ಹೊನ್ನಾಳಿ: ಈ ತಿಂಗಳ 15ರಂದು ಶಿವಯೋಗಿ ಸಿದ್ದರಾಮ ಜಯಂತಿ, 19ರಂದು ಮಹಾಯೋಗಿ ವೇಮನ ಜಯಂತಿ ಹಾಗೂ 21ರಂದು ಅಂಬಿಗರ ಚೌಡಯ್ಯ ಜಯಂತಿ ಬಂದಿರುವುದರಿಂದ, ಈ ಎಲ್ಲ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಒಟ್ಟಾಗಿ ಒಂದೇ ದಿನ ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ. ಇದಕ್ಕೆ ಎಲ್ಲ ಸಮಾಜದ ಮುಖಂಡರು ಒಮ್ಮತದ ನಿರ್ಣಯಕ್ಕೆ ಬರಬೇಕು ಎಂದು ತಹಶೀಲ್ದಾರ್ ತುಷಾರ್ ಬಿ.ಹೊಸೂರು ಹೇಳಿದರು.
ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಮಹಾತ್ಮರ ಜಯಂತಿ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಹಶೀಲ್ದಾರ್ ಅವರ ಮಾತಿಗೆ ಎಲ್ಲ ಮೂರು ಸಮಾಜದ ಮುಖಂಡರು ತಮ್ಮ ಒಪ್ಪಿಗೆ ಸೂಚಿಸಿ ಮೂವರೂ ಮಹಾತ್ಮರ ಜಯಂತ್ಯುತ್ಸವವನ್ನು ಒಟ್ಟಾಗಿ ಆಚರಿಸುವುದು ಒಳಿತು ಎಂದರು.
ಜ. 21ರಂದು ಜಯಂತ್ಯುತ್ಸವ ಕಾರ್ಯಕ್ರಮವನ್ನು ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ಹಮ್ಮಿಕೊಂಡು ಮೂವರು ಮಹಾತ್ಮರ ಬಗ್ಗೆ ಪ್ರತ್ಯೇಕ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಆಯೋಜಿಸಲಾಗುವುದು. ಅಂದು ಬೆಳಿಗ್ಗೆ 11ಕ್ಕೆ ಹೊನ್ನಾಳಿಯಲ್ಲಿ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡು ನೂತನ ನ್ಯಾಮತಿ ತಾಲೂಕು ಕೇಂದ್ರದಲ್ಲಿ ಅದೇ ದಿನ ಮಧ್ಯಾಹ್ನ 3ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಎಲ್ಲಾ ಸಮಾಜದವರು ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದರೆ ವಿವಿಧ ಸಮಾಜದ ಮಹಾತ್ಮರ ಕುರಿತು ತಿಳಿಯುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನರು ಸಭೆಗೆ ಆಗಮಿಸಬೇಕು ಎಂದು ಅವರು ಹೇಳಿದರು.
ಸಮಾಜದ ಮುಖಂಡರಾದ ಎಸ್.ಎ.ಹುಡೇದ್, ಕೆ.ಪಿ.ರಾಜಪ್ಪ, ನಾಗರಾಜಪ್ಪ ಮಾತನಾಡಿದರು.
ಪ.ಪಂ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ, ದೈಹಿಕ ಶಿಕ್ಷಣಾಧಿಕಾರಿ ರವಿ ಗಾಳಿ ಇತರರು ಇದ್ದರು.
ಕಂದಾಯ ನಿರೀಕ್ಷಕ ಜಯರಾಮ್ ಸ್ವಾಗತಿಸಿ ವಂದಿಸಿದರು.