Advertisement

ಮ್ಯಾನ್‌ಹೋಲ್‌ ಸ್ವಚ್ಛತೆಗೆ ತೆರಳಿದವರ ಸಾವು

11:52 AM Feb 14, 2018 | Team Udayavani |

ಮಹದೇವಪುರ/ ಬೆಂಗಳೂರು: ಇತ್ತೀಚೆಗಷ್ಟೇ ಬಂಡೆಪಾಳ್ಯದ ಅಪಾರ್ಟ್‌ ಮೆಂಟ್‌ನ ಎಸ್‌ಟಿಪಿ ಸ್ವತ್ಛಗೊಳಿಸುವ ವೇಳೆ
ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಮಾಸುವ ಮುನ್ನವೇ ನಗರದ ಎಇಸಿಎಸ್‌ ಲೇಔಟ್‌ನ ವಾಣಿಜ್ಯ ಮಳಿಗೆಯೊಂದರ ಮ್ಯಾನ್‌ಹೋಲ್‌ ಸ್ವತ್ಛತೆಗೆ ಇಳಿದಿದ್ದ ರಾಯಚೂರು ಮೂಲದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ದುರಂತ ನಡೆದಿದೆ.

Advertisement

ರಾಮು (35) ಮತ್ತು ರವಿ (27) ಮೃತರು. ಇವರು ಬಿಬಿಎಂಪಿ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದು ಮಂಗಳವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಎಇಸಿಎಸ್‌ ಲೇಔಟ್‌ ನಲ್ಲಿರುವ ವಾಣಿಜ್ಯ ಕಟ್ಟಡದ ಯವ್‌ಲೋಕ್‌ ಹೋಟೆಲ್‌ನ ಮ್ಯಾನ್‌ಹೋಲ್‌ ಸ್ವತ್ಛತೆಗೆ ಇಳಿದಿದ್ದರು. ಈ ವೇಳೆ ಉಸಿರುಗಟ್ಟಿ ಅಲ್ಲಿಯೇ ಮೃತಪಟ್ಟಿದ್ದಾರೆ.
 
ಬಳಿಕ ಸ್ಥಳೀಯರ ಮಾಹಿತಿಯಿಂದ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮೃತ ದೇಹಗಳನ್ನು ಹೊರ ತೆಗೆದು, ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಚ್‌ಎಎಲ್‌ ಠಾಣೆ ಪೊಲೀಸರು ಹೋಟೆಲ್‌ ವ್ಯವಸ್ಥಾಪಕ ಆಯುಷ್‌ ಗುಪ್ತ ಹಾಗೂ ಕಟ್ಟಡ ನಿರ್ವಾಹಕ ವೆಂಕಟೇಶ್‌ನನ್ನು ಬಂಧಿಸಿದ್ದು, ಕರ್ತವ್ಯ ಲೋಪದ ಆರೋಪದ ಮೇಲೆ ಬಿಬಿಎಂಪಿ ಆರೋಗ್ಯಾಧಿಕಾರಿ ದೇವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಯಚೂರು ಮೂಲದ ರಾಮು, ರವಿ ಮತ್ತು ರಾಮುಲು ಸೇರಿ ನಾಲ್ವರು ಕಾರ್ಮಿಕರು ಮಹದೇವಪುರದ ರೆಯಾಂಡ್‌ ಶಾಲೆ
ಹಿಂಭಾಗದಲ್ಲಿರುವ ಕಾರ್ಮಿಕರ ಶೆಡ್‌ಗಳಲ್ಲಿ ಹತ್ತಾರು ವರ್ಷಗಳಿಂದ ಕುಟುಂಬದ ಜತೆ ವಾಸಿಸುತ್ತಿದ್ದು, ಬಿಬಿಎಂಪಿ ಗುತ್ತಿಗೆದಾರ ಬಳಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
 
ಮಂಗಳವಾರ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗಿರಲಿಲ್ಲ. ನಂತರ ಮ್ಯಾನ್‌ ಹೋಲ್‌ ಸ್ವತ್ಛತೆ ಕೆಲಸ ಇದೆ ಎಂದು ಇಬ್ಬರನ್ನೂ ಕರೆಸಲಾಗಿತ್ತು. ಪ್ರೇಮಾ ಪ್ಯಾರಡೈಸ್‌ ಕಟ್ಟಡ ನಿರ್ವಾಹಕ ವೆಂಕಟೇಶ್‌ ನಾಲ್ವರು ಕಾರ್ಮಿಕರಿಗೆ ಮ್ಯಾನ್‌ಹೋಲ್‌ ಸ್ವತ್ಛಗೊಳಿಸಲು ಸೂಚಿಸಿದ್ದ. ರವಿ ಮತ್ತು ರಾಮು ಸೇರಿ ನಾಲ್ವರು ಕಾರ್ಮಿಕರು ಮಧ್ಯಾಹ್ನ 4 ಗಂಟೆ ಸುಮಾರಿಗೆ ಹೋಟೆಲ್‌ ಯವ್‌ಲೋಕ್‌ಗೆ ಬಂದಿದ್ದಾರೆ.

ಮೊದಲಿಗೆ ರಾಮು 10 ಅಡಿ ಆಳದ ಗುಂಡಿಯೊಳಗೆ ಏಣಿ ಮೂಲಕ ಇಳಿದು ಸ್ವತ್ಛಗೊಳಿಸುತ್ತಿದ್ದು, ಗುಂಡಿಯಲ್ಲಿದ್ದ ರಾಸಾಯನಿಕ ಪದಾರ್ಥದ ವಿಷಾನಿಲದಿಂದ ಉಸಿರು ಗಟ್ಟಿದ್ದಾನೆ. ಆತನನ್ನು ರಕ್ಷಸಿಲು ಹೋದ ರವಿಯೂ ಉಸಿರುಗಟ್ಟಿ ಮೃತನಾಗಿದ್ದಾನೆ.
 
ಇದನ್ನು ಗಮನಿಸಿದ ರಾಮುಲು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೂ ದೂರು ನೀಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗೆ ಅವರು ಮೃತಪಟ್ಟಿದ್ದು, ಬಳಿಕ ಮೃತ ದೇಹಗಳನ್ನು ವೈದೇಹಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ  ಬೌರಿಂಗ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. 

ಅಕ್ರಮ ಅನುಮತಿ: ಪ್ರೇಮಾ ಪ್ಯಾರಾಡೇಸ್‌ನ ನೆಲಮಳಿಗೆಯಲ್ಲಿರುವ ಪಾರ್ಕಿಂಗ್‌ ಸ್ಥಳದಲ್ಲಿ ಯವ್‌ ಲೋಕ್‌ ಎಂಬ ಹೋಟೆಲ್‌ಗೆ ಬಿಬಿಎಂಪಿ ಅಧಿಕಾರಿಗಳು ಕಾನೂನು ಬಾಹಿರವಾಗಿ ಅನುಮತಿ ನೀಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ನಿಯಮದ ಪ್ರಕಾರ ಪಾರ್ಕಿಂಗ್‌ ಸ್ಥಳದಲ್ಲಿ ಹೋಟೆಲ್‌ಗೆ ಅನುಮತಿ ನೀಡುವಂತಿಲ್ಲ. ಅಧಿಕಾರಿಗಳು ಮೊದಲ ಮಹಡಿ ಎಂದು ದಾಖಲೆ ತೋರಿಸಿ ಅನುಮತಿ ನೀಡಿದ್ದಾರೆ. 

Advertisement

ನೆಲಮಾಳಿಗೆಯಾದ್ದರಿಂದ ತ್ಯಾಜ್ಯ ನೀರು ಹೊರಹೋಗಲು ಯಾವುದೇ ಮಾರ್ಗವಿಲ್ಲ. ಹೀಗಾಗಿ ಹೋಟೆಲ್‌ ಮಾಲೀಕ ಅವಿನಾಶ್‌ ಗುಪ್ತ ಪಾರ್ಕಿಂಗ್‌ ಸ್ಥಳದಲ್ಲೇ 10 ಅಡಿ ಆಳದ ಗುಂಡಿ ತೆಗೆಸಿ, ಇದರಲ್ಲಿ ತುಂಬಿಕೊಳ್ಳುವ ತ್ಯಾಜ್ಯನೀರನ್ನು ಪಂಪ್‌ ಮೂಲಕ ಹೊರಕ್ಕೆ ಹಾಕಿಸುತ್ತಾರೆ. ಕಳೆದೆರಡು ದಿನಗಳಿಂದ ಈ ಗುಂಡಿಯಲ್ಲಿ ತ್ಯಾಜ್ಯ ನೀರು ಶೇಖರಣೆಗೊಂಡಿದ್ದು, ದುರ್ವಾಸನೆ ಬರುತ್ತಿತ್ತು. ಹೀಗಾಗಿ ಕಟ್ಟಡ ನಿರ್ವಾಹಕ ವೆಂಕಟೆಶ್‌ಗೆ ಸ್ವತ್ಛತೆಗೆ ಸೂಚಿಸಿದ್ದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್‌ ಅಹ್ಮದ್‌ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ವರ್ಷ ಐದು ಸಾವು ಜ.7ರಂದು ಎಚ್‌ಎಸ್‌ ಆರ್‌ ಲೇಔಟ್‌ ಬಳಿಯ ಬಂಡೆಪಾಳ್ಯದ ಸೋಮಸಂದ್ರಪಾಳ್ಯದ ಎನ್‌.ಡಿ.ಸಫ‌ಲ್‌ ಅಪಾರ್ಟ್‌ಮೆಂಟ್‌ನ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ಸ್ವತ್ಛಗೊಳಿಸುವ ಸರ್ಜಾಪುರ ಮುಖ್ಯರಸ್ತೆಯ ಕೈಗೊಂಡನಹಳ್ಳಿ ನಿವಾಸಿ  ರಾಯಣಸ್ವಾಮಿ (40), ಸೋಮಸಂದ್ರ ಪಾಳ್ಯದ ಶ್ರೀನಿವಾಸ್‌ (38) ಹಾಗೂ ಮಹದೇವ ಗೌಡ (37) ಎಂಬುವರು ಉಸಿರುಗಟ್ಟಿ ಸಾವನ್ನಪ್ಪಿ ದ್ದರು. ಇದೀಗ ಮತ್ತೆ ಮ್ಯಾನ್‌ಹೋಲ್‌ ಸ್ವತ್ಛಗೊಳಿಸಲು ತೆರಳಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಪ್ರಸಕ್ತ ವರ್ಷದಲ್ಲಿ 5 ಕಾರ್ಮಿಕರು ಸಾವನ್ನಪ್ಪಿದ್ದಾರೆ

ಯವಲೋಕ್‌ ಹೋಟೆಲ್‌ನ ತ್ಯಾಜ್ಯ ನೀರು ಸಂಗ್ರಹಣೆಯಾಗಿದ್ದ ಗುಂಡಿ ಸ್ವತ್ಛತೆಗೆ ಹೋಗಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಸಂಬಂಧ ಹೋಟೆಲ್‌ನ ವ್ಯವಸ್ಥಾಪಕ ಆಯುಷ್‌ ಗುಪ್ತ ಮತ್ತು ಕಟ್ಟಡ ನಿರ್ವಾಹಕ ವೆಂಕಟೇಶ್‌ನನ್ನು ಬಂಧಿಸಲಾಗಿದೆ. ಹಾಗೆಯೇ
ಅಕ್ರಮವಾಗಿ ಹೋಟೆಲ್‌ ನಡೆಸಲು ಅನುಮತಿ ನೀಡಿದಕ್ಕೆ ಬಿಬಿಎಂಪಿ ಆರೋಗ್ಯಾಧಿಕಾರಿ ದೇವರಾಜ್‌ ಅವರನ್ನು ವಿಚಾರಣೆಗೊಳ ಪಡಿಸಲಾಗಿದೆ. 
●ಅಬ್ದುಲ್‌ ಅಹ್ಮದ್‌ ಡಿಸಿಪಿ ವೈಟ್‌ಫೀಲ್ಡ್‌ ವಿಭಾಗ

ಮ್ಯಾನ್‌ಹೋಲ್‌ನಲ್ಲಿ ಮೃತಪಟ್ಟವರು
2008-09-ನ.14 ಯಲಹಂಕ ನ್ಯೂಟೌನ್‌ 3 ಸಾವು
2009-10-ಮೇ 9 ಪೀಣ್ಯ 2ನೇ ಹಂತ 3 ಸಾವು
2012-13-ಜುಲೈ 14 ಅರಕರೆ 2 ಸಾವು
2013-14- ಜ.18 ಕೆ.ಪಿ.ಅಗ್ರಹಾರ 2
2014-15-ಆ.30 ಮಹದೇವಪುರ 1 ಸಾವು
2014-15-ಸೆ.24 ನಾಗವಾರ 2 ಸಾವು
2015-16- ಜುಲೈ 5 ಯಲಹಂಕ 2 ಸಾವು
2015-16- ಆ.18 ಜಯಮಹಲ್‌ 2 ಸಾವು
2015-16- ಅ.19 ಗೊರಗುಂಟೆ ಪಾಳ್ಯ 2 ಸಾವು
2016-17-ಮಾ.7 ಕಗ್ಗದಾಸನಪುರ 3 ಸಾವು
ಎಸ್‌ಟಿಪಿಗೆ ಇಳಿದು ಸಾವನ್ನಪ್ಪಿದವರು
2008-09-ಹೆಣ್ಣೂರು ನ.14 2 ಸಾವು
2013-14 ಅ.25 ಪೀಣ್ಯ 2 ಸಾವು
2015-16 ಜಲೈ 5 ಎಲೆಕ್ಟ್ರಾನಿಕ್‌ ಸಿಟಿ 2 ಸಾವು
2016-17 ಅ.18 ಯಶವಂತಪುರ 2 ಸಾವು
2016-17 ನ.18 ವೈಟ್‌ಫಿಲ್ಡ್‌ 1 ಸಾವು

Advertisement

Udayavani is now on Telegram. Click here to join our channel and stay updated with the latest news.

Next