ಗದಗ: ಸರಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಡೆಂಗ್ಯೂ ಪರೀಕ್ಷೆ ಸಂಖ್ಯೆ ಕಡಿಮೆ ಮಾಡಿದ್ದರಿಂದ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದೂವರೆ ತಿಂಗಳಿನಿಂದ ಡೆಂಗ್ಯೂ ಪ್ರಕರಣಗಳು ಆರಂಭವಾಗಿದ್ದರೂ ಸರಕಾರ, ಆರೋಗ್ಯ ಇಲಾಖೆ ವೈದ್ಯಾಧಿ ಕಾರಿಗಳು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿಲ್ಲ. ಡೆಂಗ್ಯೂ ಕೇಸ್‌ಗಳು ಜಾಸ್ತಿಯಿದ್ದರೂ ಅಂತಹ ಪ್ರಕರಣಗಳನ್ನು ಬೇರೆ ಕೆಟಗರಿಯಲ್ಲಿ ಹಾಕಿ ಡೆಂಗ್ಯೂ ಪ್ರಕರಣಗಳು ಕಡಿಮೆ ಇವೆ ಎಂದು ಬಿಂಬಿಸಲು ಮೊದಲು ಪ್ರಯತ್ನಿಸಿದರು.
ಪರೀಕ್ಷೆಗಳನ್ನು ಕಡಿಮೆ ಮಾಡಿದರು. ಈ ಹಿನ್ನೆಲೆಯಲ್ಲಿ ಈಗ ಬಹಳ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಸರಕಾರದ ಅಧಿಕೃತ ಸಂಖ್ಯೆಯೇ 7 ಸಾವಿರ ದಾಟಿದೆ. ಅದರ ಎರಡು ಪಟ್ಟು ಡೆಂಗ್ಯೂ ಪ್ರಕರಣಗಳು ಹೆಚ್ಚಿದ್ದು, ಸಾವು-ನೋವುಗಳಾಗುತ್ತಿವೆ ಎಂದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಇಲಾಖೆ ಸಚಿವರು ಕೇವಲ ಸಭೆ ಮಾಡಿ ಎಲ್ಲವೂ ಸರಿಯಾಗುತ್ತದೆ ಎನ್ನುವ ಭಾವನೆಯಲ್ಲಿದ್ದಾರೆ. ಈಗಲೂ ಪರೀಕ್ಷೆಗಳ ಸಂಖ್ಯೆ ಕಡಿಮೆಯಿದೆ. ಆದ್ದರಿಂದ, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಬೇಕು. ನಿಗದಿತ ಪ್ರಮಾಣದಲ್ಲಿ ಔಷ ಧ ವಿತರಿಸಬೇಕು, ಚಿಕಿತ್ಸೆ ನೀಡಬೇಕು. ಸರಕಾರ ಹೆಚ್ಚೆಚ್ಚು ಉಚಿತ ಪರೀಕ್ಷೆಗಳನ್ನು ಆರಂಭಿಸಿ, ಡೆಂಗ್ಯೂ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆಯಿಲ್ಲ, ತಾಲೂಕು ಆಸ್ಪತ್ರೆಯಲ್ಲಿ ಕೇಳುವವರೇ ಇಲ್ಲ. ಕೂಡಲೇ ಪ್ರತಿ ಜಿಲ್ಲೆಗೊಂದು ಟಾಸ್ಕ್ಫೋರ್ಸ್ ರಚಿಸಿ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದರು.