ಮುಂಬಯಿ : ನಿನ್ನೆ ಭಾನುವಾರ ತನ್ನ 14 ವಿಮಾನ-ಹಾರಾಟಗಳನ್ನು ತಾನು ರದ್ದುಪಡಿಸಿರುವುದಕ್ಕೆ ತನ್ನ ಪೈಲಟ್‌ಗಳ ಅಸಹಕಾರ ಕಾರಣವಲ್ಲ ಎಂದು ಜೆಟ್ ಏರ್ ವೇಸ್ ವಿಮಾನ ಯಾನ ಸಂಸ್ಥೆ ಇಂದು ಸ್ಪಷ್ಟನೆ ನೀಡಿದೆ.
ಡಿಸೆಂಬರ್ 2ರಂದು ಕನಿಷ್ಠ 14 ವಿಮಾನ ಹಾರಾಟಗಳು ರದ್ದಾಗಿರುವುದಕ್ಕೆ ಅನಿರೀಕ್ಷಿತ ಕಾರ್ಯನಿರ್ವಹಣಾ ಸನ್ನಿವೇಶ ಕಾರಣವೇ ಹೊರತು ಅನ್ಯರು ಭಾವಿಸಿರುವಂತೆ ಪೈಲಟ್‌ಗಳ ಅಸಹಕಾರ ಅಲ್ಲ ಎಂದು ಜೆಟ್ ಏರ್ ವೇಸ್ ಹೇಳಿಕೊಂಡಿದೆ.
ಜೆಟ್ ಏರ್ ವೇಸ್ ವಿಮಾನ ಯಾನ ಸಂಸ್ಥೆ ಕಳೆದ ಆಗಸ್ಟ್‌ನಿಂದ ತೀವ್ರ ನಗದು ಕೊರತೆಯನ್ನು ಅನುಭವಿಸುತ್ತಿದ್ದ ಕಂಪೆನಿಯ ಹಿರಿಯ ಆಡಳಿತ ವರ್ಗ, ಪೈಲಟ್‌ಗಳು ಮತ್ತು ಇಂಜಿನಿಯರ್‌ಗಳಿಗೆ ತಿಂಗಳ ಸಂಬಳ ಪಾವತಿಸುವಲ್ಲಿ ವಿಫಲವಾಗಿದೆ ಎಂದು ವರದಿಗಳು ತಿಳಿಸಿವೆ.
ಭಾನುವಾರ ಜೆಟ್ ಏರ್ ವೇಸ್‌ನ 14 ವಿಮಾನ ಹಾರಾಟಗಳು ರದ್ದಾಗುವುದಕ್ಕೆ ವೇತನ ಸಿಗದ ಪೈಲಟ್‌ಗಳು ಮತ್ತು ಇಂಜಿನಿಯರ್ ಗಳ ಹಠಾತ್ತನೆ “ಸಿಕ್ ಲೀವ್’ ಹಾಕಿರುವುದೇ ಕಾರಣವೆಂದು ತಿಳಿಯಲಾಗಿದೆ.
ಜೆಟ್ ಏರ್ ವೇಸ್ ನ ಉನ್ನತ ಆಡಳಿತೆಯು ತನ್ನ ಪೈಲಟ್‌ಗಳು ಹಾಗೂ ಇಂಜಿನಿಯರ್‌ಗಳ ಜತೆಗೆ ನಿರಂತರ ಸಂಪರ್ಕದಲಿದ್ದು ಅವರ ವೇತನ ಪಾವತಿ ಸಮಸ್ಯೆಗೆ ಸಂಬಂಧಿಸಿದಂತೆ ಚರ್ಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಭಾನುವಾರದ ವಿಮಾನ ಹಾರಾಟಗಳು ರದ್ದಾಗಿದ್ದುದನ್ನು ಪ್ರಯಾಣಿಕರಿಗೆ ಎಸ್‌ಎಂಎಸ್ ಮೂಲಕ ತಿಳಿಸಲಾಗಿದೆ. ಅವರಿಗೆ ಬದಲೀ ವ್ಯವಸ್ಥೆ ಅಥವಾ ಪರಿಹಾರ ಪಾವತಿಯನ್ನು ಕಲ್ಪಿಸಲಾಗಿದೆ ಎಂದು ಜೆಟ್ ಏರ್ ವೇಸ್ ಹೇಳಿದೆ.