Advertisement
ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಒಂದು ಗ್ರಾಮೀಣ ಶಾಖೆಗೆ ಹೋದಾಗ ನಡೆದ ಘಟನೆ. ರೈತನೊಬ್ಬ ಅಂದಿನ ಪತ್ರಿಕೆಯನ್ನು ಮ್ಯಾನೇಜರ್ ಎದುರಿಗೆ ಹಿಡಿದು- ಏರು ಧ್ವನಿಯಲ್ಲಿ. “ಏನ್ರೀ, ದೇಶದ ಉದ್ಯಮಿಗಳಿಗೆ ನಾಲ್ಕು ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೀರಾ. ನಾವು ಕೇಳಿದರೆ, ಏನೇನೋ ಸಬೂಬು ಹೇಳುತ್ತೀರಾ. ಮೀನಾಮೇಷ ಎಣಿಸ್ತೀರಾ…ನಮಗೆ ನೋಟೀಸು ಕಳಿಸ್ತೀರಾ…ವಾರಂಟ್ ಹೊರಡಿಸ್ತೀರಾ…ಈ ದೇಶದಲ್ಲಿ ಅನ್ನದಾತನಿಗೆ ಒಂದು ನ್ಯಾಯ….ಉದ್ಯಮಿಗಳಿಗೆ- ಒಂದು ನ್ಯಾಯವಾ? ಎಂದು ಗಂಟಲು ನರ ಉಬ್ಬಿಸಿ ಕೂಗುತ್ತಿದ್ದ.
Related Articles
ಮೇಲು ನೋಟಕ್ಕೆ ರೈಟ್ ಆಫ್ (ಬರ್ಖಾಸ್ತು) ಮತ್ತು ಸಾಲ ಮನ್ನಾದಲ್ಲಿ ವ್ಯತ್ಯಾಸ ಕಾಣುವುದಿಲ್ಲ. ಎರಡೂ ಒಂದೇ ರೀತಿಯಲ್ಲಿ ಕಾಣುತ್ತವೆ. ಜನಸಾಮಾನ್ಯರು ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗಿ ನೋಡುತ್ತಾರೆ. ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರದ ಸಾಮಾನ್ಯ ಜ್ಞಾನವಿದ್ದವರೂ ಇದರ ವ್ಯತ್ಯಾಸ ತಿಳಿಯದೇ ಗೊಂದಲಕ್ಕೀಡಾಗುತ್ತಾರೆ. ಸಾಮಾನ್ಯವಾಗಿ ರೈಟ್‌ಆಫ್ ಎಂದರೆ, ಬ್ಯಾಂಕ್‌ನ ಸಾಲ ಪುಸ್ತಕದಿಂದ ಮತ್ತು ದಾಖಲೆಯಿಂದ ಸಾಲ ಇಲ್ಲವಾಯಿತು ಮತ್ತು ಸಾಲಗಾರ ಸಾಲ ಮುಕ್ತ ಅಥವಾ ಋಣಮುಕ್ತ ನಾದನೆಂದು ತಿಳಿಯುತ್ತಾರೆ. ಸಾಲ ಬಾಕಿ ಇರಿಸಿಕೊಂಡವನು ತಾನು ಸಾಲಬಾಕಿದಾರನಲ್ಲವೆಂದು ಹೇಳಿಕೊಳ್ಳಬಹುದು ಎಂದು ತಿಳಿದುಕೊಳ್ಳುತ್ತಾರೆ. ಇದು ಸರಿಯಾದ ವಿಶ್ಲೇಷಣೆಯಲ್ಲ. ರೈಟ್ ಆಫ್ನ ಉದ್ದೇಶವೂ ಇದಾಗಿರುವುದಿಲ್ಲ.
Advertisement
ಬ್ಯಾಂಕುಗಳು ಸಾಲ ವಸೂಲಿ ಮಾಡುವ ಎಲ್ಲಾ ಮಾರ್ಗಗಳು ಬಂದಾದಾಗ (exhausted), ಬ್ಯಾಂಕ್ ಬ್ಯಾಲೆನ್ಸ್ ಶೀಟ್ ಅನ್ನು ಕ್ಲೀನ್ ಮಾಡುವ ಅನಿವಾರ್ಯತೆ ಎದುರಾದಾಗ, ಈ ಮಾರ್ಗವನ್ನು ಹಿಡಿಯುತ್ತವೆ. ಈ ಪ್ರಕ್ರಿಯೆಯಲ್ಲಿ ಸಾಲವನ್ನು ಮುಖ್ಯ ಸಾಲ ಪುಸ್ತಕದಿಂದ ಹೊರತೆಗೆದು ಬೇರೆ ಪುಸ್ತಕಕ್ಕೆ ವರ್ಗಾಯಿಸುತ್ತವೆ. ಅನುತ್ಪಾದಕ ಆಸ್ತಿಯ ಹೊರೆ ಬ್ಯಾಲೆನ್ಸ್‌ಶೀಟ್‌ನಲ್ಲಿ ಕಡಿಮೆಯಾಗುತ್ತದೆ. ಆದರೆ, ಸಾಲಗಾರ ಸಾಲ ಮುಕ್ತನಾಗುವುದಿಲ್ಲ.
ಬ್ಯಾಂಕುಗಳ ಪುಸ್ತಕದಲ್ಲಿ ಮತ್ತು ದಾಖಲೆಗಳಲ್ಲಿ ಅವನು ಸಾಲಗಾರನಾಗಿ ಮುಂದುವರೆಯುತ್ತಾನೆ. ಸಾಲ ಮರುಪಾವತಿ ಮಾಡುವ ಸಾಲಗಾರನ ಬಧœತೆ ಹಾಗೆಯೇ ಇರುತ್ತದೆ. ಹಾಗೆಯೇ, ಜಾಮೀನುದಾರನ ಬದ್ಧತೆಯೂ ಇದರಲ್ಲಿ ಸೇರುತ್ತದೆ. ಸಾಲಗಾರನು ನೀಡಿದ ಸೆಕ್ಯುರಿಟಿಗಳನ್ನು ಕೈಬಿಡುವಂತಿಲ್ಲ ಅಥವಾ ಹಿಂತಿರುಗಿಸುವಂತಿಲ್ಲ. ಸಾಲ ವಸೂಲಾತಿಯ ಎಲ್ಲಾ ಪ್ರಕ್ರಿಯೆಗಳು ನಿಲ್ಲದೇ ಎಂದಿನಂತೆ ಮುಂದುವರೆಯುತ್ತವೆ. ಸಾಲ ವಸೂಲಾತಿಯ ಬಗೆಗಿನ ಕಾನೂನಾತ್ಮಕ ಕ್ರಮಗಳಿಗೆ ಯಾವುದೇ ತೊಂದರೆ ಇರುವುದಿಲ್ಲ. ಸಾಲಗಳನ್ನು ರೈಟ್‌ಆಫ್ ಮಾಡಿದ ನಂತರವೂ ಸಾಲ ವಸೂಲಾದ ಸಾಕಷ್ಟು ದಾಖಲೆಗಳಿವೆ. ಇದರಲ್ಲಿ ಸಾಲಗಾರನಿಗೆ ಯಾವುದೇ ರೀತಿಯ ವಿನಾಯಿತಿ ನೀಡುವ ಸಾಧ್ಯತೆಗಳಿಲ್ಲ.
ಈ ರೀತಿಯ ರೈಟ್ ಆಫ್ಗಳು ಬ್ಯಾಂಕಿಂಗ್ ಉದ್ಯಮದಲ್ಲಿ ಹೊಸಬೆಳವಣಿಗೆ ಯಾಗಿರದೇ, ಲಾಗಾಯ್ತಿನಿಂದಲೂ ಇದೆ. ಇದೊಂದು ನಿರಂತರ ಪಕ್ರಿಯೆ. ಇತ್ತೀಚೆಗೆ ಸ್ವಲ್ಪ ದೊಡ್ಡ ಪ್ರಮಾಣದ ಮೊತ್ತ ಈ ಪ್ರಕ್ರಿಯೆಯಲ್ಲಿ ಕಾಣುತ್ತಿರುವುದರಿಂದ ಇದು ದೊಡ್ಡ ಸುದ್ದಿಯಾಗಿದೆ. ರೈಟ್ ಆಫ್ ಒಂದು ರೀತಿಯಲ್ಲಿ Accounting Jugglery ಮತ್ತು ರಿಸರ್ವ್‌ಬ್ಯಾಂಕ್‌ನ ನಿಯಮಾವಳಿಗಳನ್ನು ಪಾಲಿಸುವ ಅನಿವಾರ್ಯತೆಯಾಗಿರುತ್ತದೆ.
ಬ್ಯಾಂಕುಗಳು ಇದನ್ನು ಏಕೆ ಮಾಡುತ್ತವೆ?ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್ ಅನ್ನು ಸದೃಢವಾಗಿ ತೋರಿಸಲು ಮತ್ತು ಸರ್ಕಾರಕ್ಕೆ ನೀಡುವ ತೆರಿಗೆ ಹೊರೆಯನ್ನು ತಗ್ಗಿಸಿಕೊಳ್ಳಲು ಸಾಮಾನ್ಯವಾಗಿ ರೈಟ್ ಆಫ್ಗೆ ಮೊರೆ ಹೋಗುತ್ತವೆ. ಹಾಗೆಯೇ, ಅನುತ್ಪಾದಕ ಆಸ್ತಿಗಳ ಆಯುಷ್ಯ ಹೆಚ್ಚಾದಂತೆ ಅದಕ್ಕೆ ಬ್ಯಾಂಕಿನ ಒಟ್ಟಾರೆ ಲಾಭದಿಂದ ವರ್ಗಾಯಿಸುವ ಪ್ರಾವಿಷನ್ ಕೂಡಾ ಹೆಚ್ಚಾಗುತ್ತದೆ. ಬ್ಯಾಂಕುಗಳಲ್ಲಿ ಅನುತ್ಪಾದಕ ಆಸ್ತಿ ಹೆಚ್ಚಾದಂತೆ, ಆ ಬ್ಯಾಂಕು, ರಿಸರ್ವ್ ಬ್ಯಾಂಕ್‌ನ ಕಾಯಕಲ್ಪ ಚಿಕಿತ್ಸೆಗೆ (Prompt Corrective Action) ಒಳಗಾಗುವ ಭಯ ಇರುತ್ತದೆ. ಕಾಯಕಲ್ಪ ಚಿಕಿತ್ಸೆ ಎಂದರೆ ಬ್ಯಾಂಕ್‌ನ ಆರ್ಥಿಕ ಆರೋಗ್ಯವನ್ನು ಸದೃಢಗೊಳಿಸಲು ರಿಸರ್ವ್ ಬ್ಯಾಂಕ್ ದುರ್ಬಲ ಬ್ಯಾಂಕುಗಳನ್ನು ಸಾಲ ನೀಡಿಕೆ, ಹೊಸ ನೇಮಕಾತಿ , ಸಿಬ್ಬಂದಿಗಳಿಗೆ ಬಡ್ತಿ, ಹೆಚ್ಚಿನ ಹಣಕಾಸು ಸೌಲಭ್ಯ ಅನುತ್ಪಾದಕ ಸಾಲ ಮತ್ತು ಸಾಲ ವಸೂಲಾತಿ ಯ ನಿಟ್ಟಿನಲ್ಲಿ ಹಲವಾರು ನಿರ್ದೇಶನ, ನಿಯಂತ್ರಣ ಮತ್ತು ಕಟ್ಟಳೆಗಳಿಗೆ ಒಳಪಡಿಸುತ್ತದೆ. ಅಂತೆಯೇ, ಬ್ಯಾಂಕುಗಳು ರೈಟ್ ಆಫ್ಗೆ ಮುಂದಾಗುತ್ತವೆ. ಆದರೆ ಬ್ಯಾಂಕುಗಳು ಮನಬಂದಂತೆ ರೈಟ್‌ಆಫ್ ಮಾಡುವಂತಿಲ್ಲ. ಸಾಲ ಮನ್ನಾ ಎಂದರೇನು?
ಸಾಲ ಮನ್ನಾ ಪ್ರಕ್ರಿಯೆ ಸಾಲ ರೈಟ್ ಆಫ್ಗಿಂತ ತೀರಾಭಿನ್ನ. ಸಾಲ ಮನ್ನಾದಲ್ಲಿ ಸಾಲ ಬ್ಯಾಂಕ್ ಪುಸ್ತಕದಿಂದ ಮತ್ತು ದಾಖಲೆಯಿಂದ ಸಂಪೂರ್ಣವಾಗಿ ಹೊರಹೋಗುತ್ತದೆ. ಸಾಲಗಾರನಿಗೆ ಬ್ಯಾಂಕ್‌ನಿಂದ ಋಣ ಮುಕ್ತ ಅಥವಾ ಸಾಲ ಮುಕ್ತ ಪತ್ರ ದೊರೆಯುತ್ತದೆ. ಸಾಲಗಾರ ಸಾಲವನ್ನು ಮರು ಪಾವತಿ ಮಾಡಬೇಕಾಗಿಲ್ಲ. ಬ್ಯಾಂಕುಗಳು ಆ ಕ್ಷಣದಿಂದ ಸಾಲ ವಸೂಲಿಯ ಎಲ್ಲಾ ಪ್ರಕ್ರಿಯೆಗಳನ್ನು ನಿಲ್ಲಿಸುತ್ತವೆ. ಬ್ಯಾಂಕ ಸುಸ್ತಿದಾರರ ಪಟ್ಟಿಯಿಂದ ಆ ಸಾಲಗಾರನ ಹೆಸರನ್ನು ತೆಗೆಯಲಾಗುತ್ತದೆ. ಇದು ಸಾಲಗಾರರನ್ನು ಸಾಲದ ಶೂಲದಿಂದ ರಕ್ಷಿಸಿ ಆರ್ಥಿಕ ಸಂಕಷ್ಟದಿಂದ ಪಾರುಮಾಡುವ ಪ್ರಕ್ರಿಯೆ. ಸಾಮಾನ್ಯವಾಗಿ ಸಾಲ ಮನ್ನಾ ವಿಷಯ ನೈಸರ್ಗಿಕ ವಿಪತ್ತುಗಳಾದ ನೆರೆ, ಬರ, ಅಧಿಕ ಮಳೆ ಮತ್ತು ಬೆಳೆ ವೈಫಲ್ಯದಿಂದಾಗಿ ಸಂಕಷ್ಟದಲ್ಲಿರುವ ರೈತರ ನಿಟ್ಟಿನಲ್ಲಿ ಹೆಚ್ಚಾಗಿ ಕೇಳಬರುತ್ತದೆ. ಈ ಸಂಕಷ್ಟಗಳಿಗೆ ಸ್ಪಂದಿಸಿ ಸರ್ಕಾರ ಸಾಲ ಮನ್ನಾವನ್ನು ಘೋಷಿಸಿದಾಗ, ರೈತರ ಬಾಕಿ ಸಾಲವನ್ನು ರೈತರ ಬದಲಿಗೆ ಸರ್ಕಾರವೇ ಮರುಪಾವತಿಸುತ್ತದೆ. ಹೆಚ್ಚಾಗಿ ರೈತರು ಸಹಕಾರಿ ಸಂಘಗಳಿಂದ, ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳಿಂದ ಸಾಲ ಪಡೆಯತ್ತಿದ್ದು, ಸರ್ಕಾರವು ಅವುಗಳಿಗೆ ಅವರು ಮನ್ನಾ ಮಾಡಿದ ಮೊತ್ತವನ್ನು ಮರುಪೂರಣ ಮಾಡುತ್ತದೆ. ರೈತರು ಸಹಕಾರಿ ಸಂಘಗಳಿಂದ ಸಾಲ ಪಡೆದಿದ್ದರೆ, ಅವರು ಕೇಂದ್ರ ಸಹಕಾರಿ ಬ್ಯಾಂಕುಗಳಿಂದ, ರಾಜ್ಯ ಅಪೆಕ್ಸ ಬ್ಯಾಂಕುಗಳಿಂದ ಮತ್ತು ಅಪೆಕ್ಸ ಬ್ಯಾಂಕುಗಳು ಸರ್ಕಾರದಿಂದ ಸಹಾಯ ಪಡೆಯುತ್ತವೆ. ರೈತರ ಸಾಲದ ವಿಚಾರದಲ್ಲಿ ನಬಾರ್ಡ್‌ನ ಸಹಾಯವೂ ಇರುತ್ತದೆ. ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕಳೆದ ನಾಲ್ಕು ವರ್ಷಗಳಲ್ಲಿ ಉದ್ಯಮಿಗಳ 3.16 ಲಕ್ಷ ಕೋಟಿ ಸಾಲವನ್ನು ರೈಟ್ ಆಪ್ ಮಾಡಿದೆ ಎನ್ನುವ ಮಾಹಿತಿ ಹೊರಬಿದ್ದಾಗ, ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೆ ನಿಜಾಂಶ ಇದು. – ರಮಾನಂದ ಶರ್ಮ