ಶ್ರೀರಂಗಪಟ್ಟಣ: ಸಾಲಮನ್ನಾ ಯೋಜನೆಯಲ್ಲಿ ರೈತರಿಗೆ ತಾರತಮ್ಯ ಮಾಡುತ್ತಿರುವ ಪಟ್ಟಣದ ಎಸ್‌ಬಿಐ ಶಾಖೆ ಕ್ರಮ ಖಂಡಿಸಿ ರೈತ ಸಂಘದ ಮುಖಂಡರು ಧರಣಿ ನಡೆಸಿದರು.
ಪಟ್ಟಣದ ಮುಖ್ಯ ಬೀದಿಯಲ್ಲಿರುವ ಎಸ್‌ಬಿಐ ಶಾಖೆ ಎದುರು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಜಮಾಯಿಸಿ ಬ್ಯಾಂಕ್‌ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಬ್ಯಾಂಕಿನಿಂದ ಸಾಲ ಪಡೆದ ರೈತರಿಗೆ ಸರ್ಕಾರದ ಘೋಷಣೆ ಯಂತೆ ಒಂದೇ ಕಂತಿನಲ್ಲಿ ಕಟ್ಟುವ ಸಾಲಕ್ಕೆ ಯಾವುದೇ ಬಡ್ಡಿ ಇಲ್ಲದೆ ಅಸಲು ಮಾತ್ರ ಕಟ್ಟಿಸಿಕೊಂಡು ಅವರಿಗೆ ತೀರುವಳಿ ಪತ್ರ ನೀಡಲಾಗುತ್ತದೆ ಎಂದು ಈಗಾಗಲೇ ಹಲವು ಬ್ಯಾಂಕು ಗಳ ಮುಂದೆ ಬ್ಯಾನರ್ ಹಾಕಲಾಗಿದೆ. ಕೆನರಾ, ಕರ್ನಾಟಕ, ವಿಜಯ ಬ್ಯಾಂಕ್ ಗಳಲ್ಲಿ ಈ ನಿಯಮ ಪಾಲಿಸುತ್ತಿದ್ದು, ಎಸ್‌ಬಿಐ ಬ್ಯಾಂಕಿನಲ್ಲಿ ಅಸಲು ಕಟ್ಟಿಸಿಕೊಳ್ಳುವ ಬದಲು ಸಾಲ ಪಡೆದ ಹಣಕ್ಕೆ ಬಡ್ಡಿ ಸೇರಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಾಲ ಪಡೆದ ರೈತರು ಮತ್ತೇ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಮಂಜೇಶ್‌ಗೌಡ ಬ್ಯಾಂಕ್ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಸ್ವಾರ್ಥಕ್ಕೆ ದುರ್ಬಳಕೆ: ಋಣಮುಕ್ತ ಸಾಲದಲ್ಲಿ ಅಸಲಿಗೆ ಬಡ್ಡಿ ತೆಗೆದುಕೊಂಡು ಸುಸ್ತಿ ಇರುವವರಿಗೆ ಈ ಋಣ ಮುಕ್ತ ಕಾಯಿದೆ ಅನ್ವಯವಾಗಲಿದೆ. ಸರ್ಕಾರದಿಂದ ನೀಡಲಾದ ರೈತರ ಬಡ್ಡಿ ಮತ್ತು ಅಸಲು ಸಾಲ ತಿರುಚಲಾಗುತ್ತಿದೆ. ಒಂದೇ ಕಂತಿನಲ್ಲಿ ಕಟ್ಟುವ(ಓಟಿಪಿ) ಯೋಜನೆ ದುರ್ಬಳಕೆ ಮಾಡಿಕೊಂಡು ರೈತರಿಗೆ ಬ್ಯಾಂಕ್ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಯೋಜನೆಯಿಂದ ಆಗುವ ಅನುಕೂಲ ತಮ್ಮ ಬ್ಯಾಂಕಿನ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಹಕರಿಗೆ ವಂಚನೆ: ಬೇರೆಬೇರೆ ಬ್ಯಾಂಕುಗಳಲ್ಲಿ ನೀಡುವ ಸೌಲಭ್ಯ ನೀಡದೆ, ಎಸ್‌ಬಿಐ ಗ್ರಾಹಕರಿಗೆ ವಂಚಿಸಲಾ ಗುತ್ತಿದೆ. ಕೂಡಲೇ ರೈತರ ಸಾಲಮನ್ನಾ ಯೋಜನೆ ಯಿಂದ ಆಗುವ ನಷ್ಟಕ್ಕೆ ಬ್ಯಾಂಕಿನ ಅಧಿಕಾರಿಗಳೇ ಹೊಣೆಗಾರರು. ಹೀಗೆಯೇ ಮುಂದುವರಿದರೆ ರಾಜ್ಯಾದ್ಯಂತ ರೈತ ಸಂಘದ ಕಾರ್ಯಕರ್ತರು ಎಸ್‌ಬಿಐ ಬ್ಯಾಂಕ್ ಎದುರು ಉಗ್ರಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಯ್ಯ, ಪದ್ಮರಾಜು, ಕೃಷ್ಣಪ್ಪ, ದೇವರಾಜು, ಚಂದ್ರು, ದಸಂಸ ಮುಖಂಡರಾದ ಕುಬೇರಪ್ಪ, ಗಂಜಾಂ ರವಿಚಂದ್ರ, ಮುಂಡಗದೊರೆ ಮೋಹನ್ ಇತರರರು ಭಾಗವಹಿಸಿದ್ದರು.