ಕೆಲ ತಿಂಗಳ ಹಿಂದೆ “ಭೂತಯ್ಯನ ಮೊಮ್ಮಗ ಅಯ್ಯು’ ಎಂಬ ಚಿತ್ರ ಸೆಟ್ಟೇರಿದ್ದು ಎಲ್ಲರಿಗೂ ಗೊತ್ತು. ಈಗ ಆ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡುವ ನೆಪದಲ್ಲಿ ಚಿತ್ರತಂಡದೊಂದಿಗೆ ಮಾಧ್ಯಮದವರ ಮುಂದೆ ಬಂದಿದ್ದರು ನಿರ್ದೇಶಕ ನಾಗರಾಜ್ ಪೀಣ್ಯ. ಅಂದು ಸಭಾಂಗಣ ಕಿಕ್ಕಿರಿದಿತ್ತು. ಅದಕ್ಕೆ ಕಾರಣ, ಪುನೀತ್ ರಾಜ್‌ಕುಮಾರ್ ಅವರು ಟೀಸರ್ ಬಿಡುಗಡೆ ಮಾಡೋಕೆ ಬರುತ್ತಾರೆಂಬ ಸುದ್ದಿ. ಚಿತ್ರತಂಡದ ಆಹ್ವಾನಕ್ಕೆ ಆಗಮಿಸಿದ್ದ ಪುನೀತ್ ಟೀಸರ್ ಬಿಡುಗಡೆ ಮಾಡಿದರು.
“ಟೀಸರ್ ಚೆನ್ನಾಗಿದೆ. ಟೀಸರ್ ನೋಡಿದರೆ ಸಾಕು, ಇದೊಂದು ಪಕ್ಕಾ ಮನರಂಜನೆಯ ಚಿತ್ರ ಅಂತ ಗೊತ್ತಾಗುತ್ತೆ. ಅದರಲ್ಲೂ ಹೊನ್ನವಳ್ಳಿ ಕೃಷ್ಣ ಅವರಿಗೆ ಇದು ಒಂದು ಸಾವಿರದ ಸಿನಿಮಾ ಅನ್ನೋದೇ ವಿಶೇಷ. ಇಂತಹ ಕಲಾವಿದರನ್ನು ಗುರುತಿಸಿ ಚಿತ್ರತಂಡ ಅವಕಾಶ ನೀಡಿದೆ. ಹಿರಿಯ ಕಲಾವಿದರಿಗೆ ಪಾತ್ರ ಕೊಡುವ ಮೂಲಕ ಅವರನ್ನು ಸನ್ಮಾನಿಸಿದ್ದು ವಿಶೇಷ ಎನಿಸಿದೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದು ಶುಭಹಾರೈಸಿದರು ಪುನೀತ್.
ನಂತರ ಮಾತಿಗಿಳಿದ ನಿರ್ದೇಶಕ ನಾಗರಾಜ್ ಪೀಣ್ಯ, “ಇದು ನನ್ನ ಮೂರನೇ ಚಿತ್ರ. ಲವ್, ರೌಡಿಸಂ ಕಥೆವುಳ್ಳ ಚಿತ್ರ ಮಾಡಿದ್ದ ನನಗೆ, ಬೇರೆ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ, ಒಂದು ಕಾಮಿಡಿ ಸಿನಿಮಾ ಮಾಡುವ ಐಡಿಯಾ ಬಂತು. ಇದೊಂದು ಸಾವಿನ ಸುತ್ತ ನಡೆಯೋ ಕಥೆ. ಅದರಲ್ಲೂ 99 ಹೆಣ್ಣು ನೋಡಿದ ಹುಡುಗ 100 ನೇ ಹೆಣ್ಣು ನೋಡೋಕೆ ಹೋದಾಗ ಏನೆಲ್ಲಾ ಆಗುತ್ತೆ ಅನ್ನುವ ಮಜವಾದ ಎಳೆ ಇಲ್ಲಿದೆ. ಸಾವಿನ ಸುತ್ತ ಏನೆಲ್ಲಾ ಘಟನೆಗಳು ನಡೆಯುತ್ತವೆ ಎಂಬುದಿಲ್ಲಿ ಹೈಲೈಟ್.
ಅದಕ್ಕಾಗಿಯೇ ನಾನು ಸುಮಾರು 50ಕ್ಕೂ ಹೆಚ್ಚು ಸಾವಿನ ಮನೆಗೆ ಹೋಗಿದ್ದೇನೆ. ಕಾರಣ, ಅಲ್ಲಿ ನಡೆಯುವ ಸನ್ನಿವೇಶಗಳು ಹೇಗೆಲ್ಲಾ ಇರುತ್ತವೆ ಎಂಬುದನ್ನು ಗಮನಿಸಿ, ಒಂದಷ್ಟು ಹಾಸ್ಯ ಬೆರೆಸಿ ಮಾಡಿದ್ದೇನೆ. ಇದು ಎಲ್ಲಾ ವರ್ಗಕ್ಕೂ ಇಷ್ಟ ಆಗುತ್ತೆ ಎಂಬ ಭರವಸೆ ಕೊಡ್ತೀನಿ. ಇಂತಹ ಚಿತ್ರ ಮಾಡೋಕೆ ಸಾಧ್ಯವಾಗಿದ್ದು, ನನ್ನ ನಿರ್ಮಾಪಕರು ಮತ್ತು ಹಗಲಿರುಳು ನನ್ನೊಂದಿಗಿದ್ದ ನನ್ನ ತಂಡ’ ಅಂದರು ನಾಗರಾಜ್ ಪೀಣ್ಯ.
ಹಿರಿಯ ಕಲಾವಿದ ಹೊನ್ನವಳ್ಳಿ ಕೃಷ್ಣ ಅವರಿಗೆ ಈ ಚಿತ್ರ ಒಂದು ಸಾವಿರನೇ ಸಿನಿಮಾ ಆಗಿದ್ದರಿಂದ ಚಿತ್ರತಂಡ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿತು. ಸನ್ಮಾನ ಸ್ವೀಕರಿಸಿದ ಹೊನ್ನವಳ್ಳಿ ಕೃಷ್ಣ, “ನಮ್ಮಂತಹ ನಟರನ್ನು ಗುರುತಿಸಿ ಅವಕಾಶ ಕೊಟ್ಟ ಚಿತ್ರತಂಡಕ್ಕೆ ನಾನು ಋಣಿಯಾಗಿರುತ್ತೇನೆ. ಇದು ನನ್ನ ವೃತ್ತಿ ಬದುಕಿನ ಒಂದು ಸಾವಿರದ ಚಿತ್ರ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ನನಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿ, ಪ್ರೀತಿ ತೋರಿದ್ದಾರೆ. ಈ ಚಿತ್ರ ಶತದಿನ ಪ್ರದರ್ಶನ ಕಂಡು, ಆ ದಿನ ಎಲ್ಲರಿಗೂ ಬೆಳ್ಳಿ ಕಪ್ಪು ಕೊಡುವಂತಾಗಲಿ’ ಅಂದರು ಹೊನ್ನವಳ್ಳಿ ಕೃಷ್ಣ.
ಅಂದು ನಿರ್ಮಾಪಕ ವರಪ್ರಸಾದ್, “ಕಥೆ ಚೆನ್ನಾಗಿತ್ತು, ಸಿನಿಮಾ ಮಾಡೋಕೆ ಮುಂದೆ ಬಂದೆ. ಇದು ಮೊದಲ ಅನುಭವ. ನನ್ನೊಂದಿಗೆ ಗೆಳೆಯರಾದ ಅನಿಲ್, ಹರೀಶ್, ಹನುಮಂತು ಎಲ್ಲರೂ ಕೈ ಜೋಡಿಸಿದ್ದಾರೆ. ಬಜೆಟ್ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿದ್ದರೂ. ಸಿನಿಮಾ ಮೂಡಿಬಂದಿರುವ ರೀತಿ ನೋಡಿ ಖುಷಿಯಾಗಿದೆ. ನಿಮ್ಮೆಲ್ಲರ ಸಹಕಾರ ಇರಲಿ ಅಂದರು ವರಪ್ರಸಾದ್. ಹಿರಿಯ ಕಲಾವಿದ ಉಮೇಶ್ ಕೂಡ ಚಿತ್ರತಂಡಕ್ಕೆ ಶುಭಹಾರೈಸಿದರು. ರವಿಬಸ್ರೂರ್ ಸಂಗೀತ ನೀಡಿದರೆ, ನಂದಕುಮಾರ್ ಕ್ಯಾಮೆರಾ ಹಿಡಿದಿದ್ದಾರೆ.