆಗುವುದಿಲ್ಲ ಎಂದು ವರದಿ ಕಳುಹಿಸಿದರು.
ಕಂದಾಯ ಇಲಾಖೆ ನಂತರ ಐಜಿಪಿ ಕ್ರೈಂ ಬ್ರಾಂಚ್‌ಗೆ ಮತ್ತೂಮ್ಮೆ ತನಿಖೆ ಮಾಡುವಂತೆ ಮನವಿ ಮಾಡಲಾಯಿತು. ಈ ಬಗ್ಗೆ ಪೊಲಿಸ್ ಮಹಾನಿರ್ದೇಶಕರಿಗೂ ಮನವಿ ಮಾಡಲಾಗಿತ್ತು. ಅವರೂ ಕೂಡ ಈ ಪ್ರಕರಣ ಕೆಪಿಐಡಿ ವ್ಯಾಪ್ತಿಗೆ ಬರುವುದಿಲ್ಲ ಎಂದು ವರದಿ ನೀಡಿದ್ದರು. ಅದರಂತೆ ಮುಖ್ಯಕಾರ್ಯದರ್ಶಿಗಳು ಕೆಪಿಐಡಿ ಕಾಯ್ದೆಗೆ ತಿದ್ದುಪಡಿ ತರಲು ಸಲಹೆ ನೀಡಿದ್ದಾರೆ. ಅವರ ಸಲಹೆಯಂತೆ ಕೆಪಿಐಡಿ ಕಾಯ್ದೆಗೆ ತಿದ್ದುಪಡಿ ತರುವ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಅಭಿಪ್ರಾಯ ನೀಡುವಂತೆ ಮನವಿ ಮಾಡಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಕಂದಾಯ ಇಲಾಖೆಯಿಂದ ಯಾವುದೇ ರೀತಿಯ ಲೋಪವಾಗಿಲ್ಲ ಎಂದು ಹೇಳಿದರು.
ಈ ಪ್ರಕರಣದಲ್ಲಿ ಕೆಪಿಐಡಿ ಕಾಯ್ದೆಯ ಪ್ರಕಾರ ದೂರು ಬಂದರೆ, ಐಎಂಎ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚನೆ ನೀಡಬಹುದು. ಇದರಲ್ಲಿ ಹೂಡಿಕೆದಾರರ ಹಿತ ಕಾಯಲು ಸರ್ಕಾರ ಸಿದ್ದವಿದೆ ಎಂದು ಹೇಳಿದರು. ಇದೇ ವೇಳೆ, ಕೇಂದ್ರ ಸರ್ಕಾರ ಹೂಡಿಕೆದಾರರ ರಕ್ಷಣೆಗೆ ಜಾರಿಗೆ ತಂದಿರುವ ಸುಗ್ರೀವಾಜ್ಞೆ ಕೂಡ ರಾಜ್ಯ ಸರ್ಕಾರಕ್ಕೆ ಬಂದಿದೆ. ಆ ಸುಗ್ರೀವಾಜ್ಞೆಯಲ್ಲಿಯೂ ವಂಚಕರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಸ್ಪಷ್ಟತೆ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ದೇಶಪಾಂಡೆ ಹೇಳಿದರು.
ರೋಷನ್‌ಬೇಗ್ ಮನ್ಸೂರ್ ಭೇಟಿ ಮಾಡಿಸಿದ್ದರು: ತಿಂಗಳ ಹಿಂದೆ ಶಾಸಕ ರೋಷನ್ ಬೇಗ್ ಅವರು ಮೊಹಮದ್ ಮನ್ಸೂರ್ ಅವರನ್ನು ಕರೆದುಕೊಂಡು ನನ್ನ ಬಳಿ ಬಂದಿದ್ದರು. ಮನ್ಸೂರ್ ಅವರು ನನ್ನ ಕ್ಷೇತ್ರದವರು. ಶಾಲೆ ನಡೆಸುತ್ತಿದ್ದಾರೆ. ಐಎಂಎ ಪ್ರಕರಣದಲ್ಲಿ ಆರ್‌ಬಿಐ ತನಿಖೆ ನಡೆಸಿ ಕ್ಲೀನ್ ಚಿಟ್ ನೀಡಿದೆ. ಆದರೂ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಹೇಳಿದರು. ನಾನು ಆರ್‌ಬಿಐ ತನಿಖೆ ನಡೆಸಿ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಪೊಲೀಸ್ ಇಲಾಖೆಯಿಂದಲೂ ಕ್ಲೀನ್ ಚಿಟ್ ನೀಡಿರುವ ವರದಿ ಬಂದಿಲ್ಲ. ಆ ರೀತಿಯ ವರದಿ ಬಂದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದೆ ಎಂದು ದೇಶಪಾಂಡೆ ಹೇಳಿದರು.