ಸುವರ್ಣವಿಧಾನಸೌಧ: ಬೆಳಗಾವಿಯಲ್ಲಿ ಆರಂಭವಾಗಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ ಅರ್ಧಕ್ಕೆ ಮೊಟಕುಗೊಳಿಸದೇ ಹತ್ತು ದಿನ ಪೂರ್ಣಗೊಳಿಸಲು ಸದನ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ಸದನ ಸಲಹಾ ಸಮಿತಿ ಸಭೆಯಲ್ಲಿ ಈಗಾಗಲೇ ನಿರ್ಧರಿಸಿರುವಂತೆ ಡಿಸೆಂಬರ್ 24 ರವರೆಗೂ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.
ಅಧಿವೇಶನದಲ್ಲಿ ಸರ್ಕಾರವು ಒಂಬತ್ತು ಹೊಸ ವಿಧೇಯಕಗಳನ್ನು ಮಂಡಿಸುವುದಾಗಿ ಸಭೆಗೆಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ. ಲವ್ ಜಿಹಾದ್ ಹಾಗೂ ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡುವ ಬಗ್ಗೆ ಎರಡು ದಿನ ಮೊದಲೇ ತಮ್ಮ ಗಮನಕ್ಕೆ ತರಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಅಧಿವೇಶನದ ಮೊದಲವಾರ ಉತ್ತರ ಕರ್ನಾಟಕ ಭಾಗದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:BBMP ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಸೇರಿ 40ಕ್ಕೂ ಅಧಿಕ ಜನರಿಂದ ನೇತ್ರದಾನಕ್ಕೆ ವಾಗ್ದಾನ
ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶಂಪೂರ್, ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ ಹಾಜರಿದ್ದರು.