Advertisement

ಸಾಲಮನ್ನಾ ದಿಂದ ಹಿಂದೆ ಸರಿಯಲ್ಲ

05:05 PM Jun 29, 2018 | Team Udayavani |

ಚಿಕ್ಕಮಗಳೂರು: ಸಮಿಶ್ರ ಸರ್ಕಾರ ಐದು ವರ್ಷ ಅವಧಿ ಪೂರ್ಣಗೊಳಿಸುತ್ತದೆ. ಸಾಲಮನ್ನಾದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜು. 5ರಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸುವ ಬಜೆಟ್‌ನಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ ಹೇಳಿದರು.

Advertisement

ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಎಸ್‌.ಎಲ್‌. ಧರ್ಮೆಗೌಡ ಹಾಗೂ ಬೋಜೇಗೌಡರವರಿಗೆ ಗುರುವಾರ ನಗರದ ಒಕ್ಕಲಿಗರ ಭವನದಲ್ಲಿ ಜಿಲ್ಲಾ ಜೆಡಿಎಸ್‌ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

ಬುದ್ಧಿಜೀವಿಗಳ ಸದನ ಎಂದೇ ಬಿಂಬಿತವಾಗಿರುವ ವಿಧಾನ ಪರಿಷತ್‌ಗೆ ಸಹೋದರರಿಬ್ಬರು ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಜೆಡಿಎಸ್‌ ಭದ್ರಕೋಟೆ ಎಂದೆ ಬಿಂಬಿತವಾಗಿದ್ದ ಚಿಕ್ಕಮಗಳೂರು ಜಿಲ್ಲೆ ಸಹೋದರಿಬ್ಬರ ಆಯ್ಕೆಯಿಂದ ಮತ್ತೂಮ್ಮೆ ಜೆಡಿಎಸ್‌ ಭದ್ರಕೋಟೆಯಾಗಲಿದೆ ಎಂದರು. 

ಮಾಜಿ ಶಾಸಕ ದಿ| ಲಕ್ಷಯ್ಯರವರು ಶಿಕ್ಷಕರಾಗಿ, ಶಾಸಕರಾಗಿ ಕೆಲಸ ಮಾಡಿದ್ದಾರೆ. ಅವರ ಪುತ್ರರಾದ ಸಹೋದರು ವಿಧಾನ ಪರಿಷತ್‌ ಆಯ್ಕೆಯಾಗುವುದರೊಂದಿಗೆ ಲಕ್ಷ್ಮಯ್ಯರವರ ಕುಟುಂಬಕ್ಕೆ ಗೌರವ ತಂದಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಬಿ.ಬಿ. ನಿಂಗಯ್ಯ, ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿರವರು ಎಸ್‌. ಎಲ್‌.ಧರ್ಮೇಗೌಡ ಅವರಿಗೆ ನಿನ್ನನ್ನು ವಿಧಾನಪರಿಷತ್‌ ಸದಸ್ಯನನ್ನಾಗಿ ಮತ್ತು ಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿದ್ದ ಮಾತಿನಂತೆ ವಿಧಾನಪರಿಷತ್‌ ಸದಸ್ಯರನ್ನಾಗಿ
ಮಾಡಿದ್ದಾರೆ. ಜೆಡಿಎಸ್‌ನ ಜಿಲ್ಲಾ ಮುಖಂಡರ ನಿಯೋಗ ಮುಖ್ಯಮಂತ್ರಿಗಳ ಬಳಿ ತೆರಳಿ ಧರ್ಮೇಗೌಡರಿಗೆ ಸಚಿವಸ್ಥಾನ ನೀಡುವಂತೆ ಒತ್ತಾಯಿಸಬೇಕು ಎಂದರು.

Advertisement

ಸ್ವಾಗತ ಸಮಿತಿ ಅಧ್ಯಕ್ಷ ಎಚ್‌.ಎಚ್‌. ದೇವರಾಜ್‌ ಮಾತನಾಡಿ, ಎಸ್‌.ಎಲ್‌. ಧರ್ಮೇಗೌಡ ಮತ್ತು ಎಸ್‌.ಎಲ್‌. ಭೋಜೇಗೌಡರು ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯಬೇಕು ಎಂದರು. 

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಸ್‌. ಎಲ್‌. ಧರ್ಮೇಗೌಡ, ಜಿಲ್ಲೆಯ ಬಯಲು ಸೀಮೆಗೆ ನೀರೊದಗಿಸುವ ಕರಗಡ ಕುಡಿಯುವ ನೀರಿನ ಯೋಜನೆಯ 2ನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ 20
ಕೋಟಿ ರೂ. ಹಣ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು. 

ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ಅಭಿಮಾನಿಗಳು, ಶಿಕ್ಷಕರು ಮತ್ತು ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಮತ್ತು ಪಕ್ಷಾತೀತವಾಗಿ ಕೆಲಸ ಮಾಡಲಾಗುವುದು ಎಂದರು.

ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಸ್‌.ಎಲ್‌ .ಧರ್ಮೇಗೌಡ ಮತ್ತು ಎಸ್‌.ಎಲ್‌.ಭೋಜೇಗೌಡ ಸಹೋದರರನ್ನು ಅಭಿನಂದಿಸಲಾಯಿತು. ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌
ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರಾದ ಎಂ.ಎಸ್‌. ಬಾಲಕೃಷ್ಣೇಗೌಡ, ಎಚ್‌.ಜಿ. ವೆಂಕಟೇಶ್‌, ಎಚ್‌.ಟಿ. ರಾಜೇಂದ್ರ, ಎಚ್‌.ಎಸ್‌. ಮಂಜಪ್ಪ, ಜಿ.ಎಚ್‌. ಚಂದ್ರಪ್ಪ, ಜಮೀಲ್‌ ಅಹಮದ್‌, ಉಮಾಪತಿ, ಚಂದ್ರೇಗೌಡ, ಎಂ.ಎಲ್‌. ವಸಂತ ಕುಮಾರಿ, ಜ್ಯೋತಿ ಈಶ್ವರ್‌, ಪದ್ಮಾ ತಿಮ್ಮೇಗೌಡ, ಮಾನು ಮಿರಾಂಡ, ವಿನಯ್‌ ಕೋಟೆ, ಭೈರೇಗೌಡ, ಡಿ.ಜೆ. ಸುರೇಶ್‌, ನಿಸಾರ್‌ ಅಹಮದ್‌, ಎಚ್‌.ಸಿ. ಕೃಷ್ಣೇಗೌಡ, ಎಂ. ನರೇಂದ್ರ, ಹೊಲದಗದ್ದೆ ಗಿರೀಶ್‌, ಎಂ.ಡಿ. ರಮೇಶ್‌, ದಿನೇಶ್‌, ಆನಂದ ನಾಯ್ಕ ಇದ್ದರು. ಅಭಿನಂದನೆ ಮಹಾಪುರ: ಎಸ್‌.ಎಲ್‌.ಡಿ ಮತ್ತು ಎಸ್‌.ಎಲ್‌.ಬಿ ಸಹೋದರರನ್ನು ಅಭಿನಂದಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿ ಬೆಳಗಿನಿಂದ ಕಾದು ನಿಂತಿದ್ದ ಪಕ್ಷದ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು, ಅಭಿಮಾನಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮದ ನಡುವೆಯೇ ಸಂಘಟಕರ ತಡೆಯನ್ನೂ ಲೆಕ್ಕಿಸದೆ ವೇದಿಕೆಗೆ ತೆರಳಿ ಸಹೋದರರನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next