ಬೆಂಗಳೂರು: ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟ ಘಟನೆ ರಾಜಾಜಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ರಾಜಾಜಿನಗರದ 3ನೇ ಬ್ಲಾಕ್ ನಿವಾಸಿ ಮಹೇಂದ್ರ (19) ಮೃತ ವಿದ್ಯಾರ್ಥಿ. ಮಂಗಳವಾರ ರಾತ್ರಿ 9.30ರ ಸುಮಾರಿಗೆ ದುರ್ಘಟನೆ ನಡೆದಿದ್ದು, ಕೃತ್ಯವೆಸಗಿದ ಅಪರಿಚಿತ ವಾಹನ ಚಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ರಾಜಾಜಿನಗರದ 3ನೇ ಬ್ಲಾಕ್ ನಿವಾಸಿ, ನಿವೃತ್ತ ಸರ್ಕಾರಿ ಅಧಿಕಾರಿ ನಾರಾಯಣಪ್ಪ ಮತ್ತು ಶಶಿಕಲಾ ದಂಪತಿಯ ಒಬ್ಬನೇ ಪುತ್ರ ಮಹೇಂದ್ರ, ರಾಜಾನುಕುಂಟೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಮಂಗಳವಾರ ಸಂಜೆ ಕಾರ್ಯನಿಮಿತ್ತ ಮಹಾಲಕ್ಷಿ ಲೇಔಟ್‌ಗೆ ಹೋಗಿದ್ದರು.
ರಾತ್ರಿ 9.15ರ ಸುಮಾರಿಗೆ ರಾಜಾಜಿನಗರದ 3ನೇ ಬ್ಲಾಕ್‌ನಲ್ಲಿರುವ ತಮ್ಮ ಮನೆಗೆ ಕೆಟಿಎಂ ಬೈಕ್‌ನಲ್ಲಿ ಹೋಗುವಾಗ ಬಸವೇಶ್ವರ ಕಾಲೇಜಿನ ಮುಂಭಾಗ ವೇಗವಾಗಿ ಎದುರಿಗೆ ಬಂದ ಕಾರೊಂದು ಮಹೇಂದ್ರಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಮಹೇಂದ್ರ ಕಳೆಗೆ ಬಿದ್ದಿದ್ದಾರೆ.
ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು. ಮೃತ ಮಹೇಂದ್ರ ತಂದೆ ನಾರಾಯಣಪ್ಪ 10 ತಿಂಗಳ ಹಿಂದಷ್ಟೇ ಮೃತಪಟ್ಟಿದ್ದು, ತಾಯಿ ಶಶಿಕಲಾ ಜತೆ ರಾಜಾಜಿನಗರದಲ್ಲಿ ವಾಸವಾಗಿದ್ದರು ಎಂದು ಸಂಚಾರ ಪೊಲೀಸರು ಹೇಳಿದರು.
ಟೆಕ್ಕಿ ಸಾವು: ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಸಾಫ್ಟ್ವೇರ್ ಇಂಜಿನಿಯರ್ ಮೇಲೆ ವಾಹನ ಹರಿದು, ಮಧ್ಯಪ್ರದೇಶ ಮೂಲದ ವಾಚಸ್ವತಿ (32) ಮೃತಪಟ್ಟಿರುವ ಘಟನೆ ಸಿಂಗಸಂದ್ರದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ವಾಚಸ್ಪತಿ, ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಸಿಂಗಸಂದ್ರ ಮೇಲುಸೇತುವೆ ರಸ್ತೆಯ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಲಭಾಗಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಅವರ ಹಿಂದಿನಿಂದ ವೇಗವಾಗಿ ಬರುತ್ತಿದ್ದ ವಾಹನ ಅವರ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು. ಹುಳಿಮಾವು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.