ಹರಿಹರ: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೂ. 25 ರಿಂದ ಪ್ರತಿ ದಿನ ಮಧ್ಯಾಹ್ನ 2 ಗಂಟೆ ನಂತರ ನಗರದ ಎಲ್ಲಾ ಅಂಗಡಿ-ಮುಂಗಟ್ಟು ಬಂದ್ ಮಾಡುವ ಮೂಲಕ ಸ್ವಯಂಪ್ರೇರಿತ ಲಾಕ್‌ಡೌನ್ ಮಾಡಲು ಬುಧವಾರ ನಗರದ ಮಿನಿ ವಿಧಾನ ಸೌಧದಲ್ಲಿ ನಡೆದ ಅಧಿಕಾರಿಗಳು, ವ್ಯಾಪಾರಸ್ಥರ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ರಾಮಪ್ಪ ಮಾತನಾಡಿ, ತಾಲೂಕಿನಲ್ಲಿ ದಿನೇ ದಿನೇ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ವೈರಾಣು ಹರಡದಂತೆ ತಡೆಯಲು ನಾವೆಲ್ಲಾ ಕೆಲ ಸ್ವಯಂ ನಿರ್ಬಂಧ ಹಾಕಿಕೊಳ್ಳುವುದು ಅನಿವಾರ್ಯವಾಗಿದೆ. ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳು ಮಧ್ಯಾಹ್ನ 2 ಗಂಟೆಯ ನಂತರ ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವೈರಸ್ ಹರಡದಂತೆ ಸಹಕರಿಸಬೇಂಕೆದು ಮನವಿ ಮಾಡಿದರು.
ಹಿಂದೆ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿದ್ದ ಸಂದರ್ಭದಲ್ಲಿ ತಾಲೂಕಿನಲ್ಲಿ ಒಂದೂ ಕೋವಿಡ್ ಪ್ರಕರಣಗಳಿರಲಿಲ್ಲ. ಈಗ ವೈರಾಣು ತೀವ್ರವಾಗಿ ವ್ಯಾಪಿಸುತ್ತಿದ್ದು, ಹಿಂದಿಗಿಂತಲೂ ಈಗ ಲಾಕ್‌ಡೌನ್ ಅತ್ಯಂತ ಅಗತ್ಯವಾಗಿದೆ. ಇಲ್ಲದಿದ್ದರೆ ನೋಡ ನೋಡುತ್ತಿದ್ದಂತೆ ಸೋಂಕು ಎಲ್ಲರ ಮನೆಬಾಗಿಲಿಗೆ ಬರುವ ಅಪಾಯವಿದೆ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ತಾಲೂಕಿನಲ್ಲಿ ಸೋಂಕು ಹೆಚ್ಚಾಗುತ್ತಿರುವುದನ್ನು ಮನಗಂಡು ನಗರದ ಕೆಲವು ವರ್ತಕರು ಮಧ್ಯಾಹ್ನದ ನಂತರ ನಗರವನ್ನು ಬಂದ್ ಮಾಡಲು ತಾಲೂಕು ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಶಾಸಕರೊಂದಿಗೆ ಚರ್ಚಿಸಿ ಈ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಸಭೆಯಲ್ಲಿ ವ್ಯಾಪಾರಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ನಂತರ ನಗರದ ಎಲ್ಲಾ ವ್ಯಾಪಾರ-ವಹಿವಾಟುಗಳನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆವರೆಗೂ ಮಾತ್ರ ನಡೆಸಲು ಹಾಗೂ ಮಧ್ಯಾಹ್ನದಿಂದ ಎಲ್ಲಾ ಚಟುವಟಿಕೆ ಬಂದ್ ಮಾಡಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡಿಕೊಳ್ಳಬೇಕು. ಈ ಕುರಿತು ಯಾರೂ ಒತ್ತಡ ಹೇರುವಂತಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಹಂತ ಹಂತವಾಗಿ ಸಂಪೂರ್ಣ ಬಂದ್ ಮಾಡುವ ಪ್ರಯತ್ನ ಮಾಡಲಾಗುವುದು. ಕಂಟೇನ್ಮೆಂಟ್ ಝೋನ್‌ಗೆ ಎಲ್ಲಾ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಯಾರಾದರೂ ಅನಾಶ್ಯಕವಾಗಿ ಸುತ್ತಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಶಾಸಕರು ಪೊಲೀಸರಿಗೆ ಸೂಚಿಸಿದರು.
ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ, ಸಿಪಿಐ ಶಿವಪ್ರಸಾದ್, ಚೇಂಬರ್ ಆಪ್ ಕಾಮರ್ಸ್ ಅಧ್ಯಕ್ಷ ಶಂಕರ್ ಕಟಾವಕರ್, ಉದ್ಯಮಿಗಳಾದ ಎಚ್. ಬಸವರಾಜು, ಶಿವಪ್ರಕಾಶ್ ಶಾಸ್ತ್ರಿ, ಮಾಲತೇಶ್ ಭಂಡಾರಿ, ಆರ್.ಆರ್. ಕಾಂತರಾಜ್ ಇದ್ದರು.