Advertisement

ರೈತರ ಬವಣೆ ನಿವಾರಣೆಗೆ ಸಾಲಮನ್ನಾ ಸೂಕ್ತವೇ?        

04:41 PM Jan 01, 2018 | |

ರೈತರಿಂದ ಸಾಲಮನ್ನಾದ ಬೇಡಿಕೆ ಹೊಸ ಬೆಳವಣಿಗೆಯಲ್ಲ. ಆದರೆ ಈ ಬಾರಿ ಹೊಸತೇನೆಂದರೆ, ದೇಶದಾದ್ಯಂತ ರೈತರ ಸಾಲಮನ್ನಾ ಮಾಡಲು ಕೇಂದ್ರ ಸರಕಾರ ಸ್ಪಷ್ಟ ನಿರಾಕರಣೆ ಮಾಡಿದೆ. ಈ ಬಗ್ಗೆ ರಾಜ್ಯ ಸರಕಾರಗಳೇ ನಿರ್ಧರಿಸ ಬೇಕು ಮತ್ತು ಸಾಲಮನ್ನಾಕ್ಕಾಗಿ ಹಣ ಹೊಂದಿಸಬೇಕು ಎಂಬುದು ಕೇಂದ್ರ ಸರಕಾರದ ಸ್ಪಷ್ಟ ನಿಲುವು.

Advertisement

ಪುರುಷೋತ್ತಮ ರೂಪಾಲ, ಕೇಂದ್ರ ಸರಕಾರದ ಕೃಷಿ-ರಾಜ್ಯಸಚಿವರು ಕಳೆದ ವರ್ಷ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನೀಡಿದ ಮಾಹಿತಿ: ನಮ್ಮ ದೇಶದ ರೈತರ ಒಟ್ಟು ಸಾಲ ರೂ.12.6 ಲಕ್ಷ ಕೋಟಿ (30 ಸೆಪ್ಟೆಂಬರ್‌ 2016ರ ವರೆಗೆ). ರಾಷ್ಟ್ರೀಯ ಸ್ಯಾಂಪಲ… ಸರ್ವೆ ಕಚೇರಿ (ಎನ್‌.ಎಸ್‌.ಎಸ್‌.ಒ.) ಅನುಸಾರ 2012-13ರಲ್ಲಿ ನಮ್ಮ ದೇಶದ ಪ್ರತಿಯೊಂದು ಕೃಷಿಕುಟುಂಬದ ಮೇಲಿದ್ದ ಸರಾಸರಿ ಸಾಲದ ಹೊರೆ ರೂ.47,000. ಇದಕ್ಕೆ ಹೋಲಿಸಿದಾಗ, ಆ ಕುಟುಂಬಗಳ ಸರಾಸರಿ ವಾರ್ಷಿಕ ಆದಾಯ ಕೇವಲ ರೂ.74,676.

ರೈತರ ಮೇಲಿನ ಈ ಭಾರೀ ಸಾಲದ ಹೊರೆಯ ಹೊಡೆತಗಳನ್ನು ಗ್ರಾಮೀಣರಂಗದಲ್ಲಿ ಹಲವು ರೂಪಗಳಲ್ಲಿ ಕಾಣಬಹುದು. ಅವುಗಳಲ್ಲಿ ಎದ್ದು ಕಾಣುವುದು ರೈತರ ಆತ್ಮಹತ್ಯೆ. ರಾಷ್ಟ್ರೀಯ ಅಪರಾಧ ದಾಖಲಾತಿಗಳ ಬ್ಯೂರೋದ ಇತ್ತೀಚಿನ ಮಾಹಿತಿಯ ಪ್ರಕಾರ, ನಮ್ಮ ದೇಶದಲ್ಲಿ 2015ರಲ್ಲಿ ಕೃಷಿರಂಗದ ವ್ಯಕ್ತಿಗಳ ಆತ್ಮಹತ್ಯೆಯ ಸಂಖ್ಯೆ 12,602. ಅಂದರೆ, 2015ರಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಅಥವಾ ಕೃಷಿ ಕೆಲಸಗಾರ ತಮ್ಮ ಪ್ರಾಣ ಬಲಿಗೊಟ್ಟಿ¨ªಾರೆ!  ಈ ಆತ್ಮಹತ್ಯೆಗಳಲ್ಲಿ ಶೇ.36ರಷ್ಟು ಕೃಷಿ ಕೆಲಸಗಾರರ ಆತ್ಮಹತ್ಯೆ.

 ಇದು ಏನನ್ನು ಸೂಚಿಸುತ್ತದೆ? ಕೃಷಿರಂಗದ ಏರುತ್ತಿರುವ ಸಾಲದ ಹೊರೆಯ ಆತಂಕಕಾರಿ ಪರಿಣಾಮಗಳನ್ನು. ಕೃಷಿರಂಗದ ಹತಾಶೆಯ ಪರಿಸ್ಥಿತಿಗೆ ಪ್ರಧಾನ ಕಾರಣ ಬೇರೆ ಉತ್ಪನ್ನಗಳಿಗೆ ಹೋಲಿಸಿದಾಗ ಕೃಷಿ ಉತ್ಪನ್ನಗಳಿಂದ ಸಿಗುವ ಆದಾಯ ಕಾಲಾನುಕ್ರಮದಲ್ಲಿ ಹೆಚ್ಚಾಗದಿರುವುದು ಎನ್ನುತ್ತಾರೆ ರಾಖೇಶ್‌ ಟಿಕಾಯತ್‌, ರಾಷ್ಟ್ರೀಯ ಸಂಚಾಲಕ, ಭಾರತೀಯ ಕಿಸಾನ್‌ ಯೂನಿಯನ್‌. ನಿಜ ಹೇಳಬೇಕೆಂದರೆ, ಒಂದು ಕ್ವಿಂಟಾಲ… ಗೋಧಿ ಮಾರಿದರೆ 3,600 ರೂಪಾಯಿಯಾದರೂ ರೈತನಿಗೆ ಸಿಗಬೇಕು. ಆದರೆ ಸರಕಾರ ನಿಗದಿಪಡಿಸಿದ ಗೋಧಿಯ ಕನಿಷ್ಠ ಬೆಂಬಲ ಬೆಲೆ ಕೇವಲ 1,600 ರೂಪಾಯಿ ಎಂದು ಅವರು ಬೇಸರಿಸುತ್ತಾರೆ.

 ಕೃಷಿಯಿಂದ ಆದಾಯ ಕಡಿಮೆ ಎಂಬ ಸಮಸ್ಯೆ ಹೊಸತೇನಲ್ಲ. ಆದರೆ, ಕೃಷಿಕರ ಆದಾಯದ ಅಂದಾಜುಗಳ ಅಂತರ ದೊಡ್ಡದಾಗುತ್ತಿದೆ. ರಾಷ್ಟ್ರೀಯ ಸ್ಯಾಂಪಲ… ಸರ್ವೆ ಕಚೇರಿಯ 2012-13ರ ಸರ್ವೆ ಪ್ರಕಾರ ಭಾರತದ ರೈತನ ಸರಾಸರಿ ತಿಂಗಳ ಆದಾಯ ರೂ.6,223. ಕೇಂದ್ರ ಸರಕಾರದ ಆರ್ಥಿಕ ಸಮೀಕ್ಷೆ 2016-17 ಪ್ರಕಾರ ಇದು ಕೇವಲ ರೂ.1,600. ನೀತಿ ಆಯೋಗದ 2016ರ ವರದಿಯ ಪ್ರಕಾರ ಭಾರತದ ಸುಮಾರು ಶೇ.53 ರೈತರ ಆದಾಯ ಬಡತನದ ರೇಖೆಗಿಂತ ಕಡಿಮೆ ಅಂದರೆ ಅವರು ಗಳಿಸುವ ತಿಂಗಳ ಆದಾಯ ಕೇವಲ ರೂ.900!

Advertisement

ಆದ್ದರಿಂದಲೇ ಹಲವು ರಾಜ್ಯಗಳಲ್ಲಿ ರೈತರು ಬೀದಿಗಿಳಿದು ಪ್ರತಿಭಟಿಸಿ¨ªಾರೆ. ಆ ಎಲ್ಲ ಪ್ರತಿಭಟನೆಗಳ ಮುಖ್ಯ ಬೇಡಿಕೆ ಸಾಲಮನ್ನಾ. ಹಾಗಾಗಿ, ಹಲವು ರಾಜ್ಯ ಸರಕಾರಗಳು ರೈತರ ಪ್ರತಿಭಟನೆಯನ್ನು ತಣ್ಣಗೆ ಮಾಡಲಿಕ್ಕಾಗಿ ಸಾಲಮನ್ನಾ ಯೋಜನೆ ಘೋಷಿಸಿವೆ. ಉತ್ತರ ಪ್ರದೇಶದ ಹೊಸ ಸರಕಾರ, ಚುನಾವಣಾ ಪ್ರಣಾಳಿಕೆಯ ವಾಗ್ಧಾನ ಉಳಿಸಿಕೊಳ್ಳಲಿಕ್ಕಾಗಿ  ಏಪ್ರಿಲ… 4, 2017ರಂದು ರೂ.36,500 ಕೋಟಿ ಸಾಲ ಮನ್ನಾ ಘೋಷಿಸಿತು. ಅನಂತರ, 11 ಜೂನ್‌ 2017ರಂದು ರೂ.35,500 ಕೋಟಿ ಸಾಲಮನ್ನಾ ಘೋಷಣೆ ಮಹಾರಾಷ್ಟ್ರ ಸರಕಾರದಿಂದ.

ಆ ರಾಜ್ಯದ ಒಟ್ಟು ಕೃಷಿಸಾಲ ರೂ.62,776 ಕೋಟಿ. ಪಂಜಾಬಿನಲ್ಲಿಯೂ, ಚುನಾವಣಾ ಪ್ರಣಾಲಿಕೆಯಲ್ಲಿದ್ದಂತೆ ಹೊಸ ಸರಕಾರ 19 ಜೂನ್‌ 2017ರಂದು ರೂ.10,000 ಕೋಟಿ ಸಾಲಮನ್ನಾ ಘೋಷಿಸಿತು. ಅಲ್ಲಿನ ಒಟ್ಟು ಕೃಷಿ ಸಾಲ ರೂ.70,000 ಕೋಟಿ. ಆ ಮೇಲೆ ಸಾಲಮನ್ನಾ ಘೋಷಿಸಿದ್ದು ಕರ್ನಾಟಕ ಸರಕಾರ; ಸಹಕಾರಿ ಬ್ಯಾಂಕುಗಳಿಂದ 22 ಲಕ್ಷ ರೈತರು ಪಡೆದಿದ್ದ (ತಲಾ ರೂ.50,000) ಒಟ್ಟು ರೂ.8,165 ಕೋಟಿ ಸಾಲಮನ್ನಾ ಮಾಡಿತು. ಕರ್ನಾಟಕದಲ್ಲಿ ಒಟ್ಟು ಕೃಷಿಸಾಲ ರೂ.52,000 ಕೋಟಿ. ಆಂಧ್ರಪ್ರದೇಶ ಸರಕಾರ ಮೂರು ವರುಷಗಳ ಮುಂಚೆ, ಅಧಿಕಾರ ಸೂತ್ರ ಹಿಡಿದಾಗ, ರೂ.24,000 ಕೋಟಿ ಕೃಷಿಸಾಲ ಮನ್ನಾ ಮಾಡಿತ್ತು.

ಈ ಎಲ್ಲ ಅಂಕಿಸಂಖ್ಯೆಗಳನ್ನು ಪರಿಶೀಲಿಸಿದಾಗ, ಸ್ಪಷ್ಟವಾಗುವ ಒಂದು ವಿಷಯ: ರೈತರ ಆದಾಯ ಹೆಚ್ಚಳಕ್ಕೆ ಅವರ ಸಾಲಮನ್ನಾ ಪ್ರಾಯೋಗಿಕ ಪರಿಹಾರ ಅಲ್ಲ ಎನ್ನುವುದು. ಏಕೆಂದರೆ, 1990ರಲ್ಲಿ ದಿವಂಗತ ವಿ.ಪಿ. ಸಿಂಗ್‌ ಪ್ರಧಾನಿಯಾಗಿ¨ªಾಗ ಕೇಂದ್ರದ ನ್ಯಾಷನಲ… ಫ್ರಂಟ್‌ ಸರಕಾರ ರೂ.10,000 ಕೋಟಿ ಸಾಲಮನ್ನಾ ಮಾಡಿತ್ತು. ಆ ಸಾಲಮನ್ನಾದಿಂದ ಪ್ರಯೋಜನ ಆದದ್ದು ವಿಸ್ತಾರ ಜಮೀನಿನ ಮಾಲೀಕರಿಗೆ ಮಾತ್ರ ಎಂಬ ಟೀಕೆಯಿದೆ.

ಅನಂತರ, ಕೇಂದ್ರ ಸರಕಾರ ಸಾಲಮನ್ನಾ ಮಾಡಿದ್ದು 2008ರಲ್ಲಿ. ಅದು 36.9 ದಶಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ರೂ.60,416 ಕೋಟಿ ಮತ್ತು ಇತರ ರೈತರ ರೂ.7,960 ಕೋಟಿ ಸಾಲಮನ್ನಾ. ಇದರ ಬಗ್ಗೆ 2013ರಲ್ಲಿ ಪರಿಶೀಲನೆ ನಡೆಸಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿ, ಈ ಸಾಲಮನ್ನಾ ಯೋಜನೆ ಜಾರಿ ಆಗುವಾಗ ನಡೆದ ವ್ಯಾಪಕ ಭ್ರಷ್ಟಾಚಾರ ಇತ್ಯಾದಿ ನ್ಯೂನತೆಗಳನ್ನು ಎತ್ತಿ ತೋರಿಸಿತ್ತು.

 ಈ ಹಿನ್ನೆಲೆಯಲ್ಲಿ, ರೈತರು ಮತ್ತು ಗ್ರಾಹಕರು ಏನು ಮಾಡಬಹುದು? ಹೆಚ್ಚೆಚ್ಚು ರೈತರು ಸ್ವಸಹಾಯಸಂಘ, ಸಹಕಾರ ಸಂಘ, ರೈತ ಉತ್ಪಾದಕ ಕಂಪೆನಿಗಳನ್ನು ಸ್ಥಾಪಿಸಿಕೊಂಡು, ತಮ್ಮ ಕೃಷಿ ಉತ್ಪನ್ನಗಳನ್ನು (ಮುಖ್ಯವಾಗಿ ಧಾನ್ಯ -ಹಣ್ಣು ತರಕಾರಿ) ತಾವೇ ಪ್ಯಾಕೇಜ… ಮಾಡಿ ಮಾರಾಟ ಮಾಡಬಹುದು. ಇನ್ನೂ ಒಂದು ಹೆಜ್ಜೆ ಮುಂದಕ್ಕಿಟ್ಟು, ತಮ್ಮ ಕೃಷಿ ಉತ್ಪನ್ನಗಳನ್ನು ಕನಿಷ್ಠ ಒಂದು ಹಂತದ ಸಂಸ್ಕರಣೆಗೆ ಒಳಪಡಿಸಿ,

ಮೌಲ್ಯವರ್ಧನೆ ಮಾಡಿ ಮಾರಬಹುದು. ಯಾಕೆಂದರೆ, ಈಗ ಪಟ್ಟಣಗಳಲ್ಲಿ ಒಂದು ಕಿಲೋ ಹಲಸಿನ ಚಿಪ್ಸ್‌ ರೂ.500ರಿಂದ ರೂ.1,000 ಬೆಲೆಗೆ ಮಾರಾಟವಾಗುತ್ತಿದೆ. ಹಾಗೆಯೇ, ಹೆಚ್ಚೆಚ್ಚು ಗ್ರಾಹಕರು ರೈತರಿಂದ ನೇರವಾಗಿ ಖರೀದಿ ಮಾಡಬೇಕು. ಯಾಕೆಂದರೆ, ಒಂದು ಬ್ರಾಂಡಿನ ಊದಲು ಕಿಲೋಕ್ಕೆ ರೂ.310 ದರದಲ್ಲಿ ಮಾರಾಟವಾಗುತ್ತಿದೆ. ಇದರಲ್ಲಿ ಬೆಳೆಸಿದ ರೈತನಿಗೆ ಶೇ.20 ಬೆಲೆಯೂ ಸಿಗುವುದಿಲ್ಲ. ಆದರೆ, ಬಹುಪಾಲು ಅಂತಿಮ ಮಾರಾಟಗಾರರು ಯಾವುದೇ ಶ್ರಮವಿಲ್ಲದೆ, ಈ ಬೆಲೆಯ ಶೇ.40 ಕಮಿಷನ್‌ ಪಡೆಯುತ್ತಾರೆ! 

 ಇಂದಿನ ಮೊಬೈಲ… ಫೋನ್‌, ಇಂಟರ್‌ನೆಟ…, ವಾಟ್ಸಪ್‌ ಕಾಲಮಾನದಲ್ಲಿ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಖಂಡಿತ ಸಾಧ್ಯ. ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ಈಗಾಗಲೇ ಇಂಥ  ಐದು ಸುತ್ತಿನ ನೇರ ಖರೀದಿ ಮತ್ತು ಮಾರಾಟವನ್ನು ಯಶಸ್ವಿಯಾಗಿ ಪೂರೈಸಿದೆ. ಬೇರೆ ಊರುಗಳ ಗ್ರಾಹಕರೂ ಅನ್ನದಾತರ ಬವಣೆ ತಗ್ಗಿಸಲಿಕ್ಕಾಗಿ ಇಂತಹ ಕ್ರಮಕ್ಕೆ ಮುಂದಾಗುತ್ತಾರೆಂದು ಹಾರೈಸೋಣ. 

* ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next