Advertisement

ಕುಮಾರಸ್ವಾಮಿ ಘೋಷಿಸಿದ ಋಣಮುಕ್ತ ಕಾಯಿದೆಗೆ 10 ದಿನ

09:56 AM Aug 05, 2019 | keerthan |

ಸುಳ್ಯ: ರಾಜ್ಯದಲ್ಲಿ ಋಣಮುಕ್ತ ಕಾಯಿದೆ ಜಾರಿಗೊಂಡು 10 ದಿನ ಕಳೆದರೂ ಅನುಷ್ಠಾನಕ್ಕೆ ಸಂಬಂಧಿಸಿದ ಗೊಂದಲ ಇನ್ನೂ ಮುಕ್ತವಾಗಿಲ್ಲ. ಎಚ್‌.ಡಿ. ಕುಮಾರಸ್ವಾಮಿ ತನ್ನ ಅಧಿಕಾರದ ಕೊನೆ ಅವಧಿಯಲ್ಲಿ ಬಡ ಜನರನ್ನು ಲೇವಾದೇವಿದಾರರಿಂದ ರಕ್ಷಿಸಲು ಈ ಕಾಯಿದೆ ಜಾರಿ ಮಾಡಿದ್ದರು. 2019 ಜು.23ಕ್ಕಿಂತ ಹಿಂದೆ ಖಾಸಗಿ ಸಾಲ ಪಡೆದವರ ಸಾಲ ಬಡ್ಡಿ ಸಹಿತ ಮನ್ನಾ ಆಗಲಿದೆ ಎಂದು ತಿಳಿಸಲಾಗಿತ್ತು.

Advertisement

90 ದಿನಗಳ ಗಡುವು
ಯೋಜನೆ ಜಾರಿಗೊಂಡ ಜು.23 ರಿಂದ ಅನಂತರದ 90 ದಿನಗಳಲ್ಲಿ ಸಾಲ ಪಡೆದವರು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು. ಆದರೆ 10 ದಿನ ಕಳೆದರೂ ನೋಂದಣಿಗೆ ಚಾಲನೆ ಸಿಕ್ಕಿಲ್ಲ. ಹೀಗಾಗಿ ಯೋಜನೆಯ ಲಾಭ ಪಡೆಯಲೆಂದು ಕಾದಿರುವ ನೂರಾರು ಮಂದಿಗೆ ಸಮಸ್ಯೆಯಾಗಿದೆ. 10 ದಿನ ಕಳೆದಿದ್ದು, ಇನ್ನು 80 ದಿನಗಳು ನೋಂದಣಿಗೆ ಉಳಿದಿವೆ.

ನೋಂದಣಿ ಇಲ್ಲ
ಅವಿಭಜಿತ ದ.ಕ. ಜಿಲ್ಲೆಯ ಎಸಿ ಕಚೇರಿಗಳ ವ್ಯಾಪ್ತಿಯಲ್ಲಿ ನೋಂದಣಿ ಪ್ರಕ್ರಿಯೆಗೆ ಸರಕಾರ ಸಿದ್ಧತೆ ಮಾಡಿಲ್ಲ. ಈ ಬಗ್ಗೆ ಸ್ಪಷ್ಟ ಸೂಚನೆ, ನಿಯಮ ವಿವರ ಬಾರದೆ ಇಲಾಖೆಗಳಲ್ಲೂ ಗೊಂದಲವಾಗಿದೆ. ಕೆಲವೆಡೆ ಅರ್ಜಿ ನೀಡಲಾಗಿದ್ದರೂ ನೋಂದಣಿ ಸಾಧ್ಯವಾಗಿಲ್ಲ. ಯೋಜನೆ ವ್ಯಾಪ್ತಿಗೆ ಯಾರ್ಯಾರು ಸೇರಲಿದ್ದಾರೆ, ಯಾವ ತರಹದ ಸಾಲಗಳು ಎಂಬಿತ್ಯಾದಿ ಬಗ್ಗೆ ಸುತ್ತೋಲೆ ತಲುಪಿಲ್ಲ.

ಸಾಲ ಮರುಪಾವತಿ ಮೇಲೆ ತೂಗು ಕತ್ತಿ
ಸರಕಾರ ಸ್ಪಷ್ಟ ನಿರ್ಧಾರ ಪ್ರಕಟಿಸದ ಕಾರಣ ಸಾಲ ನೀಡಿದ ಇತರ ಹಣ ಕಾಸು ಸಂಸ್ಥೆಗಳಿಗೂ ತೊಂದರೆ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಫೈನಾನ್ಸ್‌ ಸಂಸ್ಥೆಗಳು ಗುಂಪು ರಚಿಸಿ ಸಾಲ ನೀಡುತ್ತವೆ. ಪ್ರತಿ ತಿಂಗಳು ಬಡ್ಡಿ ಸಹಿತ ಅಸಲು ಪಾವತಿಯ ಒಪ್ಪಂದದೊಂದಿಗೆ ಕೆಲವು ದಾಖಲೆ ಪಡೆದು ಈ ಸಾಲ ನೀಡಲಾಗುತ್ತದೆ. ಆದರೆ ಋಣಮುಕ್ತ ಕಾಯಿದೆ ಈ ಸಾಲ ಮರುಪಾವತಿಯ ಮೇಲೂ ಪರಿಣಾಮ ಬೀರಿದೆ. ಸಾಲ ಪಡೆದ ಕೆಲವರು ಋಣಮುಕ್ತ ಕಾಯಿದೆ ಅಡಿ ಮನ್ನಾ ಆಗಿದೆ ಎಂಬ ವಾದ ಮುಂದಿರಿ ಸಿದ್ದಾರೆ. ಸ್ಪಷ್ಟನೆ ಕೊಡಲು ಸಿಬಂದಿ ತಡಕಾಡುವ ಸ್ಥಿತಿ ಉಂಟಾಗಿದೆ.

ಏನಿದು ಋಣಮುಕ್ತ ಕಾಯಿದೆ?
ಪಾನ್‌ ಬ್ರೋಕರ್‌, ಖಾಸಗಿ ಲೇವಾದೇವಿದಾರರಿಂದ ಬಡ್ಡಿಗೆ ಸಾಲ ಪಡೆದವರ ಬಳಿ ಆಸ್ತಿ ಪತ್ರಗಳಿದ್ದರೆ, ಚಿನ್ನದ ಒಡವೆಗಳನ್ನು ಒತ್ತೆ ಇಟ್ಟಿದ್ದರೆ, ಬ್ಯಾಂಕ್‌ ಚೆಕ್‌ ನೀಡಿದ್ದರೆ, ಲಿಖೀತ ದಾಖಲೆಯಲ್ಲಿ ಸಹಿ ಮಾಡಿ ಕೊಟ್ಟಿದ್ದರೆ, ಸಾಲದ ರಶೀದಿ ಮತ್ತು ಸಾಲ ಪಡೆದಿರುವುದಕ್ಕೆ ಅಗತ್ಯ ದಾಖಲೆ ಇದ್ದರೆ ಸಲ್ಲಿಸಿ ನೋಂದಾಯಿಸಬೇಕು ಎಂದು ಸೂಚಿಸಲಾಗಿತ್ತು. ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು, ವಾರ್ಷಿಕ 1.20 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿದವರು, 2 ಹೆಕ್ಟೇರ್‌ ಪಾಳು ಭೂಮಿ ಹೊಂದಿದವರು, 25 ಗುಂಟೆ ಮಳೆ ಆಶ್ರಿತ ನೀರಾವರಿ ಹೊಂದಿದವರು, 50 ಗುಂಟೆಯಲ್ಲಿ ಒಮ್ಮೆ ನೀರಾವರಿ ಬೆಳೆ ಬೆಳೆಯುವವರು ಈ ಸೌಲಭ್ಯಕ್ಕೆ ಅರ್ಹರು ಎಂದು ತಿಳಿಸಲಾಗಿತ್ತು.

Advertisement

ನಿಯಮಾನುಸಾರ ಕ್ರಮ
ಈಗಷ್ಟೇ ಘೋಷಣೆ ಆಗಿದೆ. ಜಾರಿ ಕ್ರಮ ಗಳ ಬಗ್ಗೆ ಸರಕಾರದ ಸುತ್ತೋಲೆ ಇದ್ದು, ಸೂಚನೆ, ನಿಯಮಗಳು ಪರಿಶೀಲನೆ ಯಾದ ತತ್‌ಕ್ಷಣ ನೋಂದಣಿ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ಶಶಿಕಾಂತ ಸೆಂಥಿಲ್‌, ಜಿಲ್ಲಾಧಿಕಾರಿ, ದ.ಕ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next