Advertisement

ರಸ್ತೆ ಅಪಘಾತ ಮರಣ ಪ್ರಮಾಣ ಕಳೆದ ಎರಡು ತಿಂಗಳಲ್ಲಿ ಗಣನೀಯ ಇಳಿಕೆ

09:37 AM Nov 22, 2019 | Team Udayavani |

ನವದೆಹಲಿ: ಕೇಂದ್ರ ಸರಕಾರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಂಡ ಬಳಿಕ ದೇಶದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕಳೆದ ಎರಡು ತಿಂಗಳುಗಳಲ್ಲಿ 9 ಪ್ರತಿಶತದಷ್ಟು ಕಡಿಮೆಯಾಗಿದೆ. ಸೆಪ್ಟಂಬರ್ 01ರಿಂದ ಅಕ್ಟೋಬರ್ 31ರವರೆಗೆ ದೇಶದಲ್ಲಿ ರಸ್ತೆ ಅಪಘಾತದಲ್ಲಿ 3,375 ಜನರು ಸಾವನ್ನಪ್ಪಿದ್ದಾರೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ 3,729 ಜನರು ಸಾವನ್ನಪ್ಪಿದ್ದರು. ಒಂಭತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಿಂದ ಲಭ್ಯವಾಗಿರುವ ದತ್ತಾಂಶಗಳ ಪ್ರಕಾರ ಈ ಮಾಹಿತಿಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇಂದು ಲೋಕಸಭೆಗೆ ನೀಡಿದ್ದಾರೆ.

Advertisement

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ದೇಶದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಿದೆಯೇ ಎಂಬ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸಚಿವ ಗಡ್ಕರಿ ಅವರು ಈ ಉತ್ತರವನ್ನು ನೀಡಿದ್ದಾರೆ. ‘ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಕಳೆದ ಎರಡು ತಿಂಗಳಲ್ಲಿ ಅಪಘಾತ ಮರಣ ಪ್ರಕಾರ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಸಚಿವರು ಹೇಳಿದರು.

ಇನ್ನು ಚಂಢೀಗಡದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ರಸ್ತೆ ಅಪಘಾತ ಮರಣ ಪ್ರಮಾಣ 75 ಪ್ರತಿಶದಷ್ಟು ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಈ ಪ್ರಮಾಣ ಪುದುಚೇರಿಯಲ್ಲಿ 31 ಪ್ರತಿಶದಷ್ಟು ಕಡಿಮೆಯಾಗಿದೆ, ಉತ್ತರಾಖಂಡದಲ್ಲಿ 22 ಪ್ರತಿಶತದಷ್ಟು ಕಡಿಮೆಯಾಗಿದ್ದರೆ ಗುಜರಾತ್ ನಲ್ಲಿ 14 ಪ್ರತಿಶತದಷ್ಟು ಅಪಘಾತ ಮರಣ ಪ್ರಮಾಣ ಕಡಿಮೆಯಾಗಿದೆ.

ಇವುಗಳಲ್ಲಿ ಅತೀಹೆಚ್ಚಿನ ಮರಣ ಪ್ರಮಾಣ ಸಂಭವಿಸಿರುವುದು ಉತ್ತರಪ್ರದೇಶದಲ್ಲಾಗಿದ್ದರೂ (1355) ಕಳೆದ ವರ್ಷಕ್ಕೆ ಹೋಲಿಸಿದಲ್ಲಿ (1503) ಈ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎನ್ನುತ್ತದೆ ವರದಿ.

ಸೆಪ್ಟಂಬರ್ 01ರಂದು ತಿದ್ದುಪಡಿಗೊಳಗಾದ ಈ ಕಾಯ್ದೆ ದೇಶಾದ್ಯಂತ ಜಾರಿಗೆ ಬಂದ ಸಂದರ್ಭದಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ಎದುರಾಗಿತ್ತು. ಈ ನೂತನ ತಿದ್ದುಪಡಿ ಕಾಯ್ದೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಭಾರೀ ಪ್ರಮಾಣದ ದಂಡ ಮೊತ್ತವನ್ನು ವಿಧಿಸಲಾಗಿತ್ತು ಮತ್ತು ಅಪಘಾತದಂತಹ ಕೆಲವು ಪ್ರಕರಣಗಳಲ್ಲಿ ತಪ್ಪಿತಸ್ಥ ಸವಾರರಿಗೆ ಕಾರಾಗೃಹ ಶಿಕ್ಷೆ ವಿಧಿಸುವ ಅವಕಾಶವನ್ನೂ ಈ ಕಾಯ್ದೆ ಒಳಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next