Advertisement

ಸಾಲಬಾಧೆ: ವಿವಿಧೆಡೆ ಮೂವರು ರೈತರ ಆತ್ಮಹತ್ಯೆ

06:35 AM Nov 22, 2018 | |

ಬೆಂಗಳೂರು: ಸಾಲಬಾಧೆ ತಾಳಲಾರದೆ ರಾಜ್ಯದಲ್ಲಿ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗುಡದೂರ ಗ್ರಾಮದಲ್ಲಿ ಬುಧವಾರ ಸಾಲಬಾಧೆ ತಾಳಲಾರದೆ ಈರಪ್ಪ ಬಸಪ್ಪ ಚೆನ್ನಣ್ಣವರ (48) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಹೆಸರಿನಲ್ಲಿ 20 ಗುಂಟೆ ಜಮೀನು ಇತ್ತು. ಮಗಳ ಮದುವೆಗೋಸ್ಕರ ಕೈಗಡ ಸಾಲವಾಗಿ ಸುಮಾರು 1.50 ಲಕ್ಷ ರೂ.ತೆಗೆದುಕೊಂಡಿದ್ದರು. ಮೃತರಿಗೆ ಪುತ್ರ, ಪುತ್ರಿ ಇದ್ದಾರೆ.

Advertisement

ವಿಜಯಪುರ ಜಿಲ್ಲೆ ಚಡಚಣ ಸಮೀಪದ ಹತ್ತಳ್ಳಿ ಗ್ರಾಮದಲ್ಲಿ ರಾಮಣ್ಣ ದಾನಪ್ಪ ವಾಲೀಕಾರ (37) ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 3.22 ಎಕರೆ ಜಮೀನು ಹೊಂದಿದ್ದ ಇವರು, ಜಮೀನಿನಲ್ಲಿ ಪೈಪ್‌ಲೈನ್‌ ಮಾಡುವ ಸಲುವಾಗಿ ಚಡಚಣ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ 2 ಲಕ್ಷ ಹಾಗೂ ಜಮೀನಿನಲ್ಲಿ ಮನೆ ನಿರ್ಮಾಣಕ್ಕಾಗಿಅದೇ ಬ್ಯಾಂಕಿನಿಂದ 3.85 ಲಕ್ಷ ಸೇರಿ  5.85 ಲಕ್ಷ ರೂ. ಸಾಲ ಮಾಡಿದ್ದರು.

ಈ ಮಧ್ಯೆ, ಸಾಲಬಾಧೆಯಿಂದ ಬೇಸತ್ತು ವಿಷ ಸೇವಿಸಿದ್ದ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಅಣ್ಣಪ್ಪ (40) ಎಂಬುವರು ಬುಧವಾರ ಮೃತಪಟ್ಟಿದ್ದಾರೆ. ಇವರು ಕೃಷಿ ಕಾರ್ಯಕ್ಕಾಗಿ ಆಕ್ಸಿಸ್‌ ಬ್ಯಾಂಕ್‌ನಲ್ಲಿ 9 ಲಕ್ಷ ರೂ. ಹಾಗೂ ಹೊನ್ನಾಳಿ ಕಸಬಾದ ಸಹಕಾರ ಸಂಘದಲ್ಲಿ 1ಲಕ್ಷ ರೂ. ಸಾಲ ಮಾಡಿದ್ದರು. ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದು, ಅದು ವಿಫಲವಾಗಿತ್ತು. ಇದರಿಂದ ನೊಂದಿದ್ದ ಅಣ್ಣಪ್ಪ ನ.19ರಂದು ತಮ್ಮ ಜಮೀನಿನಲ್ಲಿ ವಿಷ ಸೇವಿಸಿದ್ದರು.

ಹೊನ್ನಾಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next