Advertisement

ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

10:43 AM Mar 29, 2022 | Team Udayavani |

ಧಾರವಾಡ: ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏ.5ರಂದು ಹಸಿರು ಕ್ರಾಂತಿ ಹರಿಕಾರ ಡಾ|ಬಾಬು ಜಗಜೀವನರಾಮ್‌ ಹಾಗೂ ಏ.14ರಂದು ಸಂವಿಧಾನ ಶಿಲ್ಪಿ ಡಾ|ಬಿ.ಆರ್‌. ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸಲಾಗುವುದು ಎಂದು ಡಿಸಿ ನಿತೇಶ್‌ ಪಾಟೀಲ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಎರಡೂ ಜಯಂತಿ ಕಾರ್ಯಕ್ರಮಗಳನ್ನು ಕವಿಸಂನಲ್ಲಿ ಹಮ್ಮಿಕೊಳ್ಳಲಾಗುವುದು.

ಡಾ|ಬಾಬು ಜಗಜೀವನರಾಮ್‌ ಜಯಂತಿ ಹಾಗೂ ಡಾ|ಬಿ.ಆರ್‌.ಅಂಬೇಡ್ಕರ್‌ ಜಯಂತಿ ದಿನಗಳಾದ ಕ್ರಮವಾಗಿ ಏ.5 ಹಾಗೂ ಏ.14 ರಂದು ಬೆಳಿಗ್ಗೆ 8:00 ಗಂಟೆಗೆ ಡಿಸಿ ಕಚೇರಿ ಆವರಣದಿಂದ ಕಲಾತಂಡಗಳು ಹಾಗೂ ಮಹಾತ್ಮರ ಭಾವಚಿತ್ರ ಮೆರವಣಿಗೆ ಆರಂಭವಾಗಲಿದ್ದು, ವೀರ ಸಿಂಧೂರ ಲಕ್ಷ್ಮಣ ವೃತ್ತ(ಕೋರ್ಟ್‌ ಸರ್ಕಲ್‌) ಸಂಗಮ್‌ ವೃತ್ತ, ಜೈಭೀಮ್‌ ನಗರ, ವಿವೇಕಾನಂದ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕವಿಸಂ ತಲುಪಲಿದೆ.

ಮಧ್ಯಾಹ್ನ 12:00 ಗಂಟೆಗೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುವುದು. ಎರಡೂ ಜಯಂತಿ ಕಾರ್ಯಕ್ರಮಗಳಿಗೆ ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಐವರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಇದಕ್ಕಾಗಿ ಉಪಸಮಿತಿ ರಚಿಸಿ ಸಾಧಕರನ್ನು ಆಯ್ಕೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಮಹಿಳೆಯರಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗುವುದು ಎಂದರು.

ಜಿಪಂ ಸಿಇಒ ಡಾ|ಸುರೇಶ ಇಟ್ನಾಳ ಮಾತನಾಡಿ, ಜಯಂತಿ ಆಚರಣೆಯ ಮೂಲಕ ಸಾಧಕರ ಜೀವನ-ಸಾಧನೆಗಳನ್ನು ಅರಿಯುವ ಕೆಲಸಗಳಾಗಬೇಕು ಎಂದರು.

Advertisement

ಹೋರಾಟಗಾರ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಏ.14ರಂದು ಜಯಂತಿ ಕಾರ್ಯಕ್ರಮ ನಂತರ ಮೈಸೂರು ರಂಗಾಯಣ ನಿರ್ಮಿಸಿದ ಸರ್ವರಿಗೂ ಸಂವಿಧಾನ ನಾಟಕ ಪ್ರದರ್ಶನ ಏರ್ಪಡಿಸಲು ಸಲಹೆ ನೀಡಿದರು.

ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಡಾ|ಎನ್‌. ಆರ್‌.ಪುರುಷೋತ್ತಮ ಸಭೆ ನಿರ್ವಹಿಸಿದರು. ಡಿವೈಎಸ್‌ಪಿ ಚಂದ್ರಕಾಂತ ಪೂಜಾರಿ, ಆಹಾರ ಇಲಾಖೆ ಉಪನಿರ್ದೇಶಕ ಸುಧೀರ್‌ ಸಾವ್ಕಾರ್‌, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಸುಶೀಲಾ ಚಲವಾದಿ, ಮಹದೇವ ದೊಡ್ಡಮನಿ, ಅಶೋಕ ದೊಡ್ಡಮನಿ, ಸಂಗಮೇಶ ಮಾದರ, ಅಶೋಕ ಭಂಡಾರಿ, ಡಾ|ವಿಶ್ವನಾಥ ಚಿಂತಾಮಣಿ ಸೇರಿದಂತೆ ಜಿಲ್ಲಾ ಜಾಗೃತ ಸಮಿತಿ, ಸಫಾಯಿ ಕರ್ಮಚಾರಿಗಳ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next