ಗೌರಿಬಿದನೂರು: ಕಡಿಮೆ ಬಡ್ಡಿದರದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ನೀಡುವ ಕಾರ್ಯವು ಗ್ರಾಮೀಣ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಆಸರೆಯಾಗಿದೆ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹೇಳಿದರು.
ತಾಲೂಕಿನ ಮಂಚೇನಹಳ್ಳಿಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಆಯೋಜಿಸಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘದಿಂದ ಕಡಿಮೆ ಬಡ್ಡಿ ದರದಲ್ಲಿ ನೀಡುವ ಸಾಲವು ಅನೇಕ ಕುಟುಂಬಗಳಿಗೆ ಆಸರೆಯಾಗಿದೆ. ಸಹಕಾರ ಸಚಿವರ ಜೊತೆ ಮಾತನಾಡಿ ಈ ಸಾಲಕ್ಕೆ ನೀಡುವ ಬಡ್ಡಿಯನ್ನು ರದ್ದು ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಸಕಾಲಕ್ಕೆ ಮರು ಪಾವತಿಸಿ: ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವೇದ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ 119 ಸ್ತ್ರೀ ಶಕ್ತಿ ಸಂಘಗಳಿಗೆ 4.5 ಕೋಟಿ ರೂ. ಸಾಲ ನೀಡಲಾಗುತ್ತಿದೆ. ಸಾಲ ಸದ್ಬಳಕೆ ಮಾಡಿಕೊಂಡು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಬ್ಯಾಂಕ್‌ನೊಂದಿಗೆ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಅಭಿವೃದ್ಧಿಗೆ ಅಡ್ಡಿಯಾಗಿದ್ದ ಶಿವಶಂಕರ ರೆಡ್ಡಿ: ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಜೆ.ವಿ.ಹನುಮೇಗೌಡ ಮಾತನಾಡಿ, ಕಳೆದ ಎರಡು ದಶಕಗಳಿಂದಲೂ ಈ ಭಾಗದ ಮುಖಂಡರಾದ ಅಶ್ವತ್ಥನಾರಾಯಣರೆಡ್ಡಿ, ಎಂ.ಟಿ.ನರಸಿಂಹಮೂರ್ತಿ ಸೇರಿದಂತೆ ಇನ್ನಿತರರ ಹೋರಾಟದ ಫಲವಾಗಿ ಇಂದು ಹೋಬಳಿಯು ತಾಲ್ಲೂಕಾಗಿ ರಚನೆಯಾಗಿದೆ. ಈ ಭಾಗದ ಅಭಿವೃದ್ಧಿಗೆ ಮಾರಕವಾಗಿದ್ದ ಶಾಸಕ ಶಿವಶಂಕರರೆಡ್ಡಿ ಅವರಿಗೆ ಇದೀಗ ತಕ್ಕ ಶಾಸ್ತಿಯಾಗಿದೆ ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ನಿರ್ದೇಶಕ ಸುಬ್ಟಾರೆಡ್ಡಿ, ತಾಪಂ ಸದಸ್ಯ ಎ.ಬಾಲಕೃಷ್ಣ, ಗ್ರಾಪಂ ಅಧ್ಯಕ್ಷ ಸುದರ್ಶನ್, ಮುಖಂಡರಾದ ಕೇಶವರೆಡ್ಡಿ, ರಿಯಾಜ್, ಪ್ರಕಾಶ್, ಗಂಗಾಧರಪ್ಪ, ವೆಂಕಟೇಶ್, ಪೆದ್ದಾರೆಡ್ಡಿ, ಬಾಲಕೃಷ್ಣ, ಶ್ರೀನಿವಾಸ್, ರಾಮ್‌ಕುಮಾರ್, ನಾರಾಯಣಸ್ವಾಮಿ, ಸುಬ್ರಹ್ಮಣಿ, ರಾಜೇಶ್, ಸುರೇಶ್ ಇದ್ದರು.