Advertisement

ಪಂಪ್‌ವೆಲ್‌ನಲ್ಲೇ ಕೇಂದ್ರ ಬಸ್‌ ನಿಲ್ದಾಣ

01:15 AM Oct 20, 2019 | mahesh |

ಮಂಗಳೂರು: ನಗರದ ಕೇಂದ್ರ ಬಸ್‌ ನಿಲ್ದಾಣವನ್ನು ಮೂಲ ಪ್ರಸ್ತಾವನೆಯಲ್ಲಿರುವಂತೆ ಪಂಪ್‌ವೆಲ್‌ನಲ್ಲೇ ನಿರ್ಮಿಸಲು ಸ್ಮಾರ್ಟ್‌ ಸಿಟಿ ಲಿ. ನಿರ್ಧರಿಸಿದೆ. ಈ ಮೂಲಕ ಈ ಹಿಂದೆ ನಗರದ ಕೂಳೂರು, ಪಡೀಲ್‌ನಲ್ಲಿ ಪ್ರಸ್ತಾವನೆಯಲ್ಲಿದ್ದ ಕೇಂದ್ರ ಬಸ್‌ ನಿಲ್ದಾಣ ನಿರ್ಮಾಣ ಯೋಜನೆ ಮತ್ತೆ ಪಂಪ್‌ವೆಲ್‌ ತಾಣಕ್ಕೆ ವರ್ಗಾವಣೆಗೊಂಡಿದೆ.

Advertisement

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅಧ್ಯಕ್ಷತೆಯಲ್ಲಿ ಶನಿವಾರ ಜರಗಿದ್ದ ಸ್ಮಾರ್ಟ್‌ ಸಿಟಿ ಯೋಜನೆಗಳ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಸ್ಮಾರ್ಟ್‌ ಸಿಟಿ ಲಿ.ನ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್‌ ನಜೀರ್‌, ಪಡೀಲ್‌ನಲ್ಲಿ ಕೇಂದ್ರ ಬಸ್‌ ನಿಲ್ದಾಣ ತೀರ್ಮಾನಿಸಲಾಗಿತ್ತು. ಇದಕ್ಕೆ ಭೂಮಿಯನ್ನು ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟನೆ ನೀಡಲಾಗಿದ್ದರೂ ಸ್ಪಂದನೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮನಪಾ ಪಂಪ್‌ವೆಲ್‌ನಲ್ಲಿ ಈಗಾಗಲೇ ಸ್ವಾಧೀನ ಪಡಿಸಿಕೊಂಡಿರುವ 7.5 ಎಕರೆ ಜಾಗದಲ್ಲಿಯೇ ಬಸ್‌ ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿದೆ. ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡು ಟೆಂಡರ್‌ ಪ್ರಕ್ರಿಯೆ ನಡೆಸಲಾಗುವುದು. 445 ಕೋ.ರೂ. ವೆಚ್ಚದಲ್ಲಿ ಕೇಂದ್ರ ಬಸ್‌ನಿಲ್ದಾಣ ನಿರ್ಮಿಸುವ ಪ್ರಸ್ತಾವನೆ ಸಿದ್ಧಗೊಂಡಿದೆ ಎಂದರು.

ವೆನಲಾಕ್, ಲೇಡಿಗೋಶನ್‌ ಆಸ್ಪತ್ರೆ ಅಭಿವೃದ್ಧಿ
ನಗರದ ಜಿಲ್ಲಾ ವೆನಲಾಕ್ ಆಸ್ಪತ್ರೆಯಲ್ಲಿ 30 ಬೆಡ್‌ಗಳ ತುರ್ತು ನಿಗಾ ಘಟಕ, 100 ಹಾಸಿಗೆಗಳ ವಿಭಾಗ ಸೇರಿದಂತೆ ನಾಲ್ಕು ವ್ಯವಸ್ಥೆಗಳಿಗೆ 45 ಕೋ.ರೂ. ವೆಚ್ಚದ ಪ್ರಸ್ತಾವನೆ ಇದೆ. ಮಿಲಾಗ್ರಿಸ್‌ ಐಎಂಎ ಮೂಲಕ ಅತ್ತಾವರಕ್ಕೆ ಸಾಗುವ ರಸ್ತೆಯನ್ನು ಅಗಲಗೊಳಿಸಿ ಪ್ರಸ್ತುತ ರೈಲ್ವೇ ನಿಲ್ದಾಣದಿಂದ ಮಿಲಾಗ್ರಿಸ್‌ಗೆ ಬರುವ ರಸ್ತೆಯನ್ನು ಮುಚ್ಚಿ ವೆನಲಾಕ್ನ ಎರಡು ಬ್ಲಾಕ್‌ಗಳನ್ನು ಜೋಡಿಸುವ ಪ್ರಸ್ತಾವನೆಯನ್ನು ಆಸ್ಪತ್ರೆ ಮುಂದಿಟ್ಟಿದೆ. ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಹೊಸದಾಗಿ ಎಂಆರ್‌ಪಿಎಲ್‌ ನೆರವಿನೊಂದಿಗೆ ನಿರ್ಮಿಸಿರುವ ಹೊಸ ಕಟ್ಟಡದಲ್ಲಿ ಇನ್ನೊಂದು ಅಂತಸ್ತು ವಿಸ್ತರಣೆಗೆ 5 ಕೋ.ರೂ. ವೆಚ್ಚದ ಪ್ರಸ್ತಾವನೆ ಇದೆ ಎಂದು ಮಹಮ್ಮದ್‌ ನಜೀರ್‌ ತಿಳಿಸಿದರು.

10 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳಾ ಕ್ರೀಡಾಂಗಣ ಮತ್ತು 5 ಕೋಟಿ ರೂಪಾಯಿ ವೆಚ್ಚದಲ್ಲಿ ಉರ್ವಾ ಮೈದಾನಗಳನ್ನು ಅಭಿವೃದ್ಧಿಪಡಿಸುವ ಯೋಜನೆಯ ಡಿಪಿಆರ್‌ ಪ್ರಗತಿಯಲ್ಲಿದ್ದು, ಅ. 31ರೊಳಗೆ ಸಲ್ಲಿಸಲು ಸೂಚಿಸಲಾಗಿದೆ ಎಂದು ನಜೀರ್‌ ತಿಳಿಸಿದರು. ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಕ್ರೆಡೈ ಚೇರ್ಮನ್‌ ಡಿ.ಬಿ. ಮೆಹ್ತಾ ಮತ್ತು ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಬಹು ಅಂತಸ್ತು ಕಾರು ಪಾರ್ಕಿಂಗ್‌
ಹಳೆ ಬಸ್‌ನಿಲ್ದಾಣದಲ್ಲಿ ಬಹು ಅಂತಸ್ತು ಕಾರು ಪಾರ್ಕಿಂಗ್‌ ನಿರ್ಮಾಣಕ್ಕೆ ಟೆಂಡರ್‌ ಆಗಿದ್ದು, ಕೆಲಸದ ಆದೇಶ ನೀಡಲಾಗಿದೆ. ಬೆಂಗಳೂರಿನ ಕಂಪೆನಿಯೊಂದು ಟೆಂಡರ್‌ ವಹಿಸಿಕೊಂಡಿದೆ. ಈ ಪ್ರದೇಶದಲ್ಲಿ ಒಟ್ಟು 5 ಕಟ್ಟಡಗಳಿದ್ದು, 22 ಮಂದಿ ಅಂಗಡಿದಾರರಿದ್ದಾರೆ. ಅವರನ್ನು ಒಳಗೊಂಡು ಕಾರು ಪಾರ್ಕಿಂಗ್‌ ಕಾಂಪ್ಲೆಕ್ಸ್‌ ನಿರ್ಮಾಣಗೊಳ್ಳುತ್ತಿದೆ. ಅವರ ಹಾಗೂ ಮಹಾನಗರ ಪಾಲಿಕೆ ನಡುವೆ ಒಡಂಬಡಿಕೆಯಲ್ಲಿ ವಿಳಂಬ ಆಗಿರುವುದರಿಂದ ಕಾಮಗಾರಿ ಆರಂಭವಾಗಿಲ್ಲ. ಶೀಘ್ರ ಒಡಂಬಡಿಕೆ ನಡೆದು ನಿರ್ಮಾಣ ಕೆಲಸ ನಡೆಯಲಿದೆ. ಒಟ್ಟು 400 ಕಾರು ಹಾಗೂ 200 ದ್ವಿಚಕ್ರ  ವಾ ಹ ನ ಗಳ ನಿಲುಗಡೆಗೆ ಸ್ಥಳಾವಕಾವಕಾಶ ಲಭ್ಯವಾಗಲಿದೆ ಎಂದವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next