ಬೆಳಗಾವಿ: ಬ್ಯಾಂಕ್ ಖಾತೆಯ ಕೆವೈಸಿ ಪರಿಷ್ಕೃತಗೊಳಿಸಲು ದಾಖಲೆ ಹಾಗೂ ಒಟಿಪಿ ಸಂಖ್ಯೆ ಪಡೆದು 10 ಲಕ್ಷ ರೂ. ಎಗರಿಸಿದ್ದ ದಂಪತಿ ಸೇರಿ ಮೂವರನ್ನು ಬಂಸುವಲ್ಲಿ ಬೆಳಗಾವಿ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದು, 12.56 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಜಾರ್ಖಂಡ್ ರಾಜ್ಯದ ಜಾಮತಾರಾ ಜಿಲ್ಲೆಯ ಚಂದ್ರಪ್ರಕಾಶ ದಾಸ್(30), ಆಶಾದೇವಿ ಚಂದ್ರಪ್ರಕಾಶ ದಾಸ್(25) ದಂಪತಿ ಹಾಗೂ ಮಹಾರಾಷ್ಟ್ರದ ನಾಸಿಕ್‌ನ ಅನ್ವರ್ ಅಕ್ಬರ್ ಶೇಖ್ (24) ಎಂಬುವರನ್ನು ಬಂಧಿಸಿ 12.56 ಲಕ್ಷ ರೂ. ನಗದು, ಐದು ಮೊಬೈಲ್, ಮೂರು ಡೆಬಿಟ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ.
ವಂಚನೆ ಆಗಿದ್ದು ಹೇಗೆ?: ಕಂಗ್ರಾಳಿ ಕೆಎಚ್ ಗ್ರಾಮದ ಬಿಎಸ್ ಎನ್‌ಎಲ್ ನಿವೃತ್ತ ನೌಕರ ಯಲ್ಲಪ್ಪ ನಾರಾಯಣ ಜಾಧವ ಎಂಬವರಿಗೆ ಬಂ ಧಿತ ದಂಪತಿ ಕರೆ ಮಾಡಿದ್ದಾರೆ. ಎಸ್‌ಬಿಐ ಖಾತೆಯ ಕೆವೈಸಿ ಪರಿಷ್ಕೃತಗೊಳಿಸಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಝೆರಾಕ್ಸ್ ಪ್ರತಿಯನ್ನು ವಾಟ್ಸ್‌ಆ್ಯಪ್ ಮೂಲಕ ಪಡೆದುಕೊಂಡಿದ್ದಾರೆ. ನಂತರ ಮೊಬೈಲ್‌ನಿಂದ ಮೆಸೆಜ್ ಮಾಡಿ ಅದರ ಲಿಂಕ್ ಕಳುಹಿಸಿದ್ದಾರೆ. ನಂತರ ಆ ಲಿಂಕ್ ಕ್ಲಿಕ್ ಮಾಡಿಸಿ ಮೊಬೈಲ್‌ಗೆ ಬಂದ ಒಟಿಪಿ ಪಡೆದು ಹಣ ಎಗರಿಸಿದ್ದರು. ಹಂತ ಹಂತವಾಗಿ 102 ಬಾರಿ ಒಟಿಪಿ ಹಂಚಿಕೊಂಡಿದ್ದ ಯಲ್ಲಪ್ಪ ಜಾಧವ ಅವರ ಅಕೌಂಟ್‌ನಿಂದ ಒಟ್ಟು 10 ಲಕ್ಷ ರೂ. ದೋಚಿದ್ದಾರೆ.
ಅಕೌಂಟ್‌ನಿಂದ ಹಣ ಹೋಗಿರುವ ಬಗ್ಗೆ ತಿಳಿದ ಕೂಡಲೇ ಯಲ್ಲಪ್ಪ ಅವರು ಜೂ.10ರಂದು ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ನೀಡಿದ್ದರು.. ಸೈಬರ್ ವಂಚನೆ ಪ್ರಕರಣದ ದೂರು ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ನೇತೃತ್ವದ ತಂಡ ಪ್ರಕರಣದ ಬೆನ್ನತ್ತಿತ್ತು. ಕೆಲವೇ ದಿನಗಳಲ್ಲಿ ಕದೀಮರ ಪೂರ್ವಾಪರ ತಿಳಿದುಕೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಪಿ ಡಾ. ವಿಕ್ರಮ್ ಆಮ್ಟೆ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ, ಸಿಬ್ಬಂದಿಗಳಾದ ವಿಜಯ ಬಡವಣ್ಣವರ, ಮಾರುತಿ ಕೋನ್ಯಾಗೋಳ, ಕೆ.ವಿ. ಚರಲಿಂಗಮಠ, ಭುವನೇಶ್ವರಿ ಸೇರಿ ಅನೇಕರು ಇದ್ದರು.