Advertisement

ಮೃತರ ಸಂಖ್ಯೆ 14ಕ್ಕೆ ಏರಿಕೆ: ಹಿಂಸಾಚಾರಕ್ಕೆ ಬ್ರೇಕ್ ಹಾಕುವಂತೆ ಸಿಎಂ ಮಮತಾ ಸೂಚನೆ

06:07 PM May 05, 2021 | Team Udayavani |

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆಯ ಫ‌ಲಿತಾಂಶದ ದಿನದಿಂದ ಆರಂಭವಾದ ಹಿಂಸಾಚಾರ ಮಂಗಳವಾರವೂ ಮುಂದುವರಿ‌ ದಿದ್ದು, ಮೃತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.

Advertisement

ಹಿಂಸಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂದು ( ಮೇ.05) ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಮಮತಾ ಬ್ಯಾನರ್ಜಿ, ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ನಡೆಯುತ್ತಿರುವ ಗಲಭೆ ಮುಂದುವರೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಖಡಕ್ ಆಗಿ ಸೂಚಿಸಿದ್ದಾರೆ.

ಸಭೆಯ ಬಳಿಕ ಮಾಧ್ಯಮಗಳ ಎದುರು ಮಾತನಾಡಿರುವ ಅವರು, ಇಂತಹ ಘಟನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಗೆಲುವು ಪಡೆದ ಕ್ಷೇತ್ರಗಳಲ್ಲಿ ಹೆಚ್ಚು ಗಲಭೆ-ಗಲಾಟೆಗಳು ನಡೆಯುತ್ತಿವೆ. ಹಳೆ ವಿಡಿಯೋಗಳ ಮೂಲಕ ಸುಳ್ಳು ಸುದ್ದಿಗಳನ್ನು ಬಿಜೆಪಿ ಪಕ್ಷ ಹರಡುತ್ತಿದೆ. ಇಂತಹ ಕೃತ್ಯವನ್ನು ನಿಲ್ಲಿಸುವಂತೆ ಎಲ್ಲ ರಾಜಕೀಯ ಪಕ್ಷಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ನೀವು ಚುನಾವಣೆ ಸಂದರ್ಭದಲ್ಲಿ ಇದೇ ರೀತಿ ಸಾಕಷ್ಟು ಮಾಡಿದ್ದೀರಾ ಎಂದಿದ್ದಾರೆ.

ಪ್ರಧಾನಿ ಮೋದಿ ಆಘಾತ :   

ಇನ್ನು ಘಟನೆ ಬಗ್ಗೆ ಆಘಾತ ವ್ಯಕಪಡಿಸಿರುವ ಪ್ರಧಾನಿ ಮೋದಿ ಮಂಗಳವಾರ ರಾಜ್ಯಪಾಲ ಜಗದೀಪ್‌ ಧನ್ಕರ್‌ ಅವರಿಗೆ ಕರೆ ಮಾಡಿ, ಹಿಂಸಾಚಾರ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಿದ್ದಾರೆ.

Advertisement

ಪೂರ್ವ ಬರ್ಧಮಾನ್‌ ಜಿಲ್ಲೆಯಲ್ಲಿ ಮಂಗಳವಾರ 54 ವರ್ಷದ ಟಿಎಂಸಿ ಕಾರ್ಯಕರ್ತರೊಬ್ಬರನ್ನು ಇರಿದು ಕೊಲ್ಲಲಾಗಿದೆ. ಕೂಛ್ ಬೆಹಾರ್‌ ನಲ್ಲಿ ಬಿಜೆಪಿ ಕಾರ್ಯಕರ್ತನ ಮನೆಗೆ ಬೆಂಕಿ ಹಚ್ಚಲಾಗಿದೆ. ಹೌರಾದಲ್ಲಿ 15 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬಂಗಾಳಕ್ಕೆ ಭೇಟಿ ನೀಡಿದ್ದು, ಇಲ್ಲಿ ನಡೆಯುತ್ತಿರುವ ಹಿಂಸೆಯು ದೇಶ ವಿಭಜನೆ ವೇಳೆ ಆದಂಥ ಹಿಂಸಾಚಾರವನ್ನು ನೆನಪಿಸುತ್ತಿದೆ ಎಂದಿದ್ದಾರೆ.

ಅಧಿಕಾರಿಗೆ ಭದ್ರತೆ: ನಂದಿಗ್ರಾಮ ಚುನಾವಣಾ ಅಧಿಕಾರಿಗೆ ಭದ್ರತೆ ಒದಗಿಸಿರುವುದಾಗಿ ಬಂಗಾಳ ಸರ್ಕಾರವು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ. ಫ‌ಲಿತಾಂಶದಂದು ಮರು ಮತ ಎಣಿಕೆಗೆ ದೀದಿ ಆಗ್ರಹಿಸಿದರೂ, ಅಧಿಕಾರಿ ಒಪ್ಪಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next