Advertisement
ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸೀವೇಜ್ ಫಾರಂ ಕುರಿತ ಸಭೆಯಲ್ಲಿ ಮಾತನಾಡಿ, ಲ್ಯಾನ್ಸ್‌ಡೌನ್ ಕಟ್ಟಡದಲ್ಲಿ ನಡೆದ ದುರಂತದ ನಂತರ ಬಾಗಿಲು ಮುಚ್ಚಿದೆ. ಅದೇ ರೀತಿ ದೇವರಾಜ ಮಾರುಕಟ್ಟೆಯಲ್ಲೂ ಅವಘಡ ಸಂಭವಿಸಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮತ್ತು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆಗೆ ಸೂಚಿಸಿದರು.
Related Articles
Advertisement
ಎಂಡಿಎ ಅಧಿಕಾರಿ ಗಿರೀಶ್ ನೇತೃತ್ವದಲ್ಲಿ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ ಮತ್ತು ಪುರಾತತ್ವ ಇಲಾಖೆಯಿಂದ ನೇಮಿಸಲ್ಪಟ್ಟ ಪರಿಣತರ ತಂಡ ಕೂಡ ತಮ್ಮ ಅಭಿಪ್ರಾಯ ಸಲ್ಲಿಸಿದೆ. ಕರ್ನಾಟಕ ಎಂಜಿನಿಯರ್ಸ್ ರಿಸರ್ಚ್ ಸ್ಟೇಷನ್ (ಕೆಇಆರ್‌ಸಿ) ಅಧಿಕಾರಿಗಳ ತಂಡವೂ ಪರಿಶೀಲಿಸಿದೆ. ಹೀಗಾಗಿ ಒಟ್ಟಾರೆ ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಡಿಸಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಅಭಿರಾಮ್ ಮಾತನಾಡಿ, ಈ ಸಂಬಂಧ ಕಸ ಸಂಸ್ಕರಣಾ ಘಟಕಕ್ಕೆ ಸಂಸ್ಥೆಯವರನ್ನು ಕರೆದುಕೊಂಡು ಹೋಗಿ ವಿವರಿಸಿದ ನಂತರ ನಾಗ್ಪುರಕ್ಕೆ ಹೋಗುವ ತೀರ್ಮಾನ ಮಾಡಬಹುದು. ಜೊತೆಗೆ ನಗರ ಹೊರ ವರ್ತುಲ ರಸ್ತೆಯ ಆಜುಬಾಜಿನಲ್ಲಿರುವ 12 ಗ್ರಾಪಂಗಳನ್ನು ಯುಎಲ್‌ಬಿಗೆ ಸೇರಿಸಲು ಚಿಂತನೆ ನಡೆಸುತ್ತಿದ್ದೇವೆ. ಹೀಗಾಗಿ ಕಸ ಸಂಸ್ಕರಣೆ ಯೋಜನೆಯನ್ನು ಮುಂದಿನ ದಿನಗಳಲ್ಲಿ ಅನ್ವಯಿಸುವಂತೆ ರೂಪಿಸಬೇಕಾಗಿದೆ ಎಂದು ಸಚಿವರಿಗೆ ತಿಳಿಸಿದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಮೈಸೂರಿನ ರಿಂಗ್ ರಸ್ತೆಯಲ್ಲಿರುವ ಕೆಲವು ಹಳ್ಳಿಗಳಲ್ಲೂ ಕಸ ಸಂಸ್ಕರಣೆಗೆ ಕಷ್ಟವಾಗುತ್ತಿದೆ. ಅವುಗಳನ್ನು ಸೇರಿಸಿಕೊಂಡು ನಗರದಲ್ಲಿ ಉತ್ಪತ್ತಿಯಾಗುವ ಕಸ ಸಂಸ್ಕರಣೆಗೆ ಈ ಯೋಜನೆ ಪೂರಕವಾಗಿದೆ ಎಂದು ಸಲಹೆ ನೀಡಿದರು. ಶಾಸಕ ಎಲ್. ಎಲ್. ನಾಗೇಂದ್ರ ಮಾತನಾಡಿ, ಖಾಸಗಿ ಬಡಾವಣೆಗಳ ನಿರ್ವಹಣೆ ಇಲ್ಲದೆ ಪಾಲಿಕೆ ವ್ಯಾಪ್ತಿಗೆ ನೀಡುವುದು ಸರಿಯಲ್ಲ. ಇದರಿಂದ ಪಾಲಿಕೆಗೆ ಹೆಚ್ಚು ಹೊರೆಯಾಗುತ್ತಿದೆ ಎಂದರು. ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಸಿಇಒ ಕೆ. ಜ್ಯೋತಿ, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ತ್ಯಾಜ್ಯ ವೈಜ್ಞಾನಿಕ ವಿಲೇವಾರಿಗೆ 18 ಕೋಟಿ ಯೋಜನೆ – ಸಂಸದ: ಮೈಸೂರು ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ನಾಗ್ಪುರ ಮೂಲದ “ಜಿಗ್ಮಾ ಸಂಸ್ಥೆ’ ಯೋಜನೆ ರೂಪಿಸಿ, ಗುಜರಾತ್‌ನ ವಡೋದರಲ್ಲಿ ಅನುಷ್ಠಾನಗೊಳಿಸಿದೆ. ಈ ಬಗ್ಗೆ ತಿಳಿದುಕೊಳ್ಳಲು ಮೈಸೂರು ನಿಯೋಗವು ನಾಗ್ಪುರಕ್ಕೆ ತೆರಳಿ ಪರಿಶೀಲಿಸಿ ಬಂದರೆ ಒಳ್ಳೆಯದು. ಅದೇ ರೀತಿ ನಗರದಲ್ಲಿ ಪ್ರತಿದಿನ 450 ಟನ್ ಕಸ ಉತ್ಪತ್ತಿಯಾಗಲ್ಲಿದ್ದು, ಅದರ ಸಂಸ್ಕರಣೆಗೆ ಈ ಯೋಜನೆ ಪೂರಕವಾಗಲಿದೆ.
ಮುಡಾ 5 ಕೋಟಿ, ನಗರಪಾಲಿಕೆ 3 ಕೋಟಿ ಮತ್ತು ರಾಜ್ಯ ಸರ್ಕಾರ 10 ಕೋಟಿ ಹಣ ಈ ಯೋಜನೆಗೆ ವ್ಯಯಿಸಲಿದೆ ಎಂದು ಸಂಸದ ಪ್ರತಾಪ್ ಸಿಂಹ ಸಭೆಗೆ ತಿಳಿಸಿದರು. ಜಿಗ್ಮಾ ಸಂಸ್ಥೆಯ ಪ್ರತಿನಿಧಿ ಪ್ರಭು ಮಾತನಾಡಿ, ಈಗಾಗಲೇ ನಗರದ ಸುಯೇಜ್ ಫಾರಂನಲ್ಲಿ 2 ಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದೆ. 18 ತಿಂಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಬಹುದು. ಮೈಸೂರಿನಿಂದ ನಿಯೋಗ ಬಂದರೆ ನಾಗ್ಪುರದಲ್ಲಿ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುವುದು ಎಂದು ಹೇಳಿದರು.
ರಿಂಗ್ ರಸ್ತೆ ದೀಪ ಉರಿಸಿ: ನಗರದಲ್ಲಿ ನಿರ್ಮಾಣವಾಗುವ ಖಾಸಗಿ ಬಡಾವಣೆಗಳ ನಿರ್ವಹಣೆಯ ಜವಾಬ್ದಾರಿ ಮುಡಾ ವ್ಯಾಪ್ತಿಗೆ ಬರುತ್ತದೆ. ಆದರೆ ರಿಂಗ್ ರಸ್ತೆಯಲ್ಲಿ ದೀಪಗಳು ಉರಿಯುತ್ತಿಲ್ಲ. ದಸರಾ ವೇಳೆ ಉರಿದ ದೀಪಗಳಿಗೆ ಈಗ ಏನಾಗಿದೆ? ಇಂತಹದ್ದಕ್ಕೆಲ್ಲ ಆಯುಕ್ತರು ಅವಕಾಶ ನೀಡಬಾರದು. ಖಾಸಗಿ ಬಡವಾಣೆ ನಿರ್ವಹಣೆ ಮಾಡಿ, ನಂತರ ಪಾಲಿಕೆಗೆ ಒಪ್ಪಿಸಬೇಕು.
ಯಾವುದೇ ಕಾನೂನು ಬದಲಾವಣೆ ಇದ್ದರೂ ನಾನು ನೋಡಿಕೊಳ್ಳುತ್ತೇನೆ ಎಂದು ಸಚಿವ ವಿ.ಸೋಮಣ್ಣ ಮುಡಾ ಆಯುಕ್ತರಿಗೆ ತಾಕೀತು ಮಾಡಿದರು. ಅವರ ಮಾತಿಗೆ ಪ್ರತಿಕ್ರಿಯಿಸಿದ ಮುಡಾ ಆಯುಕ್ತ ಎಚ್.ಎಂ.ಕಾಂತರಾಜ್, ಈಗ ಕಾನೂನು ಬದಲಾವಣೆಯಾಗಿದ್ದು, ಕೆಲವು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಲು ಮುಂದಾದರು. ಆದರೆ ಸಚಿವರು ಆಸ್ಪದ ನೀಡದೆ ಮೊದಲು ಕೆಲಸ ಮಾಡುವಂತೆ ಸೂಚಿಸಿದರು.