Advertisement

Health Department ಮುದೂರು ಭಾಗದಲ್ಲಿ ಮಂಗಗಳ ಸಾವು; ಕಾಯಿಲೆ ಭೀತಿ

12:38 AM Nov 23, 2023 | Team Udayavani |

ಕುಂದಾಪುರ: ಜಡ್ಕಲ್‌ ಗ್ರಾಮದ ಮುದೂರಿನ ಹಿಂಡಗಾನ್‌ನಲ್ಲಿ ಮರಿ ಸಹಿತ 3 ಮಂಗಗಳು ಸಾವನ್ನಪ್ಪಿವೆ. ಗಡಿ ಜಿಲ್ಲೆಯಾದ ಉತ್ತರ ಕನ್ನಡದಲ್ಲೂ ಮಂಗಗಳ ಸಾವಿನ ವರದಿಯಾಗಿದ್ದು, ಉಡುಪಿ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಮಂಗನಕಾಯಿಲೆ ಆತಂಕ ಆವರಿಸಿದೆ. ಆದರೆ ಈ ಬಗ್ಗೆ ಆತಂಕ ಬೇಡ, ಒಂದಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ಅವಶ್ಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಪ್ರತೀ ವರ್ಷ ಕುಂದಾಪುರ, ಬೈಂದೂರು, ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳು, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾಲೂಕುಗಳ ಕಾಡಂಚಿನ ಊರುಗಳಲ್ಲಿ ಮಂಗನ ಕಾಯಿಲೆ ಭೀತಿ ಆವರಿಸುತ್ತದೆ. ಮಳೆ ಕಡಿಮೆಯಾದ ಕಾರಣ ಈ ವರ್ಷ ಬೇಗನೇ ಸಮಸ್ಯೆ ತಲೆದೋರಿದೆ.

ಆತಂಕ ಏಕೆ?
ಮಂಗಳ ಮೈಮೇಲಿನ ಉಣುಗುಗಳು ಈ ಕಾಯಿಲೆಯ ವಾಹಕಗಳು. ಮೇಯಲು ಕಾಡಿಗೆ ಹೋಗುವ ಜಾನುವಾರುಗಳು, ಕಟ್ಟಿಗೆ, ಕಾಡುತ್ಪತ್ತಿ ಸಂಗ್ರಹಕ್ಕಾಗಿ ಕಾಡಿಗೆ ಹೋಗುವ ಗ್ರಾಮೀಣ ಜನರಿಗೆ ಇಂತಹ
ಉಣುಗು ಕಡಿತದಿಂದ ಕಾಯಿಲೆ ಪಸರಿಸುತ್ತದೆ. ಲಕ್ಷಣ ಕಾಣಿಸಿಕೊಂಡ ಆರಂಭದಲ್ಲಿಯೇ ವೈದ್ಯರಲ್ಲಿಗೆ ಬಂದರೆ ಯಾವುದೇ ತೊಂದರೆಯಿಲ್ಲ.

2019ರ ಬಳಿಕ ಇಲ್ಲ
ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಕಾಣಿಸಿಕೊಂಡರೂ ಉಡುಪಿ ಜಿಲ್ಲೆಯಲ್ಲಿ 2019ರಿಂದ ಕಾಣಿಸಿ ಕೊಂಡಿಲ್ಲ. ಮೃತ ಮಂಗಗಳಲ್ಲೂ ಈ ಸೋಂಕು ಪತ್ತೆಯಾಗಿರಲಿಲ್ಲ.

ಜಾಗೃತಿ
ಆರೋಗ್ಯ ಇಲಾಖೆಯಿಂದ ಮಂಗನ ಕಾಯಿಲೆ ಕುರಿತು ಎಚ್ಚರಿಕೆ ನೀಡುವ ಕರಪತ್ರಗಳನ್ನು ಕಾಡಂಚಿನ ಮನೆಗಳಿಗೆ ಹಂಚಲಾಗುತ್ತಿದೆ. ಆರೋಗ್ಯ ಶಿಬಿರ, ಇನ್ನಿತರ ಕಾರ್ಯಕ್ರಮಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಕಾಡಿಗೆ ಹೋಗುವ ವರು ಡಿಎಂಪಿ ತೈಲ ಹಚ್ಚಿಕೊಂಡು ಹೋಗುವಂತೆ ಹೇಳಲಾಗುತ್ತಿದೆ. ಆತಂಕ ಇರುವ ಗ್ರಾಮಗಳಲ್ಲಿ ಯಾರಿಗಾದರೂ ಜ್ವರ ಬಂದಿದ್ದರೆ ಸ್ಥಳೀಯ ಆರೋಗ್ಯ ಕೇಂದ್ರದವರು ನಿಗಾ ವಹಿಸುತ್ತಿದ್ದಾರೆ.

Advertisement

ಮುನ್ನೆಚ್ಚರಿಕೆ ಕ್ರಮಗಳೇನು?
– ಮಂಗಗಳ ಸಾವು ಸಂಭವಿಸಿದರೆತತ್‌ಕ್ಷಣ ಸ್ಥಳೀಯ ಗ್ರಾ.ಪಂ., ಆರೋಗ್ಯ ಇಲಾಖೆ, ಪಶು ವೈದ್ಯರು ಅಥವಾ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ.
– ಜ್ವರ ಇದ್ದಲ್ಲಿ ನಿರ್ಲಕ್ಷé ತೋರದೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಅಥವಾ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ.
-ಮಂಗಗಳಿಗೆ ಕಚ್ಚಿದ ಉಣುಗು ಮನುಷ್ಯರಿಗೆ ಕಚ್ಚಿದಾಗ ಈ ಕಾಯಿಲೆ ಬರುವುದರಿಂದ ಕಾಡಿಗೆ ಹೋಗುವಾಗ ಡಿಎಂಪಿ ಎನ್ನುವ ಎಣ್ಣೆ ಹಚ್ಚಿಕೊಂಡು ಹೋಗುವುದು ಉತ್ತಮ. ಜಾನುವಾರುಗಳನ್ನು ಮೇಯಲು ಬಿಡುವಾಗಲೂ ಎಚ್ಚರಿಕೆ ಅಗತ್ಯ.
-ಯಾವುದೇ ಕಾರಣಕ್ಕೂ ಮಂಗಗಳನ್ನು ಕೊಲ್ಲದಿರಿ. ಅದು ಅನಾವಶ್ಯಕ ಗೊಂದಲ ಸೃಷ್ಟಿಸುತ್ತದೆ.

ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ, ಜಾಗೃತಿ ಕೈಗೊಳ್ಳಲಾಗಿದೆ. ಜನರಲ್ಲಿ ಯಾವುದೇ ಭಯ ಬೇಡ. ಕಾಡಿಗೆ ಹೋಗುವ ಜನರು, ಜಾನುವಾರುಗಳ ಬಗ್ಗೆ ಮುನ್ನೆಚ್ಚರಿಕೆ ಇರಲಿ. ಜ್ವರ ಬಂದಲ್ಲಿ ನಿಗಾ ವಹಿಸಿ.
– ಡಾ| ಪ್ರೇಮಾನಂದ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next