Advertisement

ಸಾಲ ಮನ್ನಾ ಪ್ರಣಾಳಿಕೆ: ಆಯೋಗ ಗಂಭೀರವಾಗಿ ಪರಿಗಣಿಸಲಿ

12:19 PM Jun 08, 2018 | |

ಪುತ್ತೂರು : ರೈತರ ಸಾಲ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ನಿರಾಕರಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್‌ ಸಂಘ ಆಗ್ರಹಿಸಿದೆ. ಸಂಘದ ಕಚೇರಿಯಲ್ಲಿ ಗುರುವಾರ ನಡೆದ ರೈತರ ಸಭೆಯಲ್ಲಿ ರೈತರ ಸಾಲ ಮನ್ನಾ ಕುರಿತು ಚರ್ಚೆ ನಡೆಯಿತು. ಸಂಘದ ಅಧ್ಯಕ್ಷ ಬಿ.ಕೆ. ರಮೇಶ್‌ ಅಧ್ಯಕ್ಷತೆ ವಹಿಸಿದ್ದರು. ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಮಾಡುತ್ತೇನೆ ಎಂದು ಪ್ರಾಣಾಳಿಕೆಯಲ್ಲಿ ಘೋಷಿಸಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷರೂ
ಆಗಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಾಲಮನ್ನಾ ವಿಚಾರದಲ್ಲಿ ಮೀನ-ಮೇಷ ಎಣಿಸುತ್ತಿರುವುದು ರೈತ ವರ್ಗಕ್ಕೆ ಮಾಡಿದ ದ್ರೋಹ. ಸಾಲಮನ್ನಾ ವಿಚಾರವನ್ನು ಚುನಾವಣ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಲಾಯಿತು.

Advertisement

ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಸಂಚಾಲಕ ಎಂ.ಜಿ. ಸತ್ಯನಾರಾಯಣ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಲ ಮನ್ನಾದ ಜತೆಗೆ ರೈತರ ಭೂಮಿಗೆ ನೀರಾವರಿ, ಬೆಳೆಗಳಿಗೆ ಉತ್ತಮ ಬೆಲೆ ಒದಗಿಸಿ ಕೊಟ್ಟರೆ ರೈತರು ಸ್ವಾವಲಂಬಿಗಳಾಗುತ್ತಾರೆ ಎಂದಿದ್ದರು. ಆದರೆ ಈಗ ನಮಗೆ ಸಂಪೂರ್ಣ ಬಹುಮತ ಬಂದಿಲ್ಲ ಎನ್ನುತ್ತಿದ್ದಾರೆ. ಮತ ಹಾಕದವರೇನು ತೆರಿಗೆ ಕಟ್ಟುವುದಿಲ್ಲವೇ?

ಈ ಕುರಿತು ನಾವು ಸರಕಾರಕ್ಕೆ ಲಿಖೀತವಾಗಿ ಪತ್ರ ಬರೆಯಬೇಕು. ಪ್ರಣಾಳಿಕೆಯಲ್ಲಿ ಘೋಷಣೆ ಮಾಡುವುದು ಮಕ್ಕಳಾಟಿಕೆಯಲ್ಲ. ಎಚ್ಚೆತ್ತುಕೊಳ್ಳದಿದ್ದರೆ ರೈತರು ಇನ್ನಷ್ಟು ವಂಚನೆಗೊಳಗಾಗುತ್ತಾರೆ ಎಂದು ಸಲಹೆ ನೀಡಿದರು. ಸಂಘದ ಸದಸ್ಯ ಕೊರಗಪ್ಪ ಗೌಡ ಮಾತನಾಡಿ, ರೈತರು ಯಾವುದೇ ಕಾರಣಕ್ಕೂ ಸಾಲ ಮರು ಪಾವತಿ ಮಾಡಲೇಬಾರದು. ಚುನಾವಣ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನು ಅನುಷ್ಠಾನ ಮಾಡಬೇಕು. ಒಟ್ಟಾರೆ ರೈತರನ್ನು ಸರಕಾರ ಅಡಕತ್ತರಿಯಲ್ಲಿ ಸಿಲುಕಿಸುತ್ತಿದೆ ಎಂದು ಆರೋಪಿಸಿದರು.

ಸಭೆಯಲ್ಲಿ ಕಿಸಾನ್‌ ಸಂಘದ ಮುಖಂಡರಾದ ಬಿ.ಟಿ. ನಾರಾಯಣ ಭಟ್‌, ಎನ್‌. ಜಿ. ಪ್ರಭಾಕರ ರೈ, ಮೂಲಚಂದ್ರ, ಬಾಲಕೃಷ್ಣ ರೈ ಸೂರಂಬೈಲು, ನೆಟ್ಟಾರು ಗೋಪಾಲಕೃಷ್ಣ ಭಟ್‌ ಮೊದಲಾದವರು ಉಪಸ್ಥಿತರಿದ್ದರು. ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಾಯ ಸ್ವಾಗತಿಸಿ, ವಂದಿಸಿದರು.

ಈ ಬೇಡಿಕೆಗಳನ್ನು ಭಾರತೀಯ ಕಿಸಾನ್‌ ಸಂಘವು ಮನವಿ ಮೂಲಕ ಸರಕಾರದ ಮುಂದಿಡಲು ಸಭೆಯಲ್ಲಿ ನಿರ್ಣಯಿಸಿದೆ. ಮನವಿಯ ಪ್ರತಿಯನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ, ನಬಾರ್ಡ್‌ ಮುಖ್ಯ ಪ್ರಧಾನ ವ್ಯವಸ್ಥಾಪಕರಿಗೆ, ರಿಸರ್ವ್‌ ಬ್ಯಾಂಕ್‌ ಸಿಇಒಗೆ, ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ, ದ.ಕ. ಜಿಲ್ಲೆಯ ಎಲ್ಲ ಶಾಸಕರಿಗೆ ನೀಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.

Advertisement

ಕಿಸಾನ್‌ ಸಂಘದ ಬೇಡಿಕೆಗಳು
· 2009ರಿಂದ 2017ರ ವರೆಗಿನ ಎಲ್ಲ ರೂಪದ ಕೃಷಿ ಸಾಲಗಳ ಮೂಲಕ ವ್ಯವಸಾಯ ಮಾಡಿಕೊಂಡು ಬರುವ ಎಲ್ಲ ರೈತರಿಗೆ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯಂತೆ ಒಂದು ಬಾರಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು.

· 2017 ಡಿಸೆಂಬರ್‌ 30ರ ಒಳಗಾಗಿ ಪಡೆದಿರುವ ಸಾಲಗಳನ್ನು ಅದರ ಮರುಪಾವತಿ ವಾಯಿದೆ ಯಾವಾಗ ಇದ್ದರೂ ಮುಖ್ಯಮಂತ್ರಿಗಳು ಘೋಷಿಸಿರುವ ಒಂದು ಬಾರಿ ಸಾಲ ಮನ್ನಾ ಯೋಜನೆಗೆ ಒಳಪಡಿಸಬೇಕು.

· ಒಂದು ಬಾರಿ ಸಾಲ ಮನ್ನಾ ಯೋಜನೆಯನ್ನು ನೇರವಾಗಿ ಆಯಾ ರೈತರ ಖಾತೆಗಳಿಗೆ 2018ರ ಸೆ. 30ರ ಒಳಗಾಗಿ ಜಮೆ ಮಾಡಿ ಮುಂದಿನ ಸಾಲಮೂಲಗಳು ಸಮರ್ಪಕವಾಗಿ ಮುಂದುವರಿಸುವಂತೆ ಮಾಡಬೇಕು.

· ಮುಖ್ಯಮಂತ್ರಿಗಳು ರೈತರಿಗೆ ವಿಶೇಷ ಸವಲತ್ತುಗಳನ್ನು ಕೊಡುವುದಾಗಿ ತಮ್ಮ ಪ್ರಣಾಳಿಕೆಯ ಪುಟ ಸಂಖ್ಯೆ 6ರಲ್ಲಿ ಭರವಸೆ ನೀಡಿದಂತೆ ಕ್ರಮ ಕೈಗೊಳ್ಳಬೇಕು.

ಅಸಂಬದ್ದ ಹೇಳಿಕೆ 
ನ್ಯಾಯವಾದಿ ಹಾಗೂ ಆಲಂಕಾರು ಸಿ.ಎ. ಬ್ಯಾಂಕ್‌ನ ಅಧ್ಯಕ್ಷ ರಮೇಶ್‌ ಭಟ್‌ ಉಪ್ಪಂಗಳ ಮಾತನಾಡಿ, ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾದ ತತ್‌ಕ್ಷಣ ಸಾಲಮನ್ನಾ ಕುರಿತು ಘೋಷಣೆ ಮಾಡಿದ್ದಾರೆ. ಹೊರಬಾಕಿ ಇರುವ ಸಾಲಗಳ ಕುರಿತು ಇ-ಮೇಲ್‌ ಮೂಲಕ ಸಂಪೂರ್ಣವಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ. ಆದರೆ ಎಚ್‌.ಡಿ. ಕುಮಾರಸ್ವಾಮಿ ಸಾಲಮನ್ನಾದ ಕುರಿತು ಅಷ್ಟೇನೂ ಆಸಕ್ತಿ ವಹಿಸಿಲ್ಲ. ರೈತರ ಸಾಲ ಮನ್ನಾ ವಿಚಾರದಲ್ಲಿ ಡಿಸಿಗೆ ಅರ್ಜಿ ಕೊಡಬೇಕು ಎಂಬುದು ಅಸಂಬದ್ಧ ಹೇಳಿಕೆಯನ್ನೂ ನೀಡಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next