ವಿದಿಶಾ: ನೀರು ತರಲು ಹೋಗಿದ್ದ 14 ವರ್ಷದ ಹುಡುಗನೊಬ್ಬ ಗುರುವಾರ ರಾತ್ರಿ ಅನಿರೀಕ್ಷಿತವಾಗಿ ಬಾವಿಗೆ ಬಿದ್ದಿದ್ದಾನೆ. ದುರಂತವೆಂದರೆ ಆತನನ್ನು ರಕ್ಷಿಸಲು ಹೋದಾಗ ಸುಮಾರು 30 ಮಂದಿ ಬಾವಿಗೆ ಬಿದ್ದಿದ್ದಾರೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಲಾಲ್ ಪತರ್ ಎಂಬ ಹಳ್ಳಿಯಲ್ಲಿ. ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:30 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಿದ ಮಹಾನ್ ಪರಿಸರ ಪ್ರೇಮಿ ಈ ‘ಅಂತರ್ಯಾಮಿ’
ಬಾವಿಗೆ ಬಿದ್ದು ಮೃತಪಟ್ಟ ಕುಟುಂಬ ಸದಸ್ಯರಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ ಎಂದು ಶನಿವಾರ (ಜುಲೈ 17) ವರದಿ ತಿಳಿಸಿದೆ.
19 ಮಂದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ದಳ ರಕ್ಷಿಸಿದೆ.ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಮೃತರ ಕುಟುಂಬವರ್ಗಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಆಗಿದ್ದೇನು?: ಗುರುವಾರ ರಾತ್ರಿ ನೀರು ತರಲು ಹೋಗಿದ್ದ ಹುಡುಗ ಅಚಾನಕ್ಕಾಗಿ ಬಾವಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಇನ್ನುಳಿದವರು ಬಾವಿಗೆ ಹಾರಿದ್ದಾರೆ. ಇನ್ನೊಂದಷ್ಟು ಮಂದಿ ಬಾವಿಯ ಮೋಟುಗೋಡೆಯ ಮೇಲೆ ನಿಂತು, ಕೆಳಕ್ಕೆ ಹಾರಿದವರಿಗೆ ರಕ್ಷಣೆ ನೀಡಲು ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಮೋಟುಗೋಡೆ ಕುಸಿದು ಅವರೂ ಬಾವಿಪಾಲಾಗಿದ್ದಾರೆ. ದುರದೃಷ್ಟ ಇಷ್ಟಕ್ಕೂ ನಿಲ್ಲಲಿಲ್ಲ. ಇವರನ್ನು ರಕ್ಷಿಸಲೆಂದು ರಕ್ಷಣಾಪಡೆಯೊಂದು ಟ್ರ್ಯಾಕ್ಟರ್‌ನೊಂದಿಗೆ ತೆರಳಿತ್ತು. ಟ್ರ್ಯಾಕ್ಟರ್ ಕೂಡ ಅದರಲ್ಲಿದ್ದ 4 ಪೊಲೀಸರೊಂದಿಗೆ ಬಾವಿಗೆ ಬಿದ್ದಿದೆ. ಇದರಿಂದ ಮೊದಲೇ ಒಳಗಿದ್ದವರು ಈ ಟ್ರ್ಯಾಕ್ಟರ್‌ನಡಿ ಸಿಲುಕಿಕೊಳ್ಳುವಂತಾಗಿತ್ತು ಎಂದು ವರದಿ ತಿಳಿಸಿದೆ.