Advertisement

125ಕ್ಕೂ ಹೆಚ್ಚು ಕುರಿಗಳ ಸಾವು-ಪರಿಶೀಲನೆ

09:45 PM Oct 27, 2021 | Nagendra Trasi |

ಶಿವಮೊಗ್ಗ: ನಗರದ ಸಾಗರ ರಸ್ತೆಯ ಪೆಸಿಟ್‌ ಕಾಲೇಜಿನ ಮುಂಭಾಗ ಚಿಕ್ಕೋಡಿ ಭಾಗದ ಸಂಚಾರಿ ಕುರುಬರು ಟೆಂಟ್‌ಗಳನ್ನು ಹಾಕಿಕೊಂಡಿದ್ದು, ಕಳೆದೆರಡು ದಿನಗಳಿಂದ ಸುಮಾರು 125ಕ್ಕೂ ಹೆಚ್ಚು ಕುರಿಗಳು ನಿಗೂಢ ಕಾರಣದಿಂದ ಸಾವು ಕಂಡಿದ್ದು, ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸತ್ತ ಕುರಿಗಳ ರಕ್ತದ ಸ್ಯಾಂಪಲ್‌ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.

Advertisement

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ನಷ್ಟಕ್ಕೊಳಗಾದ ಕುರಿಗಾಹಿಗಳಿಗೆ ಸಾಂತ್ವನ ಹೇಳಿದರು. ನಂತರ ಪ್ರತಿಕ್ರಿಯಿಸಿದ ಅವರು, ಕುರಿಗಳ ಸಾವಿನಿಂದ ಕುರಿಗಾಹಿಗಳಾದ ವಾಸಪ್ಪ ಮಾನೆ ಮತ್ತು ಅವರ ಕುಟುಂಬ ಆತಂಕಕ್ಕೀಡಾಗಿದ್ದು, ನಿನ್ನೆ ಅಧಿ ಕಾರಿಗಳ ಗಮನಕ್ಕೆ ತಂದರೂ ಯಾರೂ ಸ್ಪಂದಿಸಿರಲಿಲ್ಲ. ಇದರಿಂದ ಬಡ ಕುರಿಗಾಹಿಗಳಿಗೆ ಅನ್ಯಾಯವಾಗಿದ್ದು, ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ.

ಹಿಂದೆ ಸರ್ಕಾರದ ಅನುಗ್ರಹ ಯೋಜನೆಯಲ್ಲಿ ಮೃತಪಟ್ಟ ಕುರಿಗಳಿಗೆ 5 ಸಾವಿರ ರೂ. ಪರಿಹಾರ ದೊರಕುತ್ತಿತ್ತು. ಈಗಿನ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಿದ್ದು ಕುರಿಗಾಹಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕುರಿಗಳ ನಿಗೂಢ ಸಾವಿಗೆ ನಿಖರ ಕಾರಣವನ್ನು ತಿಳಿದುಕೊಂಡು ಎಲ್ಲ ಪಶು ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ನೀಡಬೇಕು. ಸತ್ತ ಕುರಿಗಳಿಗೆ ಕೂಡಲೇ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸಿಎಂ ಜೊತೆ ಮಾತನಾಡುವುದಾಗಿ ಹೇಳಿದ ಅವರು, ಕೂಡಲೇ ಅನುಗ್ರಹ ಯೋಜನೆಯನ್ನು ಪುನರ್‌ ಪ್ರಾರಂಭಿಸುವಂತೆ ಆಗ್ರಹಿಸಿದರು. ಹಾಲುಮತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ| ಡಿ.ಟಿ. ಪ್ರಶಾಂತ್‌, ಜಿಲ್ಲಾಧ್ಯಕ್ಷ ದಾನೇಶ್‌, ಜಿಲ್ಲಾ ಕಾರ್ಯಾಧ್ಯಕ್ಷ ಗಣೇಶ್‌ ಬಿಳಿಗಿ, ಮುಖಂಡ ಅರುಣ್‌ ಮತ್ತು ಕುರಿಗಾಹಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next