Advertisement

ಆಂಧ್ರ ವಿಧಾನ ಪರಿಷತ್‌ ಅಮಾನತಿಗೆ ನಿರ್ಧಾರ

10:04 AM Jan 29, 2020 | sudhir |

ಅಮರಾವತಿ (ಆಂಧ್ರಪ್ರದೇಶ): ಆಂಧ್ರ ಪ್ರದೇಶದಲ್ಲಿ ವಿಧಾನ ಪರಿಷತ್ತನ್ನೇ ರದ್ದು ಪಡಿಸುವ ಮಹತ್ವದ ಮಸೂದೆಯನ್ನು ಇಲ್ಲಿನ ವಿಧಾನಸಭೆ ಸೋಮವಾರ ಅಂಗೀಕರಿಸಿದೆ.

Advertisement

ಇದರೊಂದಿಗೆ ವಿಧಾನ ಪರಿಷತ್‌ ಕೇವಲ 5 ರಾಜ್ಯಗಳಲ್ಲಿ ಮಾತ್ರ ಉಳಿದುಕೊಂಡಂತಾಗಿದೆ.

ವಿಧಾನ ಪರಿಷತ್‌ ಏಕೆ ಬೇಕು?
ಕಳೆದ ತಿಂಗಳು ಆಂಧ್ರ ಮೇಲ್ಮನೆ ಕಲಾಪದಲ್ಲಿ ಮುಖ್ಯ ಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಇಂಥದ್ದೊಂದು ಬೆದರಿಕೆಪೂರ್ಣ ಪ್ರಶ್ನೆ ಕೇಳಿದ್ದರು. ಅದುವೇ ಆ ಮನೆಯ ಕೊನೆಯ ಕಲಾಪವಾಗಿ ಬಿಟ್ಟಿದೆ. ಸೋಮವಾರ ವಿಧಾನಪರಿಷತ್‌ ರದ್ದು ಪಡಿಸುವ ನಿರ್ಧಾರವನ್ನು ಸಂಪುಟ ಅಂಗೀಕರಿಸಿ ದರೆ, ಸಂಜೆ ವಿಧಾನಸಭೆಯಲ್ಲಿ 133-0 ಮತ ಗಳಲ್ಲಿ ಮಸೂದೆಯನ್ನು ಅಂಗೀಕರಿಸಿತು.

ಕಾರಣ ಏನು?
ಆಂಧ್ರದಲ್ಲಿ ರಾಜಧಾನಿಗಳ ವಿಕೇಂದ್ರೀಕರಣ ಸಹಿತ 3 ಪ್ರಮುಖ ಮಸೂದೆಗಳು ಕಳೆದ ಕಲಾಪದಲ್ಲಿ ವಿಧಾನ ಪರಿಷತ್‌ನಲ್ಲಿ ತಿರಸ್ಕೃತ ಗೊಂಡಿದ್ದವು. ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ರೂಪಿಸಲು ಜಿದ್ದಿಗೆ ಬಿದ್ದಿರುವ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ನ ಸದಸ್ಯ ಬಲ ಕೇವಲ 9 ಇದ್ದಿದ್ದರಿಂದ ಮಸೂದೆ ಪಾಸಾಗಲಿಲ್ಲ. ಎದುರಾಳಿ ತೆಲುಗು ದೇಶಂ ಪಕ್ಷದ ಸದಸ್ಯರ ಸಂಖ್ಯೆ 28. ಇದರಿಂದ ಕೆರಳಿದ ಮುಖ್ಯಮಂತ್ರಿ ಇಡೀ ಮೇಲ್ಮನೆಯನ್ನೇ ರದ್ದುಪಡಿಸಲು ಮುಂದಾದರು. ವರ್ಷಕ್ಕೆ ಮೇಲ್ಮನೆ ನಿರ್ವಹಣೆಗೆ 60 ಕೋಟಿ ರೂ. ನಷ್ಟ ಎನ್ನುವುದು ಅವರ ವಾದ.

ಹಿಂದೊಮ್ಮೆ ಇಲ್ಲಿ ರದ್ದಾಗಿತ್ತು
ವಿಶೇಷವೆಂದರೆ 1985ರಲ್ಲಿ ಟಿಡಿಪಿ ಸಿಎಂ ಎನ್‌.ಟಿ. ರಾಮರಾವ್‌ ಮೇಲ್ಮನೆಯನ್ನು ರದ್ದು ಪಡಿಸಿದ್ದರು. ವೈ.ಎಸ್‌. ರಾಜಶೇಖರ ರೆಡ್ಡಿ 2007ರಲ್ಲಿ ಮೇಲ್ಮನೆಗೆ ಮತ್ತೆ ಜೀವ ನೀಡಿದ್ದರು.

Advertisement

ವಿಧಾನಪರಿಷತ್‌ ಅಧಿಕಾರವೇನು?
ಭಾರತದ ಸಂಸತ್‌ ವ್ಯವಸ್ಥೆಯಲ್ಲಿ ಮೇಲ್ಮನೆ, ಕೆಳಮನೆ ಎಂಬ ಎರಡು ಸದನಗಳಿವೆ. ಕೆಳಮನೆ ನೇರವಾಗಿ ಜನರಿಂದ ಆಯ್ಕೆಯಾದ ಸದಸ್ಯರಿರುವ ಸದನ. ಮೇಲ್ಮನೆ ಶಾಸಕರಿಂದ, ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ ಶಾಸಕರಿರುವ ಸದನ. ಸಂಸತ್ತಿನಲ್ಲಿರುವ ರಾಜ್ಯಸಭೆಗೆ ಹೆಚ್ಚಿನ ಅಧಿಕಾರವಿದೆ. ಅಂತಹ ಅಧಿಕಾರ ರಾಜ್ಯಗಳಲ್ಲಿರುವ ವಿಧಾನ ಪರಿಷತ್‌ಗಿಲ್ಲ. ವಿಧಾನ ಪರಿಷತ್‌ನ ಸಲಹೆ, ನಿರ್ಧಾರಗಳನ್ನು ತಿರಸ್ಕರಿಸುವ ಅಧಿಕಾರ ವಿಧಾನಸಭೆಗಿದೆ. ಅಲ್ಲದೆ ಪರಿಷತ್‌ ಸದಸ್ಯರಿಗೆ, ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕುವ ಅಧಿಕಾರವಿಲ್ಲ. ಹಾಗೆಯೇ ಸಾಂವಿಧಾನಿಕವಾಗಿ ಪರಿಷತ್‌ ಮಹತ್ವದ ಸ್ಥಾನ ಹೊಂದಿಲ್ಲ.

ಪರಿಷತ್‌ ಇರುವ ರಾಜ್ಯಗಳು
ಬಿಹಾರ (58 ಸ್ಥಾನಗಳು)
ಕರ್ನಾಟಕ (75)
ಮಹಾರಾಷ್ಟ್ರ (78)
ತೆಲಂಗಾಣ (40)
ಉತ್ತರಪ್ರದೇಶ (100)

2010ರಲ್ಲಿ ತಮಿಳುನಾಡಿನಲ್ಲಿ ವಿಧಾನ ಪರಿಷತ್‌ ರದ್ದಾಯಿತು. ಜಮ್ಮು- ಕಾಶ್ಮೀರದಲ್ಲೂ ಪರಿಷತ್‌ ಇತ್ತು. ಆದರೆ ಆ ರಾಜ್ಯವನ್ನು 2 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿರುವುದರಿಂದ ಅಲ್ಲೂ ಪರಿಷತ್‌ ರದ್ದಾಗಿದೆ. ರಾಜಸ್ಥಾನ, ಅಸ್ಸಾಂ ನಲ್ಲಿ ಮೇಲ್ಮನೆ ಸ್ಥಾಪಿಸುವ ಪ್ರಸ್ತಾವ ಇದೆ.

Advertisement

Udayavani is now on Telegram. Click here to join our channel and stay updated with the latest news.

Next