ಚಾಮರಾಜನಗರ: ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಬಹುದಿನಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 2019-20ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಲು ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ರಾಜ್ಯ ಪದವಿಪೂರ್ವ ಕಳ ಉಪನ್ಯಾಸಕರ ಸಂಘ ನಿರ್ಧರಿಸಿವೆ ಎಂದು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಸಿ. ಮಂಜುನಾಥಪ್ರಸನ್ನ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಬಹುದಿನಗಳ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು 4 ಹಂತದ ಹೋರಾಟಗಳನ್ನು ರೂಪಿಸಲಾಗಿದೆ. ಆದರೂ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಯಾವುದೇ ಬೇಡಿಕೆಗಳು ಈಡೇರದ ಕಾರಣದಿಂದ ಸರ್ಕಾರ ವಿಳಂಬ ಧೋರಣೆಯಿಂದ ಬೇಸತ್ತು ಈ ಸಾಲಿನ ಪದವಿಪೂರ್ವ ಶಿಕ್ಷಣ ಇಲಾಖೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಲು ಎರಡೂ ಸಂಘಗಳ ಪದಾಧಿಕಾರಿಗಳು ನಿರ್ಧರಿಸಿದ್ದೇವೆ ಎಂದರು.
ಕೋವಿಡ್ 19 ಹಿನ್ನೆಲೆ ಮೌಲ್ಯಮಾಪನ ಮುಂದೂಡಿ : ಕೋವಿಡ್ ವೈರಸ್ ಭೀತಿ ಹಿನ್ನೆಲೆಯಲ್ಲಿ ಮೊದಲು ಮೌಲ್ಯಮಾಪನವನ್ನು ಮುಂದೂಡಬೇಕು ಎಂದು ಒತ್ತಾಯಿಸಿದ ಅವರು, ನಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾ.28 ರಿಂದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದರು. ಪ್ರಾಂಶುಪಾಲರ ಸಂಘದ ಪ್ರಮುಖ ಬೇಡಿಕೆಗಳಾದ ಜಿ.ಕುಮಾರ್‌ನಾಯಕ್ ಸಮಿತಿ ವರದಿಯನ್ವಯ ರಾಜ್ಯ ಪ್ರಾಚಾರ್ಯರಿಗೆ ವೇತನ ಬಡ್ತಿ ನೀಡುವುದು, 20, 25 ವರ್ಷಗಳ ನಿರಂತರ ಸೇವೆ ಪೂರ್ಣಗೊಳಿಸಿರುವ ಪ್ರಾಚಾರ್ಯರಿಗೆ ವಿಶೇಷ ವೇತನ ಬಡ್ತಿ ನೀಡುವುದು, ಅನುದಾನಿತ ಪ್ರಾಚಾರ್ಯರಿಗೆ ನಿವೃತ್ತಿ ಸಂದರ್ಭದಲ್ಲಿ 247/ಎ ಅನ್ನು ಅನುಷ್ಠಾನಗೊಳಿಸವುದು, ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವಿನ ಅನುಪಾತವನ್ನು ಇಳಿಸಬೇಕು ಎಂದು ಒತ್ತಾಯಿಸಿದರು. ಸಂಘದ ಬೇಡಿಕೆಗಳ ಈಡೇರಿಸದಿದ್ದರೆ ಮೌಲ್ಯಮಾಪನ ಕಾರ್ಯವನ್ನು ಅಂತಿಮ ಹಂತವಾಗಿ ಬಹಿಷ್ಕರಿಸಲಾಗವುದು ಎಂದು ಮಂಜುನಾಥಪ್ರಸನ್ನ ಎಚ್ಚರಿಸಿದರು.
ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಆರ್.ಪಿ. ನರೇಂದ್ರನಾಥ್ ಮಾತನಾಡಿ, ಕೋವಿಡ್ ವೈರಸ್ ಭೀತಿ ಹಿನ್ನೆಲೆಯಲ್ಲಿ ಉಪನ್ಯಾಸಕರ ಹಿತದೃಷ್ಠಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರವನ್ನು ಆಯಾಯ ಜಿಲ್ಲಾ ಕೇಂದ್ರದಲ್ಲಿ ತೆರೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು. ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ 10, 15, 20, 25 ವರ್ಷಗಳ ಕಾಲಮಿತಿ ಬಡ್ತಿಯನ್ನು ಕೂಡಲೇ ಮಂಜೂರು ಮಾಡಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಬಂಗಾರನಾಯಕ ಮಾತನಾಡಿ, ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ಖಾಲಿಯಿರುವ ಡಿ.ಗ್ರೂಪ್, ಗುಮಾಸ್ತ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ ತಾತ್ಕಾಲಿಕ ನೇಮಕಾತಿಗೆ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಡಿ.ಸಿ.ಲಿಂಗರಾಜು ಹಾಜರಿದ್ದರು.