Advertisement

ಕಾಪು ಪೇಟೆಯಲ್ಲಿ ಒಂದು ವಾರ ನಿಗಧಿತ ಅವಧಿಯ ಸೇವೆಗೆ ವರ್ತಕರಿಂದ ನಿರ್ಧಾರ

07:54 PM Aug 06, 2020 | keerthan |

ಕಾಪು: ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್19 ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ನಿಗಧಿತ ಅವಧಿಯ ವ್ಯಾಪಾರ ನಡೆಸಲು ಕಾಪು ಪೇಟೆಯ ವರ್ತಕರು ನಿರ್ಧರಿಸಿದ್ದಾರೆ.

Advertisement

ಕಾಪು ಆಸುಪಾಸಿನಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರ ಮತ್ತು ಸಾರ್ವಜನಿಕರ ಹಿತ ದೃಷ್ಟಿಯಿಂದ ವರ್ತಕರು ಮತ್ತು ಪುರಸಭಾ ಸದಸ್ಯರ ಮನವಿಯ ಮೇರೆಗೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲು ಸಮ್ಮತಿ ವ್ಯಕ್ತವಾಗಿದೆ.

ಗುರುವಾರ ಈ ಬಗ್ಗೆ ಕಾಪು ಪೇಟೆಯ ವರ್ತಕರು, ಜನಪ್ರತಿನಿಧಿಗಳು ಮತ್ತು ನಾಗರಿಕರು ಜೊತೆ ಸೇರಿ ನಿರ್ಧರಿಸಿದಂತೆ ಆ. 7 ರಿಂದ ಆ. 14ರವರೆಗೆ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರಾ ಕಾರ್ಯ ನಿರ್ವಹಿಸಿ, ಉಳಿದ ಸಮಯಗಳಲ್ಲಿ ಸಂಪೂರ್ಣ ಬಂದ್ ನಡೆಸಲು ನಿರ್ಧರಿಸಲಾಗಿದೆ ಎಂದು ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಾದೂರು ತಿಳಿಸಿದ್ದಾರೆ.

ಕಾಪು ಪೇಟೆ ಮತ್ತು ಮಾರ್ಕೆಟ್ ವ್ಯಾಪ್ತಿಯ ಇಬ್ಬರು ವರ್ತಕರು ಕೋವಿಡ್-19 ಹಾವಳಿಗೆ ಬಲಿಯಾಗಿದ್ದು, ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

ಕಾಪು ಮಾರ್ಕೆಟ್ ನಲ್ಲಿ ಸೋಂಕು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಬುಧವಾರ ಮಾರ್ಕೆಟ್ ನ್ನು ಸಂಪೂರ್ಣ ಸ್ಯಾನಿಟೈಸೇಷನ್ ಮಾಡಲಾಗಿದ್ದು, ಗುರುವಾರ ಮಾರ್ಕೆಟ್ ನಲ್ಲಿ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು.

Advertisement

ಗುರುವಾರ ಬಗ್ಗೆ ಸಭೆ ಸೇರಿ ಸಮಾಲೋಚನೆ ನಡೆಸಿದ ವರ್ತಕರು ಮತ್ತು ಜನಪ್ರತಿನಿಧಿಗಳು ಜೊತೆಗೂಡಿ ಕಾಪು ಪೇಟೆಯ ಎಲ್ಲಾ ಅಂಗಡಿ, ವ್ಯಾಪಾರ ಮಳಿಗೆ, ವಾಣಿಜ್ಯ ಮಳಿಗೆ, ಆರ್ಥಿಕ ಸಂಸ್ಥೆಗಳು, ರಿಕ್ಷಾ, ಕಾರು, ಟೆಂಪೋ ವಾಹನ ಚಾಲಕರು ಮತ್ತು ಮಾಲಕರ ಬಳಿಗೆ ತೆರಳಿ ಸ್ವಯಂ ಪ್ರೇರಿತಾಗಿ ನಿಗಧಿತ ಅವಧಿಯೊಳಗಿನ ವ್ಯವಹಾರ ನಡೆಸುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

ಇದಕ್ಕೆ ನಾಗರಿಕರು ಮತ್ತು ವರ್ತಕರು ಪೂರ್ಣ ಸಹಕಾರದ ಭರವಸೆ ನೀಡಿದ್ದು, ಆ.7 ಶುಕ್ರವಾರದಿಂದ ಆ. 14ರ ಶುಕ್ರವಾರದವರೆಗೆ ಬಂದ್ ನಡೆಸಿ, ಕಾಪು ಪೇಟೆಯನ್ನು ಸಂಪೂರ್ಣ ಮಾಡಲಾಗುವುದು ಎಂದು ಪುರಸಭೆಯ ಪ್ರಕಟಣೆ ತಿಳಿಸಿದೆ.

ಮೀನುಗಾರ ಮಹಿಳೆಯರಿಂದ ಬೆಂಬಲ: ಕೋವಿಡ್ ನಡುವೆಯೂ ಕಾಪು ಮಾರ್ಕೆಟ್ ನಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಮೀನುಗಾರ ಮಹಿಳೆಯರು ಗುರುವಾರದಿಂದಲೇ ಒಂದು ವಾರ ಕಾಪು ಮಾರ್ಕೆಟ್ ನೊಳಗೆ ಮೀನು ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಪುರಸಭಾ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ಕೆ.ಎಚ್. ಉಸ್ಮಾನ್, ಕಿರಣ್ ಆಳ್ವ, ಮಹಮ್ಮದ್ ಇಮ್ರಾನ್, ರಮೇಶ್ ಹೆಗ್ಡೆ, ಸುರೇಶ್ ದೇವಾಡಿಗ, ಶಾಬು ಸಾಹೇಬ್, ಮೋಹಿನಿ ಶೆಟ್ಟಿ, ಶಾಂಭವಿ ಕುಲಾಲ್, ಸುಲೋಚನಾ ಬಂಗೇರ, ಗುಲಾಬಿ ಪಾಲನ್, ಶಾಂತಲತಾ ಶೆಟ್ಟಿ, ಕಾಪು ವರ್ತಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ರೈ, ರಾಮ್ ನಾಯಕ್, ಪ್ರದೀಪ್ ಕುಮಾರ್, ದೇವರಾಜ್ ಕೋಟ್ಯಾನ್, ಜಗದೀಶ್ ಮೆಂಡನ್,  ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next