ಕಲಬುರಗಿ: ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಕರೆ ನೀಡಲಾಗಿದ್ದ ಬಂದ್‌ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ತದನಂತರ ಬಿಡುಗಡೆ ಮಾಡಿದರು.
ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದ ಎಚ್.ಡಿ.
ಕುಮಾರಸ್ವಾಮಿ ಅವರು ರಾಗ ಬದಲಾಯಿಸುತ್ತಿರುವುದು ಅನ್ನದಾತರನ್ನು ದುಃಖದೆಡೆಗೆ ಸಾಗಿಸಿದಂತಾಗಿದೆ.
ಬರೀ ಭರವಸೆ ಮಾತುಗಳಿಂದ ಹೊಟ್ಟೆ ತುಂಬುವುದಿಲ್ಲ ಎಂಬುದನ್ನರಿತು ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ರೈತರು ಬೀದಿಗಿಳಿದರೆ ಸರ್ಕಾರ ಒಂದು ಕ್ಷಣ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎಂದು ಪ್ರತಿಭಟನಾಕಾರರು
ಎಚ್ಚರಿಕೆ ನೀಡಿದರು.
ಈಗ ಬಿತ್ತನೆ ಸಮಯ ಆರಂಭವಾಗುತ್ತಿದೆ. ಬೀಜ-ಗೊಬ್ಬರ ತೆಗೆದುಕೊಳ್ಳಬೇಕಾಗಿದೆ. ಹೀಗಾಗಿ ಸಾಲ ಮನ್ನಾ ಮಾಡಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಸಬೂಬು ಹೇಳದೇ ಸಾಲ ಮನ್ನಾ ಮಾಡಿ ರೈತರಲ್ಲಿ ವಿಶ್ವಾಸ ತುಂಬಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.
ಬಂದ್ ಕರೆ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಬಂದೋಬಸ್ತ್ ಕಲ್ಪಿಸಿದ್ದರು. ನಗರ ಸಂಚಾರ ಎಂದಿನಂತಿತ್ತು. ಆದರೆ ಕೆಲ ಗಂಟೆ ಕಾಲ ನಗರ ಸಾರಿಗೆ ಬಸ್ ಸಂಚಾರ ಮಾರ್ಗಗಳನ್ನು ರದ್ದುಪಡಿಸಲಾಗಿತ್ತು. ಬಿಜೆಪಿ ಕಾರ್ಯಕರ್ತರು ನೆಹರು ಗಂಜ್‌ನ ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಹಾಗೂ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದರು.
ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆಗಿಳಿದ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಮುಖಂಡರಾದ ಚಂದು ಪಾಟೀಲ ಸೇರಿದಂತೆ ಮುಂತಾದವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.