Advertisement

ಬೆಳಗಾವಿ ಅಧಿವೇಶನ 8ರಂದು ನಿರ್ಧಾರ; ಸಿಎಂ ಬಸವರಾಜ ಬೊಮ್ಮಾಯಿ

09:50 PM Nov 03, 2021 | Team Udayavani |

ಹುಬ್ಬಳ್ಳಿ: ಚಳಿಗಾಲ ಅಧಿವೇಶನವನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ನ.8ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ದಿನಾಂಕ ನಿರ್ಧರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ದಿನಾಂಕ ಪ್ರಕಟಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದನ್ನು ನ.8ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.

ಭತ್ತ ಬೆಳೆಯುವ ಕೃಷ್ಣಾ, ಕಾವೇರಿ ಜಲಾನಯನ ಪ್ರದೇಶ ಹಾಗೂ ಕರಾವಳಿ ಭಾಗದ ರೈತರು ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕೆಂಬ ಒತ್ತಡವಿತ್ತು. ಹೀಗಾಗಿ ಸರ್ಕಾರವು ಭತ್ತವನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲು ತೀರ್ಮಾನಿಸಿದೆ. ಕಾರಣ ಅಧಿಕಾರಿಗಳಿಗೆ ಕೂಡಲೇ ಭತ್ತ ಕೊಡುವ ರೈತರ ನೋಂದಣಿಯನ್ನು ದೀಪಾವಳಿ ಆದ ಮೇಲೆ ಮಾಡಿ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದ್ದೇನೆ.
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವ ಕುರಿತು ಸಚಿವ ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನಿಸುತ್ತದೆ. ಭತ್ತವು ಎಂಎಸ್‌ಪಿ ದರ ಮತ್ತು ಪಿಡಿಎಸ್‌ನಲ್ಲಿ ಬರುವುದರಿಂದ ನೇರವಾಗಿ ಸರ್ಕಾರವೆ ತೀರ್ಮಾನಿಸುತ್ತದೆ ಎಂದರು.

ಹಾನಗಲ್ಲ ಸೋಲು ಎಲ್ಲರ ಹೊಣೆ: ಹಾನಗಲ್‌ ಉಪ ಚುನಾವಣೆಯನ್ನು ಸಾಮೂಹಿಕವಾಗಿ ಎಲ್ಲರೂ ಸೇರಿ ಮಾಡಿದ್ದೇವೆ. ಹೀಗಾಗಿ ಸೋಲಿನ ಹೊಣೆ ನಮ್ಮೆಲ್ಲರದ್ದಾಗಿದೆ. ಸೋಲಿನ ಪರಾಮರ್ಶೆ ಮಾಡಲಾಗುವುದು. ನಾನು ಅಂದೇ ಹೇಳಿದ್ದೆ, ನಮ್ಮ ನಾಯಕರಾದ ಅಮಿತ್‌ ಶಾ ನನ್ನ ಹೆಸರು ಹೇಳಿದ್ದರು. ಅದರರ್ಥ ನಾನು ತಂಡದ ಮುಖ್ಯಸ್ಥನಿರಬಹುದು. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದಿದ್ದೆ. ಹಾನಗಲ್‌ ಸೋಲಿಗೆ ಒಗ್ಗಟ್ಟಿನ ಕೊರತೆ ಪ್ರಶ್ನೆಯಿಲ್ಲ. ಈಗಾಗಲೇ ಈ ಬಗ್ಗೆ ವಿಶ್ಲೇಷಣೆ ಮಾಡಿದ್ದೇನೆ ಎಂದರು.

ಬಿಟ್‌ ಕ್ವಾಯಿನ್‌ ವಿಚಾರದಲ್ಲಿ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ನಾವೇ ಅವರನ್ನು ಬಂಧಿಸಿ, ಮೂರು ಪ್ರಕರಣ ದಾಖಲಿಸಿದ್ದೇವೆ. ವಿಚಾರಣೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಸಿದ್ದೇವೆ. ವಿಚಾರಣೆ ವೇಳೆ ಇಡಿಗೆ ಶಿಫಾರಸು ಮಾಡಬೇಕು ಎಂದಿದ್ದಕ್ಕೆ ಇಡಿಗೆ ಶಿಫಾರಸು ಮಾಡಿದ್ದೇವೆ. ಇದರಲ್ಲಿ ಅಂತಾರಾಷ್ಟ್ರೀಯ ವಹಿವಾಟು ನಡೆದಿರುವುದರಿಂದ ಸಿಬಿಐ ಇಂಟರ್‌ ಪೋಲ್‌ಗೆ ತನಿಖೆಗೆ ವಹಿಸಿದ್ದೇವೆ ಎಂದರು.

Advertisement

ಸರ್ಕಾರದ ನೂರು ದಿನದ ಚಿತ್ರಣ ಇಂದು ಕೊಡುತ್ತೇನೆ
ನನ್ನ ಸರ್ಕಾರ ನೂರು ದಿನ ಪೂರೈಸಿದ್ದು ದೊಡ್ಡ ಮೈಲುಗಲ್ಲು ಅಲ್ಲ. ಒಂದು ವರ್ಷವಾದರೂ ಆಗಬೇಕು. ಪ್ರಾರಂಭಿಕವಾಗಿ ನಾವು ಹೇಗೆ ನಡೆದುಕೊಂಡಿದ್ದೇವೆ ಅಂತ ಹೇಳಬಹುದು. ನೂರು ದಿವಸಗಳಲ್ಲಿ ಯಾವ ರೀತಿ ಹೊಸ ಹೆಜ್ಜೆಗಳನ್ನು ಇಟ್ಟಿದ್ದೇವೆ, ಹೊಸ ನಿರ್ಧಾರ ಕೈಗೊಂಡಿದ್ದೇವೆ. ಈ ಸಂದರ್ಭದಲ್ಲಿಯ ಹೊಸ ಸವಾಲುಗಳು ಏನು, ಅವುಗಳನ್ನು ಹೇಗೆ ಎದುರಿಸಿದ್ದೇವೆ ಎಂಬ ಸ್ಪಷ್ಟವಾದ ಚಿತ್ರವನ್ನು ನ.4ರಂದು ಕೊಡುವ ಪ್ರಯತ್ನ ಮಾಡಲಾಗುವುದು. ಇಲಾಖೆಗಳ ಪ್ರಗತಿಯ ಮೌಲ್ಯಮಾಪನ ನಿರಂತರವಾಗಿ ನಡೆಯುತ್ತಿರುತ್ತದೆ. ನೂರು ದಿನಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next