ಪಡುಬಿದ್ರಿ: ಕಾಮಿನಿ ನದಿ ನೀರು ಕಲುಷಿತಗೊಂಡು ಸಂಭವಿಸಿರುವ ಸಹಸ್ರಾರು ಮೀನುಗಳ ಸಾವು ಮತ್ತು ಸಾರ್ವಜನಿಕರ ಬಾವಿ ನೀರು ಹಾಳಾಗಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದೊಂದಿಗೆ ಹೆಜಮಾಡಿ ಮುಟ್ಟಳಿವೆ ಪ್ರದೇಶಕ್ಕೆ ಸೋಮವಾರದಂದು ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿದರು.
ಮೀನುಗಾರಿಕಾ ಇಲಾಖಾ ಉಪ ನಿರ್ದೇಶಕ ಪಾರ್ಶ್ವನಾಥ್, ಸಹಾಯಕ ನಿರ್ದೇಶಕ ಕಿರಣ್, ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ಲಕ್ಷಿಕಾಂತ್ ಮತ್ತು ಸಹಾಯಕ ಅಧಿಕಾರಿ ಪ್ರಮೀಳಾ, ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರದ ಅಧಿಕಾರಿ ವೀಣಾ ಮುಟ್ಟಳಿವೆಗೆ ಭೇಟಿ ನೀಡಿದ ಅಧಿಕಾರಿಗಳಾಗಿದ್ದಾರೆ.
ಸ್ಥಳೀಯ ಹೆಜಮಾಡಿ ಗ್ರಾ. ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಹಾಗೂ ಸ್ಥಳೀಯ ಮೀನುಗಾರ ಕೃಷ್ಣ ಕೋಟ್ಯಾನ್‌ರೊಂದಿಗೆ ಅಭಿಪ್ರಾಯಗಳನ್ನು ಈ ಅಧಿಕಾರಿಗಳು ಸಂಗ್ರಹಿಸಿದರು. ಗ್ರಾ. ಪಂ. ಉಪಾಧ್ಯಕ್ಷ ಸುಧಾಕರ್ ಮಾತನಾಡಿ, ಪ್ರಕೃತಿಗೆ ವಿರುದ್ಧವಾಗಿ ಮುಟ್ಟಳಿವೆಯಲ್ಲಿ ನಿರ್ಮಿಸಲಾಗಿರುವ 80 ಲಕ್ಷ ರೂ. ಗಳ ಸೇತುವೆ ಹಾಗೂ ಸಮುದ್ರ ಮತ್ತು ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ರಸ್ತೆಗಳಿಂದಾಗಿ ಕಾಮಿನಿ ನದಿ ನೀರು ಒಂದು ಬದಿಯಲ್ಲಿ ಹರಿಯದೇ ಉಳಿಯುವಂತಾಯಿತು. ಹಾಗಾಗಿ ಅಲ್ಲಿ ಮೀನುಗಳಿಗೆ ಆಮ್ಲಜನಕವು ಕಡಿಮೆಯಾಗಿ ಸತ್ತಿರುವ ಸಂಭವವೂ ಇದೆ ಎಂದರು. ಆದರೆ ಮೀನುಗಾರ ಕೃಷ್ಣ ಕೋಟ್ಯಾನ್ ಇದು ಯುಪಿಸಿಎಲ್ ಕಲ್ಲಿದ್ದಲು ನೀರಿನ ಪರಿಣಾಮವೆಂದಿದ್ದಾರೆ.
ಸಮುದ್ರ ಸೇರುತ್ತಿದ್ದ ಅಳಿವೆ ನೀರು, ಮುಟ್ಟಳಿವೆ ಪ್ರದೇಶದಲ್ಲಿ ಶೇಖರಣೆಗೊಂಡು ಪಾಚಿ ಸಹಿತವಾಗಿರುವ ಕಾಮಿನಿ ನದಿ ನೀರು, ಮೀನುಗಳ ಸಾವಿಗೆ ಕಾರಣವಾಗಿರುವ ಕಪ್ಪು ವರ್ಣಕ್ಕೆ ತಿರುಗಿರುವ ನದಿ ನೀರಿನ ಸ್ಯಾಂಪಲ್‌ಗಳನ್ನು ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಕಚೇರಿಗೆ ಮತ್ತು ಸತ್ತ ಮೀನುಗಳ ಸಹಿತ ವಿವಿದೆಡೆಗಳ ನೀರಿನ ಸ್ಯಾಂಪಲ್‌ಗಳನ್ನೂ ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರಗಳ ಪರಿಶೀಲನೆಗಾಗಿ ಈ ಅಧಿಕಾರಿಗಳು ಒಯ್ದಿದ್ದಾರೆ.
ಮೀನುಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಪಾರ್ಶ್ವನಾಥ್ ಮಾತನಾಡಿ, ಸಮಸ್ಯಯ ಬಗೆಗೆ ಅರಿವಾಗಿದೆ. ಹಾಗಾಗಿ ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರದ ಅಧಿಕಾರಿ ಹಾಗೂ ಪರಿಸರ ಇಲಾಖಾ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲಿಸಲಾಗುವುದೆಂದರು.
ಪರಿಸರ ಇಲಾಖಾ ಅಧಿಕಾರಿ ಲಕ್ಷಿ$¾àಕಾಂತ್ ಮತ್ತಿತರರು ಈಚೆಗಷ್ಟೇ ಮಳೆ ನೀರಿನ ಹರಿವಿಗಾಗಿ ಮಣ್ಣನ್ನು ತೆರವುಗೊಳಿಸಲಾಗಿರುವ ಎರ್ಮಾಳು ಕಲ್ಸಂಕ ಪ್ರದೇಶ, ಯುಪಿಸಿಎಲ್ ಸ್ಥಾವರದೊಳಗಿನ ಕಲ್ಲಿದ್ದಲು ಶೇಖರಣಾ ಯಾರ್ಡ್,
ಎರ್ಮಾಳಿನ ಪಂಪಿಂಗ್ ಸ್ಟೇಶನ್‌ಗಳಿಗೆ ತೆರಳಿ ಅಲ್ಲಿನ ನೀರಿನ ಸ್ಯಾಂಪಲ್‌ಗಳನ್ನು ಹಾಗೂ ಹಾಳಾಗಿರುವ ಬಾವಿ ನೀರಿನ ಸ್ಯಾಂಪಲ್‌ಗಳನ್ನು ಪರಿಶೀಲನೆಗಾಗಿ ತಾವು ಒಯ್ದಿರುವುದಾಗಿ ತಿಳಿಸಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ಲಕ್ಷಿಕಾಂತ್ ಮಾತನಾಡಿ, ಯುಪಿಸಿಎಲ್ ಕಲ್ಲಿದ್ದಲು ಶೇಖರಣೆಯ ಯಾರ್ಡ್‌ನಿಂದ ಹೊರ ಬಿಡಲಾಗುತ್ತಿರುವ ನೀರಿನ ಮೂಲಕ ಕಲ್ಲಿದ್ದಲು ಸಮುದ್ರವನ್ನು ಸೇರುತ್ತಿದ್ದು ಅದರಿಂದಾಗಿ ಮೀನುಗಳು ಸಾಯುವಂತಾದವು ಎಂಬುದನ್ನು ಸಾರ್ವಜನಿಕರು ದೂರಿಕೊಂಡಿದ್ದಾರೆ.
ಪರಿಶೀಲನೆಗೆ ನೀರಿನ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದೇವೆ. ಇವುಗಳನ್ನು ಸುರತ್ಕಲ್‌ನ ಎನ್‌ಐಟಿಕೆಗೆ ರವಾನಿಸಲಾಗುವುದು. ಅಲ್ಲಿಂದ ಪರಿಶೀಲನಾ ವರದಿ ಬಂದ ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದರು.