ಮಂಗಳೂರು: ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದ ವಿಶೇಷ ಉದ್ದೇಶ ವಾಹಕದ (ಸ್ಪೆಷಲ್ ಪರ್ಪಸ್ ವೆಹಿಕಲ್-ಎಸ್‌ವಿಪಿ) 2ನೇ ಸಭೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆ. 26ರಂದು ಜರಗಿತು.
ಸ್ಮಾರ್ಟ್‌ಸಿಟಿ ಅನುಷ್ಠಾನದ ಪ್ರಥಮ ಹಂತವಾಗಿ ನಗರದ ಎ.ಬಿ. ಶೆಟ್ಟಿ ವೃತ್ತದಿಂದ ಮಿನಿ ವಿಧಾನಸೌಧದ ಮುಂಭಾಗದ ವರೆಗಿನ (ಹಿಂದಿನ ಕ್ಲಾಕ್ ಟವರ್) ರಸ್ತೆಯನ್ನು ಸ್ಮಾರ್ಟ್‌ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಸಭೆಯಲ್ಲಿ ನಿರ್ಧರಿಸ ಲಾಯಿತು. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ, ದ.ಕ. ಜಿಲ್ಲೆಯ ನಿಕಟಪೂರ್ವ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಮಾರ್ಟ್‌ಸಿಟಿಯ ವಿವಿಧ ಪ್ರಸ್ತಾವನೆಗಳ ಅನುಷ್ಠಾನ ಕುರಿತಂತೆ ಚರ್ಚೆ ನಡೆಯಿತು.
ಮಂಗಳೂರು ಹಳೆಯ ಬಸ್‌ನಿಲ್ದಾಣದಲ್ಲಿ ಬಹುಅಂತಸ್ತುವಾಹನ ನಿಲುಗಡೆ, ಪಾನ್‌ಸಿಟಿ (ಡಿಜಿಟಲೀಕರಣ-ತಂತ್ರ ಜ್ಞಾನ, ಸರಕಾರಿ ಕಚೇರಿಗಳ ರೂಫ್‌ಟಾಪ್‌ನಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ವ್ಯವಸ್ಥೆ ಅಳವಡಿಕೆ, ರಸ್ತೆಗಳ ಎಲ್ಲ ಬೀದಿ ದೀಪಗಳನ್ನು ಸೋಲಾರ್ ಎಲ್‌ಇಡಿ ದೀಪಗಳಾಗಿ ಪರಿವರ್ತನೆ ಸರಕಾರಿ ಕಚೇರಿಗಳ ವಿದ್ಯುತ್‌ದೀಪಗಳನ್ನು ಎಲ್‌ಇಡಿಗೆ ಪರಿವರ್ತನೆ, ಸುವ್ಯವಸ್ಥಿತ ಬಸ್‌ಬೇಗಳ ಸೇರಿದಂತೆ ವಿವಿಧ ಪ್ರಸ್ತಾವಗಳ ಪ್ರಥಮ ಹಂತದ ಅನುಷ್ಠಾನದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ನಿರ್ಧಾರ ಕೈಗೊಳ್ಳಲಾಯಿತು.
ಒಟ್ಟು 2,000 ಕೋ.ರೂ. ವೆಚ್ಚದ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಸರಕಾರದಿಂದ 25 ಕೋ.ರೂ. ಹಾಗೂ ರಾಜ್ಯ ಸರಕಾರದಿಂದ 25 ಕೋ.ರೂ. ಸೇರಿದಂತೆ ಒಟ್ಟು 50 ಕೋ.ರೂ. ಬಿಡುಗಡೆಯಾಗಿದೆ. ವಿಶೇಷವಾಹಕದ ಮೊದಲ ಸಭೆಯು ಮೇ 2ರಂದು ಬೆಂಗಳೂರಿನಲ್ಲಿ ವಿಕಾಸ ಸೌಧದಲ್ಲಿ ನಡೆದಿತ್ತು.
ಪೌರಾಡಳಿದ ನಿರ್ದೇಶನಾಲಯದ ಕಾರ್ಯದರ್ಶಿ ಹಾಗೂ ಮಂಗಳೂರು ಸ್ಮಾರ್ಟ್‌ಸಿಟಿ ಲಿ. ನಾಮನಿರ್ದೇಶಿತ ನಿರ್ದೇಶಕರಾದ ಡಾ| ವಿಶಾಲ್, ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜೆ. ಜಗದೀಶ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ಮನಪಾ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಕಾರ್ಪೊರೇಟರ್‌ಗಳಾದ ಲ್ಯಾನ್ಸಿಲಾಟ್ ಪಿಂಟೋ, ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.
ಪಂಪ್‌ವೆಲ್ ಬಸ್ ನಿಲ್ದಾಣ ಪ್ರಸ್ತಾವ
ನಗರದ ಪಂಪ್‌ವೆಲ್‌ನಲ್ಲಿ ನಿರ್ಮಿಸಲುದ್ದೇಶಿಸಿರುವ ಕೇಂದ್ರ ಬಸ್ ನಿಲ್ದಾಣ ಯೋಜನೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆಯೂ ಆ. 26 ರಂದು ನಡೆದ ಎಸ್‌ವಿಪಿ ಸಭೆಯಲ್ಲಿ ಚರ್ಚೆ ನಡೆದಿದೆ. ಬಹುಕಾಲದಿಂದ ನೆನೆ
ಗುದಿಯಲ್ಲಿರುವ ಈ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಈಗಾಗಲೇ ಮಾದರಿ ರಚನೆಯಾಗಿದ್ದು ಅನುಷ್ಠಾನ ಸ್ವರೂಪದ ಕುರಿತಂತೆ ಪ್ರಕ್ರಿಯೆಗಳು ನಡೆದಿದ್ದರೂ ಇನ್ನೂ ಅಂತಿಮ ನಿರ್ಧಾರವಾಗಿರಲಿಲ್ಲ.